Site icon Vistara News

Karnataka election 2023: ಶಾಸಕ ಡಿ.ಎಸ್. ಹೂಲಗೇರಿ ಬಳಿ ಸಹಾಯ ಕೇಳುವ ದುಸ್ಥಿತಿ ನನಗೆ ಬಂದಿಲ್ಲ: ವಜ್ಜಲ್

lingasugur assembly constituency

lingasugur assembly constituency

ಲಿಂಗಸುಗೂರು: ಶಾಸಕ ಡಿ.ಎಸ್. ಹೂಲಗೇರಿ (D S Hoolageri) ಬಳಿ ಸಹಾಯ ಕೇಳುವ ದುಸ್ಥಿತಿ ನನಗೆ ಮತ್ತು ನನ್ನ ಕುಟುಂಬಕ್ಕೆ ಬಂದಿಲ್ಲ. ಒಂದು ವೇಳೆ ಕೇಳುವ ಸ್ಥಿತಿ ಬಂದರೆ ಅದು ಕ್ಷೇತ್ರದ ಮತದಾರರ ಬಳಿ ಸಹಾಯ ಕೇಳುತ್ತೇನೆಯೇ ವಿನಃ, ಹೂಲಗೇರಿ ಬಳಿ ಅಲ್ಲ ಎಂದು ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ (manappa d vajjal) ತಿರುಗೇಟು ನೀಡಿದರು (Karnataka election 2023).

ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್. ಹೂಲಗೇರಿ (D S Hoolageri) ಅವರು ತಮ್ಮ ಚುನಾವಣಾ ಪ್ರಚಾರ ಸಭೆಯಲ್ಲಿ ಮಾನಪ್ಪ ವಜ್ಜಲ್‌ರಿಗೆ ನಾನು ಮತ್ತು ಇಲಕಲ್‌ನ ಯಂಕಪ್ಪ ಬಂಡಿಯವರು ಲಕ್ಷಾಂತರ ರೂಪಾಯಿ ಮತ್ತು ಟಿಪ್ಪರ್‌ಗಳನ್ನು ನೀಡಿ ಸಹಾಯ ಮಾಡಿರುವೆ ಎಂದು ಹೇಳಿದ್ದಾರೆ. ಆದರೆ ಡಿ.ಎಸ್.ಹೂಲಗೇರಿ (D S Hoolageri) ಬಳಿ ಸಹಾಯ ಕೇಳುವಂತಹ ಕೆಟ್ಟ ಪರಿಸ್ಥಿತಿ ಬಂದಿಲ್ಲ, ಒಂದು ವೇಳೆ ನನಗೆ ಸಹಾಯ ಮಾಡಿದ್ದರೆ ದಾಖಲೆ ಬಿಡುಗಡೆ ಮಾಡಬೇಕು. ಇಲ್ಲಿಯವರೆಗೂ ನಾನು ನಿಮಗೆ ಅಥವಾ ನೀವು ನನಗೆ ಒಂದೇ ಒಂದು ಫೋನ್ ಕರೆ ಬಂದಿಲ್ಲ, ಅದನ್ನು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ. ಹೇಳಿಕೆಗಳನ್ನು ಸಾಬೀತು ಮಾಡಬೇಕು ಇಲ್ಲವೆಂದರೆ ಕ್ಷಮೆ ಕೇಳಬೇಕು. ಇಲ್ಲವಾದರೆ ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತದೆ. ಮಾತನಾಡುವಾಗ ಎಚ್ಚರಿಕೆಯಿಂದ ಮತ್ತು ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು ಎಂದು ಹೂಲಗೇರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Election: ಧರ್ಮಾಧಾರಿತ ಮೀಸಲಾತಿ ತಪ್ಪು ಎಂದ ಶೋಭಾ ಕರಂದ್ಲಾಜೆ; ಇದು ಅಜ್ಞಾನದ ಮಾತು ಎಂದ ದಿನೇಶ್‌ ಗುಂಡೂರಾವ್

ಡಿ.ಎಸ್. ಹೂಲಗೇರಿ ಅವರಿಗೆ ಈಗಲೇ ಭೀತಿ ಶುರುವಾಗಿದೆ. ಅದರಿಂದ ದೃತಿಗೆಟ್ಟು ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಿಮ್ಮ ಶ್ರೀಮಂತಿಕೆ ಹೇಗೆ ಆಗಿದೆ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ನಿಮ್ಮ ಶ್ರೀಮಂತಿಕೆ ನಿಮ್ಮ ಮನೆಯಲ್ಲಿಟ್ಟುಕೊಳ್ಳಿ ಬೇರೆಯವರ ಬಗ್ಗೆ ಅಪಹಾಸ್ಯ ಮಾಡುವುದನ್ನು ಬಿಡುಬೇಕು ಎಂದು ಕುಟಕಿದರು.

ಈಗಾಗಲೇ ನಾನು ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರೊಡಗೂಡಿ ಕ್ಷೇತ್ರವ್ಯಾಪಿ ಸಂಚಾರ ಮಾಡುತ್ತಿದ್ದೇವೆ. ಕ್ಷೇತ್ರದಲ್ಲಿ ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಹವಾ ಸೃಷ್ಟಿಯಾಗಿದೆ. ಬಿಜೆಪಿ ಪರ ಜನರು ಒಲವು ತೋರುತ್ತಿದ್ದಾರೆ. ಗೆಲುವು ನಿಶ್ಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏ. 30ರಂದು ಲಿಂಗಸುಗೂರಿಗೆ ಜೆ.ಪಿ.ನಡ್ಡಾ

ಏಪ್ರಿಲ್ 30ರಂದು ಲಿಂಗಸುಗೂರು ಪಟ್ಟಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಲಿದ್ದಾರೆ. ಅವರು ಅಂದು ಬೆಳಗ್ಗೆ 11 ಗಂಟೆಗೆ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕ್ಷೇತ್ರದಲ್ಲಿನ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶ ಯಶಸ್ವಿಗೊಳಿಸುವಂತೆ ಮಾನಪ್ಪ ವಜ್ಜಲ್ ಮನವಿ ಮಾಡಿದರು.

ಇದನ್ನೂ ಓದಿ: Muslim quota issue : ಮುಸ್ಲಿಂ ಮೀಸಲು ಬಗ್ಗೆ ಮೇ 9ರವರೆಗೆ ಯಾವುದೇ ನಿರ್ಧಾರ ಇಲ್ಲ ಎಂದ ಸಿಎಂ ಬೊಮ್ಮಾಯಿ

ಮೇ 2ಕ್ಕೆ ಸಿಂಧನೂರಿಗೆ ಮೋದಿ

ಮೇ 2ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಿಂಧನೂರು ಪಟ್ಟಣಕ್ಕೆ ಆಗಮಿಸಲಿದ್ದಾರೆ. ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನು ಒಳಗೊಂಡು ಸಿಂಧನೂರಿನಲ್ಲಿ ಪ್ರಧಾನಮಂತ್ರಿಗಳ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಉಮೇಶ ಸಜ್ಜನ್ ತಿಳಿಸಿದರು.

ಈ ವೇಳೆ ಕ್ಷೇತ್ರದ ಉಸ್ತುವಾರಿ ಮಲ್ಲಾರೆಡ್ಡಿ, ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಗಿರಿಮಲ್ಲನಗೌಡ ಕರಡಕಲ್, ಹುಲ್ಲೇಶ ಸಾಹುಕಾರ, ಫಕೀರಪ್ಪ ಕುರಿ ಹಾಗೂ ಇನ್ನಿತರರಿದ್ದರು.

Exit mobile version