Site icon Vistara News

Karnataka Elections 2023: ತೀರ್ಥಹಳ್ಳಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಯಡೂರು ರಾಜಾರಾಮ್‌ ಏಪ್ರಿಲ್‌ 17ರಂದು ಕಣ ಪ್ರವೇಶ

Theerthahalli JDS

#image_title

ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ (Karnataka Elections 2023) ಜನತೆ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಮನ್ನಣೆ ನೀಡಲಿದ್ದಾರೆ. ಜೆಡಿಎಸ್ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಂ ವ್ಯಕ್ತಪಡಿಸಿದರು. ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಆರಗ ಜ್ಞಾನೇಂದ್ರ ಮತ್ತು ಕಾಂಗ್ರೆಸ್‌ನಿಂದ ಕಿಮ್ಮನೆ ರತ್ನಾಕರ್‌ ಕಣದಲ್ಲಿದ್ದು, ಯಡೂರು ರಾಜಾರಾಂ ತ್ರಿಕೋನ ಹೋರಾಟದ ಕಣಕ್ಕೆ ಏಪ್ರಿಲ್‌ 17ರಂದು ಪ್ರವೇಶ ಪಡೆಯಲಿದ್ದಾರೆ.

ಶನಿವಾರ ಪಟ್ಟಣದ ಕೊಪ್ಪ ಸರ್ಕಲ್ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 17ರ ಸೋಮವಾರ ಮಧ್ಯಾಹ್ನ 12:30ಕ್ಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. ಕೆಟಿಕೆಯಿಂದ ರ್‍ಯಾಲಿ ನಡೆಯಲಿದೆ. ಆ ನಂತರದಲ್ಲಿ ಕ್ಷೇತ್ರಾದ್ಯಂತ ಪ್ರಚಾರ ಆರಂಭ ಮಾಡಲಿದ್ದೇನೆ ಎಂದರು. ಈ ಬಾರಿ ಎಲ್ಲಾ ಕಡೆ ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂಬುದಾಗಿ ಹೇಳುತ್ತಿದ್ದಾರೆ. ಹಾಗಾಗಿ, ಈ ಬಾರಿ ಜೆಡಿಎಸ್ ಪಕ್ಷ ಗೆಲ್ಲುವ ಸಾಧ್ಯತೆ ಇದೆ ಎಂದರು.

ಗೃಹ ಸಚಿವರು ಮಾಡಿದ್ದು ರಸ್ತೆ ಅಭಿವೃದ್ಧಿ ಮಾತ್ರ

ʻʻ3,000 ಕೋಟಿ ಕಾಮಗಾರಿ ತಂದಿದ್ದೇನೆ ಎಂದು ಗೃಹ ಸಚಿವರು ಹೇಳುತ್ತಾರೆ. ಆದರೆ ಮಾಡಿರುವುದು ರಸ್ತೆ ಮಾತ್ರ, ರಸ್ತೆಯೊಂದೇ ಅಭಿವೃದ್ಧಿ ಅಲ್ಲ. ಪಟ್ಟಣದ ಕುಶಾವತಿ ಪಾರ್ಕ್‌ ಹಾಳಾಗಿದೆ. ಅದನ್ನು ಇಲ್ಲಿಯವರೆಗೆ ಕಣ್ಣೆತ್ತಿ ಕೂಡ ನೋಡಿಲ್ಲ. ಗೆಲ್ಲುವವರೆಗೆ ಮಾತ್ರ ಏನೂ ಇಲ್ಲ. ಗೆದ್ದ ಮೇಲೆ ಎಲ್ಲರೂ ಕಂಟ್ರಾಕ್ಟರ್ ಆಗುತ್ತಾರೆ. ಈ ಬಾರಿಯ ಚುನಾವಣೆಯಲ್ಲಿ ಇಬ್ಬರೂ ಹಣದ ಹೊಳೆ ಹರಿಸಲು ಹೊರಟಿದ್ದಾರೆ. ಆದರೆ ಜನರಿಗೆ ಈ ಎರಡೂ ಪಕ್ಷಗಳ ಕುರಿತು ನಿರಾಸೆ ಇದ್ದು ಬದಲಾವಣೆ ಬಯಸಿದ್ದಾರೆʼʼ ಎಂದರು.

ಯುವಕರಿಗೆ ಊರಿನಲ್ಲೇ ಉದ್ಯೋಗ ಸಿಗಬೇಕು

ʻʻತೀರ್ಥಹಳ್ಳಿಯ ಯುವಕರು ವೃತ್ತಿ ಬದುಕಿಗೆ ಬೆಂಗಳೂರಿಗೆ ಹೋಗುತ್ತಿದ್ದಾರೆ. ಅವರೆಲ್ಲರಿಗೂ ಇಲ್ಲೇ ಉದ್ಯೋಗ ಸಿಗುವ ಹಾಗೆ ಮಾಡಬೇಕು. ಈ ಕ್ಷೇತ್ರದಲ್ಲೇ ಉದ್ಯೋಗ ಸೃಷ್ಟಿ ಆಗಬೇಕು. ತಾಲೂಕು ಪಂಚಾಯತ್ ಕಟ್ಟಡದಿಂದ ಏನು ಅನುಕೂಲ ಇಲ್ಲ. ಕಟ್ಟಡ ನೋಡಲು ಬದಲಾಗಿದೆಯೇ ಹೊರತು ಬೇರೆ ಏನು ಬದಲಾಗಿಲ್ಲ. ಈ ಕಟ್ಟಡದಿಂದ ಜನರಿಗೆ ಉದ್ಯೋಗ ಸೃಷ್ಟಿ ಮಾಡಲು ಇವರಿಗೆ ಆಗಲಿಲ್ಲ. ದುಡಿಯುವ ಕೈಗಳಿಗೆ ಫಾಕ್ಟರಿ ಮಾಡಿಲ್ಲ. ಜನರಿಗೆ ಅನುಕೂಲ ಆಗುವ ಬದಲು ಕಂಟ್ರಾಕ್ಟರ್ ಗೆ ಹಣ ಮಾಡಿಕೊಟ್ಟಿದ್ದಾರೆʼʼ ಎಂದು ರಾಜರಾಮ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುಣಜೆ ಕಿರಣ್, ತಲಬಿ ರಾಘವೇಂದ್ರ, ಮಹೇಂದ್ರ ಗೌಡ, ನಟರಾಜ್ ಹೆಗಡೆ, ದೇವಪ್ಪ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ : Karnataka Elections : ಹತ್ತನೇ ವಿಧಾನಸಭಾ ಚುನಾವಣೆ ಎದುರಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ರೆಡಿ, ಏ. 18ರಂದು ನಾಮಪತ್ರ

Exit mobile version