ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಭಾರಿ ಸಿದ್ಧತೆ ನಡೆಸುತ್ತಿರುವ ರೌಡಿ ಶೀಟರ್ ಸೈಲೆಂಟ್ ಸುನಿಲ್‌ಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಸುನಿಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನಿಲ್‌ನ್ನು ಠಾಣೆಗೆ ಕರೆಸಿಕೊಂಡಿರುವ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸಿಆರ್‌ಪಿಸಿ 110ರ ಅಡಿಯಲ್ಲಿ ಆತನಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದ್ದು, ಚುನಾವಣೆ ಸಮಯದಲ್ಲಿ ಯಾವುದೇ ರೀತಿ ಕಾನೂನು ಮೀರಿ ಕೆಲಸ ಮಾಡಬಾರದು ಎಂದು ಸೂಚಿಸಲಾಗಿದೆ.
ಸುನಿಲ್‌ನಿಂದ ಹದಿನೈದು ಲಕ್ಷ ರೂಪಾಯಿಯ ಬಾಂಡ್ ಬರೆಸಿಕೊಳ್ಳಲಾಗಿದ್ದು ಯಾವುದೇ ಅಪರಾಧ ಕೃತ್ಯ ಹಾಗೂ ರಾಜಕೀಯ ವಿಚಾರಕ್ಕೆ ಅಕ್ರಮವಾಗಿ ಎಂಟ್ರಿ ಆಗುವಂತಿಲ್ಲ ಎಂದು ಎಚ್ಚರಿಸಿದ್ದಾರೆ.
ಕೆಲವು ತಿಂಗಳಿನಿಂದ ಬಹಿರಂಗವಾಗಿ ಸಮಾಜ ಸೇವಾ ಚಟುವಟಿಕೆಗಳನ್ನು ಆಯೋಜಿಸಲು ಆರಂಭಿಸಿದ್ದ ಸುನಿಲ್ ಚುನಾವಣೆಯ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾನೆ. ಮೊದಲು ಚಾಮರಾಜ ಪೇಟೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದು, ಅದರಲ್ಲಿ ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಮತ್ತು ಉದಯ ಗರುಡಾಚಾರ್ ಅವರು ಭಾಗವಹಿಸಿದ್ದು ದೊಡ್ಡ ಸುದ್ದಿಯಾಗಿತ್ತು.
ಬಿಜೆಪಿ ಅಧಿಕೃತವಾಗಿ ಸೈಲೆಂಟ್ ಸುನಿಲ್‌ನನ್ನು ಬೆಳೆಸುತ್ತಿದೆ ಎಂದು ಆರೋಪಿಸಿದ್ದ ವಿಪಕ್ಷಗಳು ರೌಡಿ ಪಾಲಿಟಿಕ್ಸ್‌ನ ವಿಚಾರದಲ್ಲಿ ಕಮಲ ಪಾಳಯಕ್ಕೆ ಮುಜುಗರ ಉಂಟು ಮಾಡಿದ್ದವು. ಕೆಲವು ದಿನಗಳ ಕಾಲ ಇದುವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ಅದೆಲ್ಲವೂ ತಣ್ಣಗಾಯಿತು ಅಂದುಕೊಳ್ಳುವಾಗ ಸುನಿಲ್ ಬಿಜೆಪಿ ಸದಸ್ಯತ್ವ ಪಡೆದುಕೊಂಡದ್ದು ಸೋಷಿಯಲ್ ಮೀಡಿಯಾದಲ್ಲಿ ಸದ್ದಾಯಿತು. ಆಗ ಬಿಜೆಪಿ ಇದು ಮಿಸ್ ಕಾಲ್ ಮೂಲಕ ಆಗಿರುವ ನೋಂದಣಿ, ಪ್ರತ್ಯೇಕವಾಗಿ ಕರೆಸಿ ಸೇರಿಸಿಕೊಂಡಿಲ್ಲ ಎಂದು ಸಮಜಾಯಿಷಿ ನೀಡಿತ್ತು.
ಈ ನಡುವೆ ಸುನಿಲ್ ಚಾಮರಾಜ ಪೇಟೆ ಕ್ಷೇತ್ರದಲ್ಲಿ ಈಗಾಗಲೇ ಸೈಲೆಂಟ್ ಆಗಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿಯಿಂದ ಟಿಕೆಟ್ ನೀಡುವ ಸಾಧ್ಯತೆಗಳೂ ದಟ್ಟವಾಗಿವೆ. ಇಲ್ಲಿ ಹಿಂದು ಮತಗಳ ಕ್ರೋಡೀಕರಣದ ಮೂಲಕ ಹಾಲಿ ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ಎದುರಿಸಬೇಕು ಎನ್ನುವುದು ಬಿಜೆಪಿ ಲೆಕ್ಕಾಚಾರ ಎನ್ನಲಾಗಿದೆ.
ಇದನ್ನೂ ಓದಿ : BJP Karnataka: ಬಿಜೆಪಿಯದ್ದು ಡಬಲ್ ಎಂಜಿನ್; ಕಾಂಗ್ರೆಸ್‍ನದ್ದು ಟ್ರಬಲ್ಡ್ ಎಂಜಿನ್: ಗೌರವ್ ಭಾಟಿಯ ಲೇವಡಿ