ಯಲ್ಲಾಪುರ: “ಈ ಹಿಂದೆ ಶಾಸಕನಾಗಿದ್ದಾಗ ಕ್ಷೇತ್ರದಲ್ಲಿ ಮಾಡಿದ ಕೆಲಸಗಳನ್ನು ಜನ ಇನ್ನೂ ಮರೆತಿಲ್ಲ. ಹೀಗಾಗಿ ನನಗೆ ಬೆಂಬಲ ಸೂಚಿಸಿದ್ದಾರೆ. ಜನ ಈಗ ದಬ್ಬಾಳಿಕೆಯ ಆಳ್ವಿಕೆಯಿಂದ ಬೇಸತ್ತಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಬದಲಾವಣೆ ಅಲೆ ಎದ್ದಿದೆ” ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ (Karnataka Election) ವಿ.ಎಸ್. ಪಾಟೀಲ್ ಹೇಳಿದರು.
ಶನಿವಾರ ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನನ್ನ ಕಾಲಾವಧಿಯಲ್ಲಿ ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆ ಇತ್ತು. ಈಗ ಜನ ದಬ್ಬಾಳಿಕೆಯ್ನು ಅನುಭವಿಸಬೇಕಾಗಿದೆ ಎಂದು ಹೇಳುತ್ತಿದ್ದಾರೆ. ಪ್ರತಿ ವಿಚಾರಕ್ಕೂ ಪೊಲೀಸ್ ಕಚೇರಿಯ ಮೆಟ್ಟಿಲೇರುವ ಪರಿಸ್ಥಿತಿ ಎದುರಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಸರಿಯಾಗಿ ಆಗುತ್ತಿಲ್ಲ ಎನ್ನುವ ಮಾತುಗಳಿವೆ. ಬಹಳಷ್ಟು ಮತದಾರರು ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವೆಲ್ಲವುಗಳು ಬಿಜೆಪಿಯ ದುರಾಡಳಿತಕ್ಕೆ ಸಾಕ್ಷಿಯಾಗಿದೆ” ಎಂದರು.
ಇದನ್ನೂ ಓದಿ: Karnataka Election: ಅಂಕೋಲಾ-ಕಾರವಾರ ಕ್ಷೇತ್ರಕ್ಕೆ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ
“ಆಡಳಿತದಲ್ಲಿ ಬಿಜೆಪಿ ವಿರುದ್ಧದ ಅಲೆ ಒಂದೆಡೆಯಾದರೆ, ಶಾಸಕನಾಗಿದ್ದಾಗ ನಾನು ಮಾಡಿದಂತಹ ಕಾರ್ಯಗಳು ನನ್ನ ಗೆಲುವಿಗೆ ಪ್ರಮುಖ ಕಾರಣವಾಗಲಿದೆ. ಸಂಪೂರ್ಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಸೃಷ್ಟಿಯಾಗಿದೆ. ನಾನು ಆಯ್ಕೆಯಾದಲ್ಲಿ ಈ ಕ್ಷೇತ್ರವನ್ನು ಗುಡ್ಡಗಾಡು ಎಂದು ಕೇಂದ್ರದಿಂದ ಘೋಷಿಸಿಕೊಂಡು ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಯೋಜನೆಯಿದೆ” ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, “ಸಂವಿಧಾನ ಹಾಗೂ ಸಮಾಜ ವಿರೋಧಿ ಕಾರ್ಯಗಳನ್ನು ಮಾಡುವ ಬಣಗಳನ್ನು ನಿಷೇಧಿಸುವ ಉದ್ದೇಶ ಇದೆಯೇ ಹೊರತು ಹಿಂದೂ ವಿರೋಧಿ ಕಾರ್ಯಗಳನ್ನು ನಮ್ಮ ಸರ್ಕಾರ ಮಾಡುವುದಿಲ್ಲ. ಜನವಿರೋಧಿ ಕಾರ್ಯಗಳು ಬಿಜೆಪಿ ವತಿಯಿಂದ ಆಗುತ್ತಿದೆ. ಹೀಗಾಗಿ ಜನ ಕಾಂಗ್ರೆಸ್ ಅಧಿಕಾರವನ್ನು ಬಯಸಿದ್ದಾರೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಇನ್ನೂವರೆಗೂ ಮಾಡಿಲ್ಲ. ಇದರಿಂದ ಜನರ ಜೀವನ ಮಟ್ಟದ ಪರಿಸ್ಥಿತಿ ಜನರ ಮುಂದೆ ಬರುತ್ತೆ ಎನ್ನುವ ಹೆದರಿಕೆ ಕೇಂದ್ರಕ್ಕೆ ಇದೆ” ಎಂದರು.
ಇದನ್ನೂ ಓದಿ: Karnataka Election: ಮತದಾನದ 48 ಗಂಟೆ ಮುನ್ನ ಚುನಾವಣಾ ಚರ್ಚೆ, ಸಂವಾದ, ಸಮೀಕ್ಷೆಗಳಿಗೆ ನಿರ್ಬಂಧ
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀನಿವಾಸ ಭಟ್ ಧಾತ್ರಿ, ಮಯ್ಯಾಜಿರಾವ್, ಉಲ್ಲಾಸ್ ಶಾನಭಾಗ್, ಜಿ.ಪಂ. ಮಾಜಿ ಸದಸ್ಯ ರಾಘವೇಂದ್ರ ಭಟ್, ನಗರ ಉಸ್ತುವಾರಿ ರವಿಚಂದ್ರ ನಾಯ್ಕ, ವಿ.ಎಸ್. ಭಟ್, ಅನಿಲ ಮರಾಠಿ, ಅಬ್ದುಲ್ ಬ್ಯಾರಿ ಮತ್ತಿತರರಿದ್ದರು.