Site icon Vistara News

ಭೀಕರ ಮಳೆಗೆ ನಲುಗಿದ ಕರುನಾಡು; ಕರಾವಳಿಯಲ್ಲಿ ಮುಂದುವರಿದ ರೆಡ್‌ ಅಲರ್ಟ್

ಮಳೆ

ಬೆಂಗಳೂರು: ಭೀಕರ ಮಳೆಗೆ ಕರುನಾಡು ತತ್ತರಿಸಿದ್ದು, ವಿವಿಧೆಡೆ ಅಪಾರ ಪ್ರಮಾಣದ ಬೆಳೆ ಹಾಗೂ ಮನೆಗಳಿಗೆ ಹಾನಿಯಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಕೆರೆ-ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯಿಂದ ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿದ್ದು, ವಿವಿಧೆಡೆ ಮಳೆಯಿಂದ ಶಾಲಾ-ಕಾಲೇಜಿಗಳಿಗೆ ರಜೆ ಘೋಷಿಸಲಾಗಿದೆ. ಕರಾವಳಿಯಲ್ಲಿ ಇನ್ನೂ ಎರಡು ದಿನ ರೆಡ್ ಅಲರ್ಟ್ ಮುಂದುವರಿದಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಜುಲೈ 11ರ ವರೆಗೂ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ. ಜುಲೈ 10, 11 ರಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಜುಲೈ 12, 13 ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಜುಲೈ ೧೩ರವರೆಗೆ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಕಳೆದೊಂದು ವಾರದಿಂದ ಮಳೆ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಜಲಾಶಯ, ನದಿ ಪಾತ್ರದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಬೆಳೆಗಳಿಗೆ ಹಾನಿಯಾಗಿರುವುದು.

ಪುನರ್ವಸು ಮಳೆಯ ಅಬ್ಬರಕ್ಕೆ ಕಾಫಿ ಬೆಳೆ ನಷ್ಟ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಗೆ ಕಾಫಿ ಬೆಳೆ ನಾಶವಾಗುತ್ತಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ನೂರಾರು ಎಕರೆಯಲ್ಲಿ ಬೆಳೆದು ನಿಂತಿದ್ದ ಕಾಫಿ ಫಸಲು ಮಣ್ಣು ಪಾಲಾಗುತ್ತಿದೆ. ಮೂಡಿಗೆರೆ, ಚಿಕ್ಕಮಗಳೂರು, ಶೃಂಗೇರಿ ಭಾಗದಲ್ಲಿ ಅತಿ ಹೆಚ್ಚು ಕಾಫಿ ಬೆಳೆ ನಷ್ಟವಾಗಿದ್ದು, ಪುನರ್ವಸು ಮಳೆಯ ಅಬ್ಬರಕ್ಕೆ ಕಾಫಿ ಬೆಳೆಗಾರರು ಕೈ ಸುಟ್ಟುಕೊಂಡಿದ್ದಾರೆ. ಇನ್ನು ಜಿಲ್ಲೆಯ ಮಣಬೂರಿನಲ್ಲಿ ಭಾರಿ ಮಳೆಗೆ ಕಿರು ಸೇತುವೆ ಕುಸಿದಿದೆ. ಏಕಾಏಕಿ ರಸ್ತೆ ಕುಸಿತದಿಂದ ಜನಸಾಮಾನ್ಯರಲ್ಲಿ ಆತಂಕ ಉಂಟಾಗಿದ್ದು, ಕೊಪ್ಪ ತಾಲೂಕಿನ ಬಸರಿಕಟ್ಟೆಯ ಸಮೀಪ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದಿವೆ. ಮೂಡಿಗೆರೆ ತಾಲೂಕಿನ ದುರ್ಗದ ಹಳ್ಳಿ ಗ್ರಾಮದಲ್ಲಿ ಮಳೆಯಿಂದ ಸುನೀಲ್ ಎಂಬುವವರ ಮನೆ ಏಕಾಏಕಿ ಕುಸಿದು ಬಿದ್ದಿದ್ದು, ಪೀಠೋಪಕರಣಗಳು, ಸಾಮಗ್ರಿಗಳು ಜಖಂಗೊಂಡಿವೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದುರ್ಗದ ಹಳ್ಳಿಯಲ್ಲಿ ಮಳೆಯಿಂದ ಮನೆ ಕುಸಿದಿದೆ.

ವಾಡಿಕೆಗಿಂತ ಶೇ.88ರಷ್ಟು ಹೆಚ್ಚುವರಿ ಮಳೆ
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ವಾಡಿಕೆಗಿಂತ ಶೇ.88ರಷ್ಟು ಹೆಚ್ಚುವರಿ ಮಳೆಯಾಗಿದೆ. ಜಿಲ್ಲೆಯಲ್ಲಿ 12 ಕೆರೆ ಏರಿಗಳು ಒಡೆದಿದ್ದು, 4 ಮನೆಗಳಿಗೆ ಪೂರ್ಣ ಹಾನಿ, 58 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಒಂದು ಜಾನುವಾರು ಮೃತಪಟ್ಟಿದೆ. ಇನ್ನು 265 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ, 20 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳಗಳ ಬೆಳೆ ಹಾನಿಯಾಗಿದೆ. 12 ರಸ್ತೆ, 6 ಸೇತುವೆಗಳಿಗೆ ಹಾನಿಯಾಗಿದ್ದು, 210 ವಿದ್ಯುತ್ ಕಂಬಗಳು ಹಾಗೂ 44 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. 67 ಗ್ರಾಮ ಪಂಚಾಯಿತಿಗಳ 163 ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ನೆರೆ ಸಂದರ್ಭದಲ್ಲಿ ಕ್ಷಿಪ್ರ ಕಾರ್ಯಾಚರಣೆಗೆ 5 ಬೋಟ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಪ್ರಸ್ತುತ ಎಸ್‍ಡಿಆರ್‌ಎಫ್ ಖಾತೆಯಲ್ಲಿ 19 ಕೋಟಿ ರೂ. ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದ್ದಾರೆ.

ಇದನ್ನೂ ಓದಿ | ಮನೆಯೊಳಗೆ ನೀರು ನುಗ್ಗಿದರೆ ₹10 ಸಾವಿರ ಪರಿಹಾರ: ಮಳೆ ಹಾನಿ ಕುರಿತು ಸಿಎಂ ಬೊಮ್ಮಾಯಿ ಸಭೆ

ಹಾಸನದಲ್ಲಿ ಮುಂದುವರಿದ ಭಾರಿ ಮಳೆ
ಹಾಸನ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಸಕಲೇಶಪುರ, ಆಲೂರು, ಹಾಸನ, ಅರಕಲಗೂಡು, ಬೇಲೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಹೇಮಾವತಿ ನದಿಗೆ 17641 ಕ್ಯೂಸೆಕ್ ಒಳಹರಿವು ಇದ್ದು, ಸದ್ಯ ಜಲಾಶಯದಲ್ಲಿ ನೀರಿನ ಮಟ್ಟ 2917.15 ಅಡಿ ಇದೆ. ಜಲಾಶಯ ಭರ್ತಿಗೆ ಐದು ಅಡಿ ಬಾಕಿ ಇದೆ.

ಕೊಡಗಿ‌ನಲ್ಲಿ ಬೃಹತ್ ವಾಹನಗಳ ಸಂಚಾರಕ್ಕೆ ನಿಷೇಧ
ಕೊಡಗು: ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುಂದುವರಿದ ಹಿನ್ನೆಲೆಯಲ್ಲಿ 16,200 ಕೆ.ಜಿಗಿಂತ ಹೆಚ್ಚಿನ ತೂಕದ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಿ ಜಿಲ್ಲಾಧಿಕಾರಿ ಬಿ‌.ಸಿ.ಸತೀಶ ಆದೇಶ ಹೊರಡಿಸಿದ್ದಾರೆ.
ಅಡುಗೆ ಅನಿಲ, ಇಂಧನ ಪೂರೈಕೆ, ಹಾಲು ಪೂರೈಕೆ, ಸರ್ಕಾರಿ ವಾಹನಗಳು ಹೊರತುಪಡಿಸಿ ಮರದ ದಿಮ್ಮಿ, ಮರಳು ಸಾಗಿಸುವ, ಟ್ಯಾಂಕರ್, ಕಾರ್ಗೋ ಕಂಟೈನರ್, ಲಾಂಗ್ ಚಾಸೀಸ್ (ಮಲ್ಟಿ ಆ್ಯಕ್ಸೆಲ್) ಮತ್ತಿತರ ಬೃಹತ್‌ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ.

ಕೃಷ್ಣಾ ನದಿಯಲ್ಲಿ ಹೆಚ್ಚಾದ ನೀರಿನ ಹರಿವು
ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಒಳಹರಿವಿನ ಪ್ರಮಾಣದ ಹೆಚ್ಚಾಗಿದೆ. ಶುಕ್ರವಾರ 70 ಸಾವಿರ ಕ್ಯೂಸೆಕ್ ಒಳ ಹರಿವು ಹೊಂದಿದ್ದ ಕೃಷ್ಣೆ ಹರಿವಿನ ಪ್ರಮಾಣ ಶನಿವಾರ ಮತ್ತೆ ಹೆಚ್ಚಾಗಿದೆ. ಕಲ್ಲೋಳ ಬ್ಯಾರೇಜ್ ಬಳಿ 80 ಸಾವಿರ ಕ್ಯೂಸೆಕ್‌ ಒಳಹರಿವು ಇದ್ದು, ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ತಗ್ಗಿದರೆ ಒಳ ಹರಿವು ಕಡಿಮೆಯಾಗಲಿದೆ.

ಸೌಪರ್ಣಿಕಾ ನದಿ ತಟದಲ್ಲಿ ನೆರೆ ಸೃಷ್ಟಿ

ಉಡುಪಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಬೀಳುತ್ತಿರುವುದರಿಂದ ಸೌಪರ್ಣಿಕಾ ನದಿ ತಟದಲ್ಲಿ ನೆರೆ ಸೃಷ್ಟಿಯಾಗಿದೆ. ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಸ್ಥಳಕ್ಕೆ ಕುಂದಾಪುರ ಎಸಿ ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆರೆ ಪೀಡಿತ ಪ್ರದೇಶದ ಜನರ ಜತೆ ಮಾತುಕತೆ ನಡೆಸಿದ ಅವರು, ದೋಣಿ ನಡೆಸುವವರಿಗೆ ಲೈಫ್ ಸೇವಿಂಗ್ ಜಾಕೆಟ್‌, ಟ್ಯೂಬ್ ಹಂಚಿಕೆ ಮಾಡಲಾಗುತ್ತದೆ ಎಂದು
ಭರವಸೆ ನೀಡಿದರು.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಗ್ರಾಮ ಜಲಾವೃತವಾಗಿರುವುದು.

ಗೋಡೆ ಕುಸಿದು ವೃದ್ಧ ಮಹಿಳೆ ಸಾವು
ಕಲಬುರಗಿ: ಜಿಲ್ಲೆಯಲ್ಲಿ ಶನಿವಾರ ಹಾಗೂ ಭಾನುವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.‌ ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಶಿಕ್ಷಣ ಸಂಸ್ಥೆಗಳಿಗೆ ಶನಿವಾರ ಜಿಲ್ಲಾಡಳಿತ ರಜೆ ಘೋಷಣೆ ‌ಮಾಡಿತ್ತು. ಅಧಿಕಾರಿಗಳು ‌ಮುಂದಿನ ಆದೇಶದವರೆಗೂ ಕೇಂದ್ರ ಸ್ಥಾನದಲ್ಲಿಯೇ ಇರುವಂತೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶಿಸಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ನಗರ ಸೇರಿ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗುತ್ತಿದೆ. ಚಿತ್ತಾಪುರ ಪಟ್ಟಣದಲ್ಲಿ ಮನೆ ಗೋಡೆ ಕುಸಿದು ಆರೀಫಾ ಬೇಗಂ (60) ವೃದ್ಧ ಮಹಿಳೆ ಮೃತಪಟ್ಟಿದ್ದಾರೆ.

ಮಂಗಳೂರಿನಲ್ಲಿ ಹೆಚ್ಚಾದ ಕಡಲ್ಕೊರೆತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ‌ಮಳೆ ಅನಾಹುತದ ನಡುವೆ ಕಡಲ್ಕೊರೆತ ಹೆಚ್ಚಾಗಿದೆ. ಮಂಗಳೂರಿನ ಬೈಕಂಪಾಡಿ, ಮೀನಕಳಿಯ ಭಾಗದಲ್ಲಿ ಕಡಲ್ಕೊರೆತ ತೀವ್ರತೆಗೆ ಮೀನುಗಾರರ ಹರಾಜು ಕೇಂದ್ರ ಸಮುದ್ರ ಪಾಲಾಗಿದೆ. ಇನ್ನು ಕಾಂಕ್ರಿಟ್ ರಸ್ತೆಯ ಅಡಿಭಾಗವನ್ನೇ ಸಮುದ್ರದ ಅಲೆಗಳು ಕೊಚ್ಚಿಕೊಂಡು ಹೋಗಿವೆ. ಮತ್ತಷ್ಟು ಅಲೆಯ ಅಬ್ಬರ ಹೆಚ್ಚಾದರೆ ಇಡೀ ಕಾಂಕ್ರಿಟ್ ರಸ್ತೆ ನೀರುಪಾಲಾಗುವ ಸಾಧ್ಯತೆಯಿದ್ದು, ರಸ್ತೆಯ ಅಂಚಿನಲ್ಲಿರುವ ಹತ್ತಕ್ಕೂ ಅಧಿಕ ಮನೆಗಳು ಅಪಾಯದಲ್ಲಿವೆ.

ಇದನ್ನೂ ಓದಿ | Rain News | ನಿಲ್ಲದ ಮಳೆ ಗೋಳು, ಜಲಾವೃತ ಪ್ರದೇಶಗಳು ಸಾಲು ಸಾಲು

ಕಾವೇರಿ ನದಿ ಪಾತ್ರದ ಜನರಿಗೆ ಎಚ್ಚರಿಕೆ
ಮಂಡ್ಯ: ಜಿಲ್ಲೆಯ ಕೆ.ಆರ್.ಎಸ್‌ ಜಲಾಶಯ ಭರ್ತಿಗೆ ಇನ್ನು 3 ಅಡಿ ಮಾತ್ರ ಬಾಕಿಯಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯವುಳ್ಳ ಅಣೆಕಟ್ಟೆಯಲ್ಲಿ ಸದ್ಯ 121.41 ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವಿನ ಪ್ರಮಾಣ 34,304 ಕ್ಯೂಸೆಕ್ ಇದ್ದು, ಹೊರ ಹರಿವಿನ ಪ್ರಮಾಣ 5792 ಕ್ಯೂಸೆಕ್ ಇದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 44.873 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನು 3-4 ದಿನದಲ್ಲಿ ಕೆ.ಆರ್.ಎಸ್ ಡ್ಯಾಂ ಸಂಪೂರ್ಣ ಭರ್ತಿ ಸಾಧ್ಯತೆಯಿದೆ.

ಮಳೆ ಮುಂದುವರಿದರೆ ಡ್ಯಾಂನಿಂದ ಯಾವುದೇ‌ ಕ್ಷಣದಲ್ಲಾದರೂ ಜಲಾಶಯದಿಂದ ನೀರನ್ನು ಹೊರ ಬಿಡಬಹುದು. ಹೀಗಾಗಿ ಕಾವೇರಿ ಪಾತ್ರದ ಜನರು ಜಾಗ್ರತೆಯಿಂದ ಇರಬೇಕು ಎಂದು ಕಾವೇರಿ ನೀರಾವರಿ ನಿಗಮದಿಂದ ಎಚ್ಚರಿಕೆ ನೀಡಬೇಕು. ಸದ್ಯ 10 ರಿಂದ 25 ಸಾವಿರ ಕ್ಯೂಸೆಕ್‌ವರೆಗೆ ಹೊರ ಹರಿವಿನ ಮುನ್ಸೂಚನೆ ನೀಡಲಾಗಿದೆ.

ಕಬಿನಿ ಡ್ಯಾಂ ಭರ್ತಿಗೆ ೪ ಅಡಿ ಬಾಕಿ

ಮೈಸೂರು: ಕಾವೇರಿ ಕೊಳ್ಳದಲ್ಲಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಭರ್ತಿಗೆ ಇನ್ನು 4 ಅಡಿ ಮಾತ್ರ ಬಾಕಿ ಇದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿ ಇದ್ದು, ಸದ್ಯ ನೀರಿನ ಮಟ್ಟ 2280.52 ಅಡಿ ಇದೆ. ಒಳ ಹರಿವಿನ ಪ್ರಮಾಣ‌ 14,484 ಕ್ಯೂಸೆಕ್‌, ಹೊರ ಹರಿವು 4000 ಕ್ಯೂಸೆಕ್‌ ಇದೆ. ಯಾವುದೇ ಕ್ಷಣದಲ್ಲೂ ಜಲಾಶಯದಿಂದ ನದಿಗೆ ಹೆಚ್ಚು ನೀರು ಬಿಡುವ ಸಾಧ್ಯತೆಯಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ.

ಯಾದಗಿರಿಯಲ್ಲಿ ಪ್ರವಾಹ ಭೀತಿ

ಯಾದಗಿರಿ: ಮಹಾರಾಷ್ಟ್ರದಲ್ಲಿ ಭೀಕರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನದಿ ಪಾತ್ರದ ಗ್ರಾಮಗಳಲ್ಲಿ ಡಂಗುರ ಸಾರಿ ಜಾಗೃತಿ ಮೂಡಿಸಲಾಗುತ್ತಿದೆ. ಯಾವುದೇ ಕ್ಷಣದಲ್ಲಾದರೂ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನದಿ ನೀರು ಬಿಡುವ ಸಾಧ್ಯತೆ ಇರುವುದರಿಂದ ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ತಗ್ಗು ಪ್ರದೇಶಗಳ ಜನರ ಸ್ಥಳಾಂತರ

ಉಡುಪಿ: ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದ್ದು, ಕೋಟ ಪರಿಸರದ ಬನ್ನಾಡಿ, ಉಪ್ಲಾಡಿ, ಬೆಟ್ಲಕ್ಕಿಯಲ್ಲಿ ನೆರೆ ಸೃಷ್ಟಿಯಾಗಿದೆ. ಎರಡು ದಿನಗಳ ಹಿಂದೆ ನೆರೆ ಬಹುತೇಕ ಇಳಿಮುಖವಾಗಿತ್ತು. ಆದರೆ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಮತ್ತೆ ನೆರೆ ಆತಂಕ ಎದುರಾಗಿದೆ. ತಗ್ಗು ಪ್ರದೇಶಗಳ ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಶನಿವಾರ ಕೂಡ ಹವಾಮಾನ ಇಲಾಖೆ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಿತ್ತು.

ಇದನ್ನೂ ಓದಿ | Rain News | ನಿಲ್ಲದ ಮಳೆ ಗೋಳು, ಜಲಾವೃತ ಪ್ರದೇಶಗಳು ಸಾಲು ಸಾಲು

Exit mobile version