Site icon Vistara News

Karnataka Elections : ಮೊಳಕಾಲ್ಮುರು ಕಾಂಗ್ರೆಸ್‌ನಲ್ಲಿ ಬಂಡಾಯ; ಎನ್‌.ವೈ ಗೋಪಾಲಕೃಷ್ಣ ಸೇರ್ಪಡೆಗೆ ತೀವ್ರ ವಿರೋಧ

Molakalmuru Congress protest

#image_title

ಚಿತ್ರದುರ್ಗ: ಇತ್ತ ಕೂಡ್ಲಿಗಿಯ ಬಿಜೆಪಿ ಶಾಸಕ ಎನ್‌.ವೈ ಗೋಪಾಲಕೃಷ್ಣ ಅವರು ವಿಧಾನಸಭೆಯ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಿಗೇ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಕಾಂಗ್ರೆಸ್‌ ಘಟಕದಲ್ಲಿ (Karnataka Elections) ಆಕ್ರೋಶ ಭುಗಿಲೆದ್ದಿದೆ.

ಎನ್‌.ವೈ ಗೋಪಾಲಕೃಷ್ಣ ಅವರು ಮೊಳಕಾಲ್ಮುರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಎಂದು ಹೇಳಲಾಗಿತ್ತು. ಆದರೆ, ಅವರು ತಾನು ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಪ್ರಕಟಿಸಿದ್ದಾರೆ. ಆದರೇ ಅವರು ತಮ್ಮ ಪುತ್ರನಿಗಾಗಿ ಈ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಮೊಳಕಾಲ್ಮುರು ಕಾಂಗ್ರೆಸ್‌ ತೀವ್ರ ಪ್ರತಿರೋಧ ತೋರಿಸುತ್ತಿದೆ.

ಎನ್ ವೈ ಗೋಪಾಲಕೃಷ್ಣ ಅವರ ಕಾಂಗ್ರೆಸ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿರುವ ಕಾರ್ಯಕರ್ತರು, ಸ್ಪರ್ಧೆಯ ಆಕಾಂಕ್ಷಿ ಡಾ. ಯೋಗೇಶ್ ಬಾಬು ಕೈ ಟಿಕೆಟ್ ನೀಡದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.

ಮೊಳಕಾಲ್ಮುರು ಪಟ್ಟಣ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ತಳುಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ ಹಾಗೂ ಮೊಳಕಾಲ್ಮುರು ಬ್ಲಾಕ್ ಕಾಂಗ್ರೆಸ್ ಕಲೀಮ್ ಉಲ್ಲಾ ನೇತೃತ್ವದಲ್ಲಿ ಸಭೆ ನಡೆದು ಗೋಪಾಲಕೃಷ್ಣ ಪಕ್ಷ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಲಾಯಿತು. ಯೋಗೇಶ್‌ ಬಾಬುಗೆ ಟಿಕೆಟ್‌ ಕೊಡದಿದ್ದರೆ ತಾವು ರಾಜೀನಾಮೆ ನೀಡುವುದಾಗಿ ತಳುಕು ಮತ್ತು ಮೊಳಕಾಲ್ಮುರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಎಚ್ಚರಿಕೆ ನೀಡಿದರು.

ಎಸ್ಸಿ ಎಸ್ಟಿ ಕೈ ಘಟಕದ ಅಧ್ಯಕ್ಷರು ಹಾಗೂ ಯುವ ಘಟಕದ ಅಧ್ಯಕ್ಷರು ಕೂಡಾ ರಾಜೀನಾಮೆ ಕೊಡುವುದಾಗಿ ಪ್ರಕಟಿಸಿದರು. ಡಾ.ಯೋಗೇಶ್ ಬಾಬುಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರಿಂದ ಅರೆಬೆತ್ತಲೆ ಪ್ರತಿಭಟನೆ ನಡೆಯಿತು.

ಸಭೆಯಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟೇಲ್ ಪಾಪನಾಯಕ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷರಾದ ಎಸ್ ಜಯಣ್ಣ ಮಾಜಿ ಗ್ರಾಪಂ ಅಧ್ಯಕ್ಷರಾದ ಮಲ್ಲಿಕಾರ್ಜುನ ಯುವ ಮುಖಂಡರಾದ ಅರುಣ್ ಶರತ್ ಪ್ರದೀಪ್ ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ್ದ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಪದಾಧಿಕಾರಿಗಳು ಇದ್ದರು.

ಶಾಸಕತ್ವಕ್ಕೆ ರಾಜೀನಾಮೆ ನೀಡಿದ ಎನ್‌ವೈ ಗೋಪಾಲಕೃಷ್ಣ ಹೇಳಿದ್ದೇನು?

ಶಿರಸಿಯಲ್ಲಿರುವ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಗೆ ಭೇಟಿ ನೀಡಿ ರಾಜೀನಾಮೆ ಪತ್ರವನ್ನು ನೀಡಿದ ಎನ್‌.ವೈ ಗೋಪಾಲಕೃಷ್ಣ ತಾನಿನ್ನು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಿರುವುದಾಗಿ ಪ್ರಕಟಿಸಿದರು.

ʻʻನನಗೆ ಈಗ 73 ವರ್ಷ. ವಯಸ್ಸಾದ ಕಾರಣಕ್ಕೆ, ಆರೋಗ್ಯದ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೂ ಸೇರೋದಿಲ್ಲ. ಅದಕ್ಕೆ ರಾಜಕೀಯದಿಂದ ದೂರವಿರುತ್ತೇನೆ. ರಾಜಕೀಯ ನಿವೃತ್ತಿ ಪಡೆಯಲೆಂದೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶಾಸಕನಾಗಿದ್ದರೆ ಅವರು ಕರೆಯುವುದು, ಇವರು ಕರೆಯುವ ಗೊಂದಲ ಉಂಟಾಗುತ್ತದೆ. ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದೆಲ್ಲ ಸುದ್ದಿಯಾಗಿದೆ. ಆದರೆ, ಸ್ಪಷ್ಟವಾಗಿ ಹೇಳುತ್ತೇನೆ. ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲʼʼ ಎಂದಿದ್ದಾರೆ. ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸುವ ಪ್ರಶ್ನೆಯೂ ಇಲ್ಲ ಎಂದಿದ್ದಾರೆ.

ʻʻನನಗೆ ವಯಸ್ಸಾಗಿದೆ. ಕ್ಷೇತ್ರದ ಜನರು ಬೇರೆಯವರಿಗೆ ನೀಡಿ ಎನ್ನುತ್ತಿದ್ದಾರೆ. ಜೊತೆಗೆ ಮಕ್ಕಳು ನಮಗೆ ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಆದರೆ, ಅವರು ಯಾವ ಪಕ್ಷಕ್ಕೆ ಹೋಗುತ್ತಾರೋ ಗೊತ್ತಿಲ್ಲ.ʼʼ ಎಂದೂ ಎನ್‌.ವೈ ಗೋಪಾಲಕೃಷ್ಣ ಹೇಳಿದರು.

ಇದನ್ನೂ ಓದಿ : Karnataka Election: ಜೆಡಿಎಸ್‌, ಬಿಜೆಪಿಯ ತಲಾ ಒಂದು ವಿಕೆಟ್‌ ಪತನ: A.T. ರಾಮಸ್ವಾಮಿ, N.Y. ಗೋಪಾಲಕೃಷ್ಣ ರಾಜೀನಾಮೆ

Exit mobile version