Site icon Vistara News

Karnataka Election:‌ ಆಮ್‌ಆದ್ಮಿ ಪಕ್ಷದಿಂದ ಉತ್ತಮ ಆಡಳಿತ ನಿರೀಕ್ಷಿಸಿ: ಶಾಸಕ ದಿಲೀಪ್ ಪಾಂಡೆ

MLA Dilip Pandey hosanagara

#image_title

ಹೊಸನಗರ: ಪಕ್ಷದ ಧ್ಯೇಯೋದ್ದೇಶಗಳನ್ನು ಅರಿತ ಮತದಾರರು ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಮ್‌ಆದ್ಮಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಅದರಂತೆ ರಾಜ್ಯದಲ್ಲಿಯೂ ಮುಂಬರುವ ಚುನಾವಣೆಯಲ್ಲಿ (Karnataka Election) ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಆಮ್‌ ಆದ್ಮಿ ಪಕ್ಷದ ದೆಹಲಿ ಶಾಸಕ ದಿಲೀಪ್ ಪಾಂಡೆ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣದ ಸಂತೆ ಪ್ರಾಂಗಣದಲ್ಲಿ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ʼಬದಲಾವಣೆಯ ಗಾಳಿ ಬೀಸತೊಡಗಿದೆ. ದೇಶ ಹಾಗೂ ಜನಸಾಮಾನ್ಯರ ಹಿತವನ್ನು ಕಾಯುವ ಪಕ್ಷ ಇದು ಹಾಗೂ ಇದರ ಅಭ್ಯರ್ಥಿಗಳನ್ನು ಜನತೆ ಬೆಂಬಲಿಸಬೇಕಿದೆ ಎಂದರು.

ಇದನ್ನೂ ಓದಿ: Jain College: ಸ್ಕಿಟ್‌ನಲ್ಲಿ ಅಂಬೇಡ್ಕರ್‌ಗೆ ಅಪಮಾನ ಪ್ರಕರಣ; ಏಳು ವಿದ್ಯಾರ್ಥಿಗಳ ಬಂಧನ

ಪಕ್ಷದ ಮುಖಂಡ, ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ʼತಮ್ಮ ಮನೆ ಮಗಳನ್ನು ಮದುವೆ ಮಾಡಿಕೊಡುವಾಗ ವರನ ಪೂರ್ವಾಪರವನ್ನು ಜಾಗರೂಕತೆಯಿಂದ ಪರಿಶೀಲನೆ ನಡೆಸುತ್ತೇವೆ. ಬಹಳ ಮುತುವರ್ಜಿ ವಹಿಸಿ ವರನನ್ನು ಆಯ್ಕೆ ಮಾಡುತ್ತೇವೆ. ಅಷ್ಟೇ ಜಾಗರೂಕತೆ ನಮ್ಮನ್ನು ಆಳುವವರನ್ನು ಆಯ್ಕೆ ಮಾಡುವಾಗಲೂ ಇರಬೇಕು. ಜನಸಾಮಾನ್ಯರು ಇಂದು ಒಗ್ಗಟ್ಟಾಗಬೇಕಿದೆ. ಭವಿಷ್ಯದ ಕುರಿತು ಚಿಂತನೆ ನಡೆಸಿ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಆಮ್‌ಆದ್ಮಿ ಪಕ್ಷ ಜನ ಸಾಮಾನ್ಯರ ಪಕ್ಷ ಎನ್ನುವುದನ್ನು ಪ್ರತಿ ಕಾರ್ಯಕರ್ತರೂ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಕೈಗೊಳ್ಳಬೇಕಿದೆʼ ಎಂದರು.

ʼಬಿಜೆಪಿ, ಜನತಾ ದಳ ಹಾಗೂ ಕಾಂಗ್ರೆಸ್ ಪಕ್ಷಗಳು ಜನರಿಗೆ ಏನೂ ಕೊಡುಗೆ ನೀಡಲಿಲ್ಲ. ಬಲಾಢ್ಯರನ್ನು ಇನ್ನಷ್ಟು ಬಲಾಢ್ಯರನ್ನಾಗಿಸಿದ್ದಷ್ಟೇ ಇವುಗಳ ಸಾಧನೆ. ಸ್ವಾತಂತ್ರ್ಯ ಬಂದು 75 ವರ್ಷ ಸಂದರೂ, ಸಾಮಾನ್ಯ ಜನರು ಕಷ್ಟದಲ್ಲಿಯೇ ಕಾಲ ಕಳೆಯುವಂತಾಗಿದೆʼ ಎಂದರು.

ಪಕ್ಷ ಸಂಘಟಕ ವಿಜಯ ಶರ್ಮ ಮಾತನಾಡಿ, ದೆಹಲಿಯಲ್ಲಿ ಪ್ರತಿ ವರ್ಷ 8 ಸಾವಿರ ಮಕ್ಕಳು ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ. ಆರೋಗ್ಯ, ಶಿಕ್ಷಣ ಹಾಗೂ ಕುಡಿಯುವ ನೀರು ಸೌಲಭ್ಯಕ್ಕೆ ಇನ್ನಿಲ್ಲದ ಆದ್ಯತೆ ನೀಡಲಾಗಿದೆ. ಇದೇ ಮಾದರಿ ಆಡಳಿತ ಕರ್ನಾಟಕದಲ್ಲಿಯೂ ನೋಡುವಂತಾಗಬೇಕು ಎಂದರು.

ಇದನ್ನೂ ಓದಿ: Supreme Court: ಸುಪ್ರೀಂ ಕೋರ್ಟ್ ಜಡ್ಜ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕನ್ನಡಿಗ ನ್ಯಾ. ಅರವಿಂದ್ ಕುಮಾರ್

ಪ್ರಮುಖರಾದ ಪೃಥ್ವಿ ರೆಡ್ಡಿ, ದರ್ಶನ್‌ ಜೈನ್, ಪಕ್ಷದ ಅಭ್ಯರ್ಥಿಗಳಾದ ಕೆ.ದಿವಾಕರ್, ಸಾಲೂರು ಶಿವಕುಮಾರ ಗೌಡ, ಕಿರಣ್, ಸೋಗೋಡು ಗಣೇಶ್, ನಂಜಪ್ಪ ಕಾಳೇಗೌಡ, ಹರ್ಷಿತಾ ಸಂತೋಷ, ಹಸನಬ್ಬ ಮತ್ತಿತರರು ಇದ್ದರು.

Exit mobile version