Site icon Vistara News

ಮಂಗಳೂರಿನ ವೈದ್ಯ ಡಾ.ಅಣ್ಣಯ್ಯ ಕುಲಾಲ್‌ಗೆ ಸರ್ಕಾರದ ದೇವರಾಜ ಅರಸು ಪ್ರಶಸ್ತಿ

devaraj arasu award

ಬೆಂಗಳೂರು: ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃಧ್ಧಿಗಾಗಿ ಶ್ರಮಿಸಿದ ಮಹಾನ್‌ ಚೇತನ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸುರವರ ಹೆಸರಿನಲ್ಲಿ ಕರ್ನಾಟಕ ಸರ್ಕಾರವು ನೀಡುವ ಡಿ ದೇವರಾಜ ಅರಸು ರಾಜ್ಯ ಮಟ್ಟದ ಪ್ರಶಸ್ತಿಗೆ (devaraj arasu award) ಮಂಗಳೂರಿನ ಡಾ. ಅಣ್ಣಯ್ಯ ಕುಲಾಲ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಯು ರೂ.5.00 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಅರಸುರವರ 107ನೇ ಜನ್ಮ ದಿನಾಚರಣೆಯ ದಿನದಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪ್ರಶಸ್ತಿ ಪ್ರದಾನ ಮಾಡುವರು.

ಹಿಂದುಳಿದ ವರ್ಗಗಳ ಆಯೋಗ ಮಾಜಿ ಸದಸ್ಯ, ಪ್ರಾಧ್ಯಾಪಕ ಡಾ.ಗುರುಲಿಂಗಯ್ಯ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಡಾ.ಅಣ್ಣಯ್ಯ ಕುಲಾಲ್‌ ಅವರನ್ನು ಆಯ್ಕೆ ಮಾಡಿದೆ.

ಡಾ.ಅಣ್ಣಯ್ಯ ಕುಲಾಲ್ ಪರಿಚಯ

ಡಾ. ಅಣ್ಣಯ್ಯ ಕುಲಾಲ್ ಅವರು ಉಡುಪಿ ಜಿಲ್ಲೆಯ ಕೋಟ ಬಳಿಯ ತೆಕ್ಕಟ್ಟೆಯವರು. 01.06.1970ರಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಉಳ್ತೂರು ಮತ್ತು ಕೆದೂರು ಗ್ರಾಮಗಳಲ್ಲಿ, ಬಿ ಎಸ್ಸಿ ಪದವಿಯನ್ನು ಕುಂದಾಪುರದ ಭಂಡಾರ್ಕರ್ಸ್‌ ಕಾಲೇಜಿನಲ್ಲಿ, ಎಂ.ಬಿ.ಬಿ.ಎಸ್‌ ಪದವಿಯನ್ನು ಕಸ್ತೂರಿ ಬಾ ಮೆಡಿಕಲ್‌ ಕಾಲೇಜಿನಲ್ಲಿ ಹಾಗೂ ಎಂ ಬಿ ಎ ಪದವಿಯನ್ನು ಅಲಗಪ್ಪ ವಿಶ್ವ ವಿದ್ಯಾಲಯದಿಂದ ಪಡೆದಿದ್ದಾರೆ.

ತಮ್ಮ ಪ್ರಾಥಮಿಕ ಮತ್ತು ಪದವಿ ವಿದ್ಯಾರ್ಥಿ ಜೀವನವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಪಡೆದ ಡಾ.ಅಣ್ಣಯ್ಯ ಕುಲಾಲ್‌ ತನ್ನ ಸಮಾಜಮುಖಿ, ಜಾತ್ಯಾತೀತ ಚಿಂತನೆಯಿಂದ ಬಡವರ, ನೊಂದವರ, ನಿರ್ಗತಿಕರಿಗೆ ವೈದ್ಯಕೀಯ ಸೇವೆ ನೀಡುವ ಮೂಲಕ ಕರಾವಳಿ-ಮಲೆನಾಡು ಭಾಗವಲ್ಲದೇ ಇಡೀ ರಾಜ್ಯದಲ್ಲಿಯೇ ಉತ್ತಮ ವೈದ್ಯ ಹಾಗೂ ಸಮಾಜ ವಿಜ್ಞಾನಿ ಎಂದು ಗುರುತಿಸಿಕೊಂಡಿರುತ್ತಾರೆ.

ಇವರಿಗೆ ಡಾ: ಬಿ ಸಿ ರಾಯ್‌ ಜೀವಮಾನ ಸಾಧನೆ ಪ್ರಶಸ್ತಿ, ರಾಷ್ಟ್ರೀಯ ಐ ಎಂ ಎ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು, ಗೌರವ ಪುರಸ್ಕಾರಗಳು ದೊರೆತಿವೆ. ಶ್ರೀನಿವಾಸ್‌ ಯೂನಿವರ್ಸಿಟಿ ಹಾಗೂ ಶ್ರೀನಿವಾಸ್‌ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸಂಬಂಧಿತ ಪ್ಯಾಲಿಯೇಟೀವ್‌ ವಿಭಾಗದಲ್ಲಿ ಬಡವರಿಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ| ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ʼಜೀವನದಿʼ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Exit mobile version