Site icon Vistara News

Karnataka Elections: ಸೊರಬ ಕಾಂಗ್ರೆಸ್‌ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಠೇವಣಿಗೆ ಹಿರೇಶಕುನ ಗ್ರಾಮದ ಅಭಿಮಾನಿಗಳ ದೇಣಿಗೆ

Madhu Bangarappa

#image_title

ಸೊರಬ: ಸೊರಬ ವಿಧಾನಸಭಾ ಕ್ಷೇತ್ರದ (Karnataka Elections) ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ (Madhu Bangarappa) ಅವರು ಏ.17ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಹಿರೇಶಕುನ ಗ್ರಾಮದ ಅವರ ಅಭಿಮಾನಿಗಳು ನಾಮಪತ್ರ ಸಲ್ಲಿಸಲು ಠೇವಣಿ ಹಣ ನೀಡಲಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಗಣಪತಿ ಹೇಳಿದರು.

ಶುಕ್ರವಾರ ಪಟ್ಟಣದ ಬಂಗಾರ ಧಾಮದಲ್ಲಿ ಏ.17ರಂದು ನಾಮಪತ್ರ ಸಲ್ಲಿಸುವ ಬಗ್ಗೆ ಹಮ್ಮಿಕೊಂಡಿದ್ದ ಬೂತ್ ಮಟ್ಟದ ಅಧ್ಯಕ್ಷರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಅವರ ದುರಾಡಳಿತ ಕೊನೆಗಾಣಿಸಲು ಮಧು ಬಂಗಾರಪ್ಪ ಅವರಿಗೆ ಈ ಬಾರಿ ಗೆಲ್ಲಿಸುವ ನಿಟ್ಟಿನಲ್ಲಿ ಹಿರೇಶಕುನ ಗ್ರಾಮಸ್ಥರು ಹಣ ಸಂಗ್ರಹಿಸಿ ನಾಮಪತ್ರ ಸಲ್ಲಿಸಲು ಠೇವಣಿ ಹಣ ನೀಡುತ್ತಿರುವುದು ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಲಿದೆ ಎಂದು ತಿಳಿಸಿದರು.

ಏಪ್ರಿಲ್ 17ರಂದು ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದು ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿ ಸೇರಿದಂತೆ ತಾಲೂಕಿನ ಮೂಲೆ ಮೂಲೆಗಳಿಂದ ಸಾವಿರಾರು ಜನರು ಭಾಗವಹಿಸಲಿದ್ದು, ಮಧು ಬಂಗಾರಪ್ಪ ಅವರ ಪತ್ನಿ ಹಾಗೂ ಸಹೋದರಿಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕುಮಾರ್ ಬಂಗಾರಪ್ಪ ಅವರು ಶಾಸಕರಾದ ನಂತರ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವ ಕಾರಣಕ್ಕೆ ಬಿಜೆಪಿ ತೊರೆದು ನೂರಾರು ಮುಖಂಡರು ಪ್ರತಿನಿತ್ಯ ಮಧು ಬಂಗಾರಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಬಾರಿ ಮಧು ಬಂಗಾರಪ್ಪ ಅವರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾಮಪತ್ರ ಸಲ್ಲಿಕೆ ನಂತರದ ದಿನಗಳಲ್ಲಿ ಮಧು ಬಂಗಾರಪ್ಪ ಅವರ ಪರವಾಗಿ ಪ್ರಚಾರ ಸಭೆಗೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ ಎಂದರು.

ಕಾಂಗ್ರೆಸ್ ವರಿಷ್ಠರು ಕ್ಷೇತ್ರದಲ್ಲಿ ಅಶ್ವಮೇಧ ಕುದುರೆ ಸಿದ್ಧಗೊಳಿಸಿ ಚುನಾವಣೆಯಲ್ಲಿ ಬಿಟ್ಟಿದ್ದಾರೆ. ಈಗಾಗಲೇ ಜನರಿಂದ ಅಭೂತಪೂರ್ವ ಸ್ವಾಗತ ದೊರೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಗೆಲುವು ನಿಶ್ಚಿತ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ ತಿಳಿಸಿದರು.

ಸಭೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ, ತಾಳಗುಪ್ಪ ಬ್ಲಾಕ್ ಅಧ್ಯಕ್ಷ ಶಿವಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಮುಖಂಡರಾದ ಕೆ.ಮಂಜುನಾಥ್ ಹಳೇಸೊರಬ, ಕೆ.ವಿ.ಗೌಡ, ಹುಚ್ಚಪ್ಪ ಮಂಡಗಳಲೆ, ಕೋಟೆ ಬಸವಂತಪ್ಪ, ಎಂ.ಡಿ.ಶೇಖರ್, ಹುಚ್ಚಪ್ಪ, ಶಿವಕುಮಾರ್ ಕಾಸ್ವಾಡಿಕೊಪ್ಪ, ಪ್ರಭಾಕರ್, ತಾರಾ, ಸುಲ್ತಾನ ಬೇಗಂ, ಪ್ರಕಾಶ್ ಇದ್ದರು.

ಇದನ್ನೂ ಓದಿ : Karnataka Elections: ಕೈ ತೊರೆದು ತೆನೆ ಹೊತ್ತ ಚೈತ್ರಾ ಕೊಠಾರಕರ್; ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಿರೀಕ್ಷೆ


Exit mobile version