ಬೆಂಗಳೂರು: ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಯ ಅಧಿಸೂಚನೆ ಏಪ್ರಿಲ್ 13ರಂದು ಪ್ರಕಟವಾಗಿದ್ದು, ಈ ಮೂಲಕ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯೂ ಆರಂಭಗೊಂಡಿದೆ. ಮೊದಲ ದಿನವೇ 221 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸುವ ಮೂಲಕ ಕಣ ಪ್ರವೇಶದ ಉತ್ಸಾಹ ತೋರಿದ್ದಾರೆ. ನಾಮಪತ್ರ ಸಲ್ಲಿಸಿದವರಲ್ಲಿ 27 ಮಂದಿ ಬಿಜೆಪಿಯವರಾದರೆ, 26 ಮಂದಿ ಕಾಂಗ್ರೆಸ್‌ನವರು. ಜೆಡಿಎಸ್‌ನ 12 ಮತ್ತು ಆಮ್ ಆದ್ಮಿ ಪಾರ್ಟಿಯ 10 ಮಂದಿ ಕಣಕ್ಕಿಳಿದಿದ್ದಾರೆ. 45 ಮಂದಿ ಪಕ್ಷೇತರರೂ ಅರ್ಜಿ ಸಲ್ಲಿಸಿದ್ದಾರೆ.
ಏಪ್ರಿಲ್ 20ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಲ್ಲಿಸಬಹುದು. ಏಪ್ರಿಲ್ 24ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಕಣದ ಚಿತ್ರಣ ದೊರೆಯಲಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, 13ರಂದು ಮತ ಎಣಿಕೆ ನಡೆಯಲಿದೆ.
ನಾಮಪತ್ರ ಸಲ್ಲಿಸಿದ ಪ್ರಮುಖರು
ಗೋಕಾಕ ವಿಧಾನಸಭಾ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿ, ಕಡೂರು ಬಿಜೆಪಿ ಅಭ್ಯರ್ಥಿಯಾಗಿ ಬೆಳ್ಳಿ ಪ್ರಕಾಶ್ ಮೊದಲ ದಿನವೇ ನಾಮಪತ್ರ ಸಲ್ಲಿಸಿದರು. ಸಚಿವ ಎಸ್.ಟಿ.ಸೋಮಶೇಖರ್ ಅವರು ಯಶವಂತಪುರದಿಂದ ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸುವ ಹೊತ್ತಿನಲ್ಲಿ ಪತ್ನಿ ರಾಧಾ, ಪುತ್ರ ನಿಶಾಂತ್, ಸೂಚಕ ಅನಿಲ್ ಚೆಳಗೆರೆ ಮತ್ತು ರಂಗರಾಜ್ ಜೊತೆಗಿದ್ದರು.
ಸಚಿವ ಸಿ.ಸಿ ಪಾಟೀಲ್ ನರಗುಂದ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದರೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಬೀಳಗಿಯಲ್ಲಿ ಸಾಂಕೇತಿಕವಾಗಿ ಗುರುವಾರ ನಾಮಪತ್ರ ಸಲ್ಲಿಸಿದರು.
ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ಗುಂಡ್ಲುಪೇಟೆಯಲ್ಲಿ ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದರೆ, ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಂಗಾಬಿಕೆ ಮಲ್ಲಿಕಾರ್ಜುನ್ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಚಿಕ್ಕಪೇಟೆಯಲ್ಲಿ ಕೆಜಿಎಫ್ ಅವರ ಎರಡನೇ ಪತ್ನಿ ಪಕ್ಷೇತರರಾಗಿ ಕಣಕ್ಕೆ ಇಳಿದರು.
ಕೋಲಾರದ ಮಾಲೂರು ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಹೂಡಿ ವಿಜಯ್ ಕುಮಾರ್ ಕಣ ಪ್ರವೇಶಕ್ಕೆ ಅರ್ಜಿ ಹಾಕಿದರು. ಮಾಜಿ ಸಚಿವ ಬಿಆರ್ ಯಾವಗಲ್ ಗದಗ ಜಿಲ್ಲೆಯ ನರಗುಂದ ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ 9 ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆಯಾಗಿದ್ದು ಮದ್ದೂರಿನಿಂದ ಮಂಜುನಾಥ ಜಿ.ಬಿ ಹಾಗೂ ಪ್ರಕಾಶ್.ಸಿ ಪಕ್ಷೇತರ ಅಭ್ಯರ್ಥಿಗಳಾಗಿ, ಮೇಲುಕೋಟೆ ಕ್ಷೇತ್ರದಿಂದ ಪಿ.ವಿ.ಸುಂದ್ರಮ್ಮ, ಸರ್ವೋದಯ ಕರ್ನಾಟಕ ಪಕ್ಷದಿಂದ ಸುನಿತಾ ಪುಟ್ಟಣ್ಣಯ್ಯ ಕಣಕ್ಕೆ ಇಳಿದಿದ್ದಾರೆ.
ನಾಗಮಂಗಲ ಕ್ಷೇತ್ರದ ಯೋಗೇಶ್ ಪಕ್ಷೇತರರಾಗಿ, ಜಿ.ಎಂ.ರಮೇಶ್ ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ, ಕೆ.ಆರ್. ಪೇಟೆಯಲ್ಲಿ ಕಿಶೋರ್ ಎ.ಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಒಂದೊಂದು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಜೊತೆ ಹೋಗಿ ನಾಮಪತ್ರ ನೀಡಿದರು. ಮೈಸೂರು ಜಿಲ್ಲೆಯಲ್ಲಿ 16 ನಾಮಪತ್ರ ಸಲ್ಲಿಕೆಯಾಗಿದೆ. ಕೃಷ್ಣರಾಜ ಕ್ಷೇತ್ರದಿಂದ ಎಸ್‌ಯುಸಿಐಸಿ ಅಭ್ಯರ್ಥಿಯಾಗಿ ಪಿ.ಎ.ಸಂಧ್ಯಾ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿಯಿಂದ ಸೋಮಸುಂದರ್ ಕೆ.ಎಸ್., ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಸುಮಲತಾ ಎಸ್., ನರಸಿಂಹರಾಜ ಕ್ಷೇತ್ರದಿಂದ ಎಸ್‌ಡಿಪಿಐಯಿಂದ ಅಬ್ದುಲ್ ಮಜೀದ್ ಕೆ.ಎಚ್., ಆಮ್ ಆದ್ಮ ಪಕ್ಷ (ಆಪ್)ದಿಂದ ಧರ್ಮಶ್ರೀ, ಕರ್ನಾಟಕ ರಾಷ್ಟ್ರಸಮಿತಿ ಪಕ್ಷದಿಂದ ಸುಂದರ್ ಪ್ರೇಮ್‌ಕುಮಾರ್, ಜೆಡಿಎಸ್ ಮತ್ತು ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷಗಳೆರಡರ ಅಭ್ಯರ್ಥಿಯಾಗಿ ಅಯೂಬ್ ಖಾನ್ ಎನ್ನುವವರು ಕಣಕ್ಕೆ ಇಳಿದಿದ್ದಾರೆ.
ಪಿರಿಯಾಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ವೆಂಕಟೇಶ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಆರ್, ತುಂಗಾ ಶ್ರೀನಿವಾಸ್, ಹುಣಸೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ತಿಮ್ಮಾ ಭೋವಿ ಹಾಗೂ ಬೀರೇಶ್, ವರುಣ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿಯಾಗಿ ರವಿಕುಮಾರ್ ಎಂ. ಕೃಷ್ಣರಾಜನಗರ ಕ್ಷೇತ್ರದಿಂದ ಪರಮೇಶ್ ಕೆಆರ್‌ಎಸ್ ಪಕ್ಷದಿಂದ, ಚಾಮುಂಡೇಶ್ವರಿ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿಯಿಂದ ಎಂ.ಎಸ್ .ಪ್ರವೀಣ್ ಕಣಕ್ಕಿಳಿದಿದ್ದಾರೆ.
ಬಳ್ಳಾರಿ ನಗರ ಕ್ಷೇತ್ರದಲ್ಲಿ ಮೊದಲ ದಿನ ಇಬ್ಬರಿಂದ ನಾಮಪತ್ರ ಸಲ್ಲಿಕೆಯಾಗಿದೆ. ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ರೆಡ್ಡಿ ಹಾಗೂ ಎಸ್‌ಯುಸಿಐ ಪಕ್ಷದ ಅಭ್ಯರ್ಥಿ ಆರ್.ಸೋಮಶೇಖರ ಗೌಡ ನಾಮಪತ್ರ ಸಲ್ಲಿಸಿದರು.
ಕಣಕ್ಕಿಳಿದ ಸುನೀತಾ ಪುಟ್ಟಣಯ್ಯ
ಮೇಲುಕೋಟೆ ಕ್ಷೇತ್ರದಿಂದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಸುನೀತಾ ಪುಟ್ಟಣಯ್ಯ ಕಣಕ್ಕೆ ಇಳಿದರು. ಮೊದಲ ದಿನವಾದ್ದರಿಂದ ನಾನು ನಾಮಪತ್ರ ಸಲ್ಲಿಸಿದ್ದೇನೆ, ನಂತರ ವಾಪಸ್ ಪಡೆಯುತ್ತೇನೆ ಅಧಿಕೃತವಾಗಿ ಬಿ.ಫಾರಂ ಜೊತೆ ಪುತ್ರ ದರ್ಶನ್ ಪುಟ್ಟಣ್ಣಯ್ಯ ಏ.15 ಹಾಗೂ ಏ.20ರಂದು 2 ನಾಮಪತ್ರ ಸಲ್ಲಿಸಲಿದ್ದಾನೆ ಎಂದು ತಿಳಿಸಿದರು.
ಇದನ್ನೂ ಓದಿ : Goolihatti Shekhar: ಹೆಚ್ಚಾಗುತ್ತಿದೆ ಬಂಡಾಯ, ಬಿಜೆಪಿಗೆ ಗೂಳಿಹಟ್ಟಿ ಶೇಖರ್ ವಿದಾಯ