Site icon Vistara News

Karnataka Elections | ಮಾಜಿ ಸಚಿವ ದಿವಾಕರ ಬಾಬುಗೆ ಕೈ ಟಿಕೆಟ್‌ ತಪ್ಪಿಸಲು ಸಂಚು, ರೆಡ್ಡಿ ಜತೆ ಪ್ರತ್ಯೇಕ ಪಕ್ಷದ ಸುಳ್ಸುದ್ದಿ!

Diwakara babu Bellary congress

ಬಳ್ಳಾರಿ: ಬಳ್ಳಾರಿ ಪಾಲಿಟಿಕ್ಸ್‌ನಲ್ಲಿ ಈಗ ವದಂತಿಗಳದೇ ಸರಮಾಲೆ. ಜನಾರ್ದನ ರೆಡ್ಡಿ ಮತ್ತೆ ರಾಜಕೀಯಕ್ಕೆ ಬರ್ತಾರಂತೆ. ಹೊಸ ಪಕ್ಷ ಕಟ್ತಾರಂತೆ ಅಂತೆಲ್ಲ. ಈ ನಡುವೆ, ರೆಡ್ಡಿ ಪಕ್ಷಕ್ಕೆ ಅವರು ಹೋಗ್ತಾರೆ ಇವರು ಹೋಗ್ತಾರೆ ಅಂತಾನೂ ಸುದ್ದಿ ಹರಡುತ್ತಿದೆ. ಈ ಅಂತೆ ಕಂತೆಗಳನ್ನು ಕೆಲವರ ರಾಜಕೀಯ ಭವಿಷ್ಯ ಹಾಳು ಮಾಡಲು ದುರುಪಯೋಗ ಮಾಡಲಾಗುತ್ತಿದೆ ಕೂಡಾ. ಮಾಜಿ ಸಚಿವ, ಬಳ್ಳಾರಿಯ ಖಡಕ್‌ ಕಟ್ಟಾಳು ದಿವಾಕರ ಬಾಬು ಅವರಿಗೆ ಆಗಿದ್ದೂ ಇದೇ. ಅವರು ರೆಡ್ಡಿ ಬ್ರದರ್ಸ್‌ ಜತೆ ಸೇರಿಕೊಂಡು ಹೊಸ ಪಕ್ಷ ಕಟ್ತಾರಂತೆ ಅಂತೆಲ್ಲ ಸುದ್ದಿ ಹಬ್ಬಿಸಲಾಗಿತ್ತು. ಇದೆಲ್ಲ ಸುಳ್ಳು, ಕಾಂಗ್ರೆಸ್‌ ಟಿಕೆಟ್‌ ತಪ್ಪಿಸಲು (Karnataka Elections) ಮಾಡುತ್ತಿರುವ ಕುತಂತ್ರ ಅಂದಿದ್ದಾರೆ ದಿವಾಕರ ಬಾಬು.

ಹಿಂದೆ ಶಾಸಕರಾಗಿ, ಸಚಿವರಾಗಿದ್ದ ದಿವಾಕರ ಬಾಬು ಬಳಿಕ ರಾಜಕೀಯ ಚಟುವಟಿಕೆಗಳಿಂದ ದೂರವಿದ್ದರು. ಈ ಬಾರಿ ೨೦೨೩ರ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಂತದಲ್ಲಿ ವದಂತಿಗಳ ಸುರಿಮಳೆ ಸುರಿಯುತ್ತಿದೆ. ಅದಕ್ಕೆಲ್ಲ ಸ್ಪಷ್ಟನೆ ನೀಡಿದ್ದಾರೆ ದಿವಾಕರ ಬಾಬು.

ಹಾಗಿದ್ದರೆ ಅವರು ಹೇಳೋದೇನು?
– ನಾನು ರಾಜಕೀಯವಾಗಿ ಸಕ್ರಿಯವಾಗುತ್ತಿದ್ದಂತೆಯೇ ನನ್ನ ವಿರುದ್ಧ ಕೆಲವರು ಷಡ್ಯಂತ್ರ ರೂಪಿಸುತ್ತಿದ್ದಾರೆ, ರೆಡ್ಡಿ ಸಹೋದರರ ಜೊತೆ ಸೇರಿ ನಾನು ಹೊಸ ಪಕ್ಷ ಕಟ್ಟುತ್ತಿರುವುದಾಗಿ ಅಪ ಪ್ರಚಾರ ಮಾಡುತ್ತಿದ್ದಾರೆ.
– ಕಾಂಗ್ರೆಸ್ ಪಕ್ಷದಿಂದ ನಗರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿರುವುದರಿಂದ ನನಗೆ ಟಿಕೆಟ್ ತಪ್ಪಿಸಲು ಕೆಲವರು ಈ ರೀತಿಯ ಕುತಂತ್ರ ಮಾಡುತ್ತಿದ್ದಾರೆ.

-ಕೆಲ ವರ್ಷಗಳಿಂದ ರಾಜಕೀಯ ಚಟುವಟಿಕೆಯಿಂದ ದೂರ ಇದ್ದೆ, ಆಗಲೂ ನಾನು ಕಾಂಗ್ರೆಸ್ ನಲ್ಲಿದ್ದೆ. ಮುಂದೆಯೂ ಕಾಂಗ್ರೆಸ್ ನಲ್ಲಿ ಇರುತ್ತೇನೆ. ರಾಹುಲ್‌ಗಾಂಧಿಯವರ ಜೋಡೋಯಾತ್ರೆ ಯ ಮೂಲಕ ಮತ್ತೆ ನಾನು ಸಕ್ರೀಯವಾಗಿದ್ದೇನೆ. ಬಿಜೆಪಿಯಿಂದ ದೇಶದಲ್ಲಾಗುತ್ತಿರುವ ಅಪಾಯಕಾರಿ ಬೆಳವಣಿಗೆಗಳು ನಮ್ಮ ಜಿಲ್ಲೆಯ ಮೇಲಾಗಬಾರದು ಎಂದು ರಾಜಕೀಯಕ್ಕೆ ಮರಳಿದ್ದೇನೆ.

– ನಾನು ಸಕ್ರಿಯ ರಾಜಕಾರಣಕ್ಕೆ ಬಂದಿರುವುದನ್ನು ಸಹಿಸದೆ, ಖಾಸಗಿ ಯೂಟ್ಯೂಬ್ ಬಳಸಿಕೊಂಡು ನನ್ನ ವಿರುದ್ಧ
ಇಲ್ಲಸಲ್ಲದ ವಿಚಾರಗಳನ್ನು ಪ್ರಸಾರ ಮಾಡಿಸುತ್ತಿದ್ದಾರೆ. ಯಾವುದೇ ದಾಖಲೆಗಳಿಲ್ಲದೆ ನಾನು ಹಾಗೂ ರೆಡ್ಡಿ ಸಹೋದರರು ಜೊತೆಗೂಡಿ ಹೊಸ ಪಕ್ಷ ಕಟ್ಟುತ್ತಿರುವುದಾಗಿ ಸುದ್ದಿ ಮಾಡಿದ ಖಾಸಗಿ ಯೂಟ್ಯೂಬ್ ಚಾನೆಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವೆ.

-ನಾನು ಈ ಬಾರಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿರುವೆ. ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿರುವೆ. ಒಂದು ವೇಳೆ ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸುವೆ. ಇಲ್ಲವಾದರೆ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡುವೆ.

-ಇದು ನನ್ನ ಕೊನೆಯ ಚುನಾವಣೆ. ಮುಂದೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಈ ಬಾರಿ ಸ್ಪರ್ಧೆಗೆ ಅವಕಾಶ ಕೋರಿರುವೆ. ನನ್ನ ಮಗ ಆಕಾಂಕ್ಷಿಯಲ್ಲ. ಅರ್ಜಿ ಸಲ್ಲಿಸಿಲ್ಲ.

– ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ನಗರ ಕ್ಷೇತ್ರದಿಂದ ಸ್ಪರ್ಧಿಸಿದರೆ ನನ್ನ ಅಳಿಯ (ನಾರಾ ಭರತ ರೆಡ್ಡಿ) ಸ್ಪರ್ಧೆ ಮಾಡೋದಿಲ್ಲ. ಈ ಕುರಿತು ಸೂರ್ಯನಾರಾಯಣ ರೆಡ್ಡಿ ಅವರ ಬಳಿ ಮಾತನಾಡಿಲ್ಲ. ಆದರೆ, ಅವರು ನನ್ನ ವಿರುದ್ಧ ಸ್ಪರ್ಧೆ ಮಾಡೋದಿಲ್ಲ ಎಂಬ ಆಪೇಕ್ಷೆ ನನ್ನದು.

-ಭೂ ವಿವಾದ ಪ್ರಕರಣ ನ್ಯಾಯಾಲಯದಲ್ಲಿರುವಾಗ ಅದೇ ಸ್ಥಳದಲ್ಲಿ ಪರಿಶಿಷ್ಟ ಪಂಗಡಗಳ ಸಮಾವೇಶ ಮಾಡಿದ್ದಾರೆ. ಇದು ದೌರ್ಜನ್ಯವಲ್ಲದೆ ಮತ್ತೇನು?

– ತಪ್ಪು ಮಾಡಿದವರು ಯಾರೇ ಆಗಲಿ ಜೈಲು ಸೇರಲೇಬೇಕು. ಒಂದಷ್ಟು ದಿನ ತಡವಾಗಬಹುದು ಅಷ್ಟೇ. ಪ್ರಕರಣದಲ್ಲಿ ನ್ಯಾಯಾಂಗ ಹೋರಾಟ ಮುಂದುವರಿಸಿದ್ದೇವೆ. ಕೋರ್ಟ್ ತೀರ್ಪು ಬಂದ ಬಳಿಕ ಜೈಲು ಸೇರುವುದನ್ನು ಯಾರೂ ಸಹ ತಪ್ಪಿಸಲಾಗದು.

ಇದನ್ನೂ ಓದಿ | ಸಿದ್ದರಾಮಯ್ಯ – ಡಿಕೆಶಿ ಜೋಡೆತ್ತುಗಳಲ್ಲ, ಕಿತ್ತಾಡುವ ಚಿರತೆಗಳು ಎಂದ ಶ್ರೀರಾಮುಲು

Exit mobile version