Site icon Vistara News

Karnataka Elections : ಈ ಮನೆಯ ಅಂಗಳಕ್ಕೂ ರಾಜಕೀಯ ಪಕ್ಷದವರಿಗೆ ಪ್ರವೇಶವಿಲ್ಲ; ಗೇಟಿಗೇ ಹಾಕಲಾಗಿದೆ ಬ್ಯಾನರ್!

Election protest

#image_title

ಸುಳ್ಯ: ಗ್ರಾಮಕ್ಕೆ ಸೂಕ್ತ ಸವಲತ್ತುಗಳನ್ನು ನೀಡದೆ ಇದ್ದಾಗ, ತೀರಾ ಅಗತ್ಯ ಸೌಲಭ್ಯಗಳನ್ನೂ ಒದಗಿಸದೆ ಇದ್ದಾಗ ಗ್ರಾಮಸ್ಥರು ಸಿಟ್ಟಿಗೆದ್ದು ಸಾಮೂಹಿಕವಾಗಿ ಚುನಾವಣಾ (Karnataka Elections) ಬಹಿಷ್ಕಾರ ಹಾಕುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಂದು ಮನೆಯ ಗೇಟಿನಲ್ಲೇ ಬ್ಯಾನರ್‌ ಹಾಕಲಾಗಿದೆ.

ಸುಳ್ಯ ತಾಲೂಕಿನ ಅಜ್ಜಾವರದ ಮುಂಡೋಳಿಮೂಲೆಯ ಮನೆಯೊಂದರ ಮುಂಭಾಗದ ಗೇಟಿನಲ್ಲಿ ‘ರಾಜಕೀಯ ಪಕ್ಷದವರಿಗೆ ಪ್ರವೇಶವಿಲ್ಲ’ ಎಂಬ ಬ್ಯಾನರ್ ಅಳವಡಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಯಾಕೆ ಈ ಬಹಿಷ್ಕಾರ?

ಮುಂಡೋಳಿಮೂಲೆ ಮನೆಯವರು ರಸ್ತೆ ಅಭಿವೃದ್ಧಿ ಸಮಯದಲ್ಲಿ ಅಗತ್ಯವಾಗಿದ್ದ ಮಣ್ಣನ್ನು ತಮ್ಮ ಕೃಷಿ ಭೂಮಿಯಿಂದಲೇ ನೀಡಿದ್ದರು. ಆದರೆ ರಸ್ತೆಗೆ ಸುರಿಯುವ ಮಣ್ಣು ಮಳೆಗಾಲದಲ್ಲಿ ವಾಪಸ್ ಬಂದು ಮೋರಿಯಲ್ಲಿ ಸಿಕ್ಕಿಕೊಳ್ಳುತ್ತಿದೆ. ಇದರಿಂದ ನೀರು ಕೃಷಿ ಭೂಮಿಯಲ್ಲಿ ತುಂಬಿಕೊಳ್ಳುತ್ತಿದೆ. ಇದನ್ನು ಸರಿಪಡಿಸಿಕೊಡುವಂತೆ ಮನವಿ ಸಲ್ಲಿಸಿದರೂ ಇದುವರೆಗೆ ಇದನ್ನು ಸರಿಪಡಿಸಲಾಗಿಲ್ಲ ಎನ್ನುವುದು ಈ ಮನೆಯವರ ಆರೋಪ.

ಮಾತ್ರವಲ್ಲದೇ ಗಂಗಾಕಲ್ಯಾಣ ಯೋಜನೆಯಡಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆಂದು ಶಾಸಕರು ಭರವಸೆ ನೀಡಿದ್ದರು. ಇದನ್ನು ಇದುವರೆಗೂ ನೀಡಿಲಾಗಿಲ್ಲ. ಹೀಗಾಗಿ ನಮ್ಮ ಮನೆಯ ಕಡೆಗೆ ರಾಜಕಾರಣಿಗಳು ಬರಬೇಡಿ ಎಂದು ಮುಂಡೋಳಿಮೂಲೆ ಮನೆಯವರು ಈ ರೀತಿ ಬ್ಯಾನರ್ ಅಳವಡಿಕೆ ಮಾಡಿದ್ದಾರೆ ಎನ್ನಲಾಗಿದೆ.

ಕಷ್ಟಕ್ಕೆ ಸ್ಪಂದಿಸದ ಸರ್ಕಾರ; ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಮೇಗರವಳ್ಳಿ ಗ್ರಾಮಸ್ಥರು

ತೀರ್ಥಹಳ್ಳಿ: ಕರ್ನಾಟಕವು ವಿಧಾನಸಭಾ ಚುನಾವಣೆಯ(Karnataka Election) ಹೊಸ್ತಿಲಲ್ಲಿದೆ. ಬಹುಮುಖ್ಯವಾದ ಮತದಾನದ ಬಗ್ಗೆ ಎಲ್ಲೆಡೆ ಅರಿವು ಮೂಡಿಸಲಾಗುತ್ತಿದೆ. ಆದರೆ, ಈ ಸಂದರ್ಭದಲ್ಲಿ ತೀರ್ಥಹಳ್ಳಿಯ ಕೆಲವು ಗ್ರಾಮಗಳ ಜನರು ಚುನಾವಣೆ ಬಹಿಷ್ಕಾರ ಮಾಡುವುದಕ್ಕೆ ಮುಂದಾಗಿದ್ದಾರೆ. ತಮ್ಮ ಕಷ್ಟಗಳಿಗೆ ಸರ್ಕಾರ ಸ್ಪಂದಿಸಿಲ್ಲ ಎನ್ನುವುದು ಅವರ ದೂರಾಗಿದೆ.

ಮೇಗರವಳ್ಳಿಯ ವ್ಯಾಪ್ತಿಯಲ್ಲಿ ಬರುವ ಅಣ್ಣುವಳ್ಳಿ, ಉದ್ದಿನ ಹಕ್ಲು ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ರಸ್ತೆ ಸಂಪರ್ಕ ಕಲ್ಪಿಸಿಕೊಡಿ ಎಂದು ಸತತವಾಗಿ ಮನವಿ ಮಾಡಿದರೂ ಜಿಲ್ಲಾಡಳಿತ ಹಾಗೂ ಸರ್ಕಾರ ಸ್ಪಂದನೆ ನೀಡಿಲ್ಲ ಎಂದು ಅವರು ದೂರಿದ್ದಾರೆ.

ಈ ಎರಡೂ ಗ್ರಾಮಗಳಲ್ಲಿ ಅಂದಾಜು 200 ಮಂದಿ ಸಾರ್ವಜನಿಕರು, ಶಾಲಾ ಮಕ್ಕಳು ಪ್ರತಿದಿನ ಬೇರೆ ಬೇರೆ ಸ್ಥಳಗಳಿಗೆ ಓಡಾಡುತ್ತಾರೆ. ಇಲ್ಲಿಂದ ತೀರ್ಥಹಳ್ಳಿ ಹಾಗೂ ಮೇಗರವಳ್ಳಿಗೆ ಸಂಪರ್ಕ ಮಾಡಲು ಒಂದು ಶಿಥಿಲಗೊಂಡ ಕಾಲು ಸೇತುವೆ ಇದೆ. ಇದನ್ನೂ ಸುಸ್ಥಿತಿಯಲ್ಲಿ ಇಟ್ಟಿಲ್ಲ. ಪ್ರತಿದಿನ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮುಗಿಯಬಹುದಾದ ಓಡಾಟಕ್ಕೆ 4 ಕಿಲೋ ಮೀಟರ್ ಸುತ್ತಾಡಿ ಬರಬೇಕಿದೆ. ಅಲ್ಲದೆ ಈಗ ಓಡಾಟ ನಡೆಸುತ್ತಿರುವ ದಾರಿಯಲ್ಲಿ ಖಾಸಗಿ ಜಮೀನು ಹೊಂದಿರುವವರು ಬೇಲಿ ಹಾಕಿಕೊಂಡಿದ್ದು, ಓಡಾಟಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸದಿದ್ದರೆ ಈ ಬಾರಿ ಮತದಾನ ಬಹಿಷ್ಕಾರ ಮಾಡುವುದು ಅನಿವಾರ್ಯ ಎಂದು ಮುಖಂಡರಾದ ವೆಂಕಟೇಶ್ ಹೆಗ್ಡೆ, ಅಜಿತ್ ಅಣ್ಣುವಳ್ಳಿ ಮುಂತಾದವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ Karnataka Election: ಟಿಕೆಟ್ ಕೊಡದಿದ್ದರೆ ಮತದಾನ ಬಹಿಷ್ಕಾರ; ಎಚ್.ಡಿ.ಕೋಟೆ ತಾಲೂಕಿನ ಆದಿವಾಸಿಗಳ ಎಚ್ಚರಿಕೆ

Exit mobile version