Site icon Vistara News

ಜೂ.24ರಂದು ಕನ್ನಡ ಬರಹಗಾರರ, ಪ್ರಕಾಶಕರ ಸಂಘದ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ

kannada barahagarara and prakashakara sangha programme invitation

#image_title

ಬೆಂಗಳೂರು: ಕರ್ನಾಟಕ ಕನ್ನಡ ಬರಹಗಾರರ ಹಾಗೂ ಪ್ರಕಾಶಕರ ಸಂಘದಿಂದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಹಕಾರದೊಂದಿಗೆ ಜೂನ್‌ 24ರಂದು ಬೆಳಗ್ಗೆ 11 ಗಂಟೆಗೆ 20ನೇ ವಾರ್ಷಿಕೋತ್ಸವ ಹಾಗೂ 2022ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ನಗರದ ಕುಮಾರ ಪಾರ್ಕ್‌ ಪೂರ್ವದ ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿದ್ವಾಂಸ ಹಾಗೂ ಸಂಶೋಧಕ ನಾಡೋಜ ಡಾ. ಹಂಪ ನಾಗರಾಜಯ್ಯ, ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಭಾಗವಹಿಸಲಿದ್ದಾರೆ. ಕರ್ನಾಟಕ ಕನ್ನಡ ಬರಹಗಾರರು ಹಾಗೂ ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಬೆಂಗಳೂರಿನ ಬುಕ್‌ ಬ್ರಹ್ಮ ಸಂಸ್ಥೆ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಶಾಂತಿ ಪ್ರತಿಷ್ಠಾನ ಸಹಯೋಗ ನೀಡಿವೆ.

ಇದನ್ನೂ ಓದಿ | ಜೂ.16 ರಿಂದ 22ರವರೆಗೆ ಗೋವಾದಲ್ಲಿ ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವʼ

ಪ್ರಶಸ್ತಿ ಪುರಸ್ಕೃತರು

1. ಸಾಹಿತ್ಯ ರತ್ನ-2022: ಲೇಖಕ ಡಾ. ಪಿ. ಎಸ್‌. ಶಂಕರ್, ಕೃತಿ– “ವೈದ್ಯ ನಿನಗೆ ನಮೋ’’
2. ಯುವ ಸಾಹಿತ್ಯ ರತ್ನ-2022: ಲೇಖಕ ಕೌಶಿಕ್‌ ಕೂಡುರಸ್ತೆ, ಕೃತಿ– “ಒಂದು ಕೋಪಿಯ ಕಥೆ’’
3. ಪುಸ್ತಕ ರತ್ನ-2022: ಪ್ರೊ.ಬಿ.ಎನ್.‌ ಶ್ರೀರಾಮ್‌, ಪುಸ್ತಕ ಪ್ರಕಾಶನ, ಮೈಸೂರು
4. ಮುದ್ರಣ ರತ್ನ-2022: ಜಿ.ಎಚ್‌. ಕೃಷ್ಣಮೂರ್ತಿ, ಮೈಸೂರು ಪ್ರಿಂಟಿಂಗ್‌ ಆ್ಯಂಡ್‌ ಪಬ್ಲಿಷಿಂಗ್‌ ಹೌಸ್‌

ಪ್ರಶಸ್ತಿ ಪುರಸ್ಕೃತರ ಪರಿಚಯ

ಡಾ. ಪಿ.ಎಸ್. ಶಂಕರ್ (ಸಾಹಿತ್ಯ ರತ್ನ-2022)

ಕಳೆದ 60 ವರ್ಷಗಳಿಂದಲೂ ವೈದ್ಯಶಾಸ್ತ್ರವನ್ನು ಕಲಿಸುತ್ತಿರುವ ನಾಡೋಜ ಡಾ. ಪಿ.ಎಸ್. ಶಂಕರ್ ಅವರು ಇಂಗ್ಲಿಷ್ ಮತ್ತು ಕನ್ನಡದಲ್ಲಿ 240 ಪುಸ್ತಕಗಳನ್ನು ರಚಿಸಿದ್ದಾರೆ ಹಾಗೂ ಸಂಪಾದಿಸಿದ್ದಾರೆ. ಇಂಗ್ಲಿಷ್‌ನಲ್ಲಿ ವೈದ್ಯ ಪದಕೋಶವನ್ನು, ಕನ್ನಡದಲ್ಲಿ ವೈದ್ಯ ವಿಶ್ವಕೋಶವನ್ನು ರಚಿಸಿದ ಹೆಗ್ಗಳಿಕೆ ಇವರದು. ಹಲವಾರು ವಿಶ್ವವಿದ್ಯಾಲಯಗಳಿಂದ, ವಿಜ್ಞಾನ ಪರಿಷತ್ತು, ಸಾಹಿತ್ಯ ಅಕಾಡೆಮಿ ಹಾಗೂ ಸಾಹಿತ್ಯ ಪರಿಷತ್ತಿನಿಂದಲೂ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ನ್ಯಾಷನಲ್ ಚೆಸ್ಟ್ ಇನ್‌ಸ್ಟಿಟ್ಯೂಟ್‌ನಿಂದ ಅತ್ಯುತ್ತಮ ಎದೆರೋಗ ತಜ್ಞ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಶ್ವೇಶ್ವರಯ್ಯ ಹಿರಿಯ ವಿಜ್ಞಾನಿ ಪ್ರಶಸ್ತಿ, ಡಾ. ಬಿ.ಸಿ. ರಾಯ್ ರಾಷ್ಟ್ರೀಯ ಸಮರ್ಥ ಶಿಕ್ಷಕ, ಭಾರತ ಸರ್ಕಾರದ ಉತ್ತಮ ವಿಜ್ಞಾನ ಸಂವಹನಕಾರ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸದ್ಯ ಇವರು ಕಲುಬುರಗಿಯಲ್ಲಿ ವಾಸವಾಗಿದ್ದಾರೆ. ಇವರಿಗೆ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರತಿಷ್ಠಿತ 2022ನೇ ಸಾಲಿನ “ಸಾಹಿತ್ಯ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಕೌಶಿಕ್ ಕೂಡುರಸ್ತೆ (ಯುವ ಸಾಹಿತ್ಯ ರತ್ನ-2022)

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕೂಡುರಸ್ತೆ ಗ್ರಾಮದ ಕೌಶಿಕ್ ಕೂಡುರಸ್ತೆ ಅವರು ಏರೋನಾಟಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದು, 10ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಪ್ರೇಮ ಕಾದಂಬರಿ, ಕವನ ಸಂಕಲನ ಹಾಗೂ ಪತ್ತೇದಾರಿ ಕಾದಂಬರಿಗಳನ್ನು ರಚಿಸಿ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಕಿರು ಚಿತ್ರಗಳನ್ನು ಸಹ ನಿರ್ದೇಶಿಸಿದ್ದಾರೆ. ಈ ಯುವ ಪ್ರತಿಭೆಗೆ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರತಿಷ್ಠಿತ 2022ನೇ ಸಾಲಿನ “ಯುವ ಸಾಹಿತ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಪ್ರೊ. ಬಿ.ಎನ್. ಶ್ರೀರಾಮ (ಪುಸ್ತಕ ರತ್ನ-2022)

ಬೆಂಗಳೂರಿನ ಉತ್ತರ ತಾಲೂಕಿನ ಬ್ಯಾತ ಎಂಬ ಗ್ರಾಮದಲ್ಲಿ ಜನಿಸಿದ ಇವರು ಬೆಂಗಳೂರು ಮತ್ತು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಎಂ.ಎ (ಇಂಗ್ಲಿಷ್) ವಿದ್ಯಾಭ್ಯಾಸ ಮುಗಿಸಿ, ಅಧ್ಯಾಪಕರಾಗಿ ಶೃಂಗೇರಿ ಹಾಗೂ ಮೈಸೂರಿನ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ, ಮೈಸೂರಿನ ಡಿ. ಬನುಮಯ್ಯ ಕಾಲೇಜ್‌ನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದರು. ನಂತರ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಹಾಗೂ ರಾಘವೇಂದ್ರ ಅವರೊಂದಿಗೆ ಸೇರಿ “ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ನೂರಾರು ಗುಣಮಟ್ಟದ ಮೌಲ್ಯಯುತ ಪುಸ್ತಕಗಳನ್ನು ಪ್ರಕಟಿಸುತ್ತಾ ಮುನ್ನಡೆದಿದ್ದಾರೆ. ಇವರಿಗೆ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರತಿಷ್ಠಿತ 2022ನೇ ಸಾಲಿನ “ಪುಸ್ತಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಜಿ.ಎಚ್. ಕೃಷ್ಣಮೂರ್ತಿ (ಮುದ್ರಣ ರತ್ನ-2022)

ಸ್ವಾತಂತ್ರ್ಯೋತ್ತರ ಪ್ರಾರಂಭದ ದಿನಗಳಲ್ಲಿ ಮುದ್ರಣ ಕ್ಷೇತ್ರದಲ್ಲಿ ಉತ್ಕೃಷ್ಟತೆಗೆ ಪರ್ಯಾಯ ನಾಮ ಎಂದರೆ ಅದು ಮೈಸೂರು ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಹೌಸ್”, ಜಿ. ಹನುಮಂತರಾಯರ ಮಗ ಜಿ.ಎಚ್. ರಾಮರಾಯರು ಸಂಸ್ಥೆಯನ್ನು 1944ರಲ್ಲಿ ಪ್ರಾರಂಭಿಸಿ ಅನೇಕ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣರಾದರು. ಅಂದಿನ ದಿನಗಳಲ್ಲಿ ಮುದ್ರಣಾಲಯವನ್ನು ಬೆಳೆಸುವುದು ಕಷ್ಟಸಾಧ್ಯವಾಗಿತ್ತು. ಅಂತಹ ಸಮಯದಲ್ಲಿ ಬಂಡಿಯನ್ನು ಮುನ್ನಡೆಸಲು ಅವರೊಂದಿಗೆ ನೊಗಕ್ಕೆ ಹೆಗಲು ಕೊಟ್ಟವರು ಅವರ ಸಹೋದರ ಜಿ.ಎಚ್. ಕೃಷ್ಣಮೂರ್ತಿಯವರು. ಅವರ ಪರಿಶ್ರಮದ ಫಲದಿಂದಾಗಿ ಮುದ್ರಣಾಲಯ ಉನ್ನತ ಸ್ಥಾನಕ್ಕೇರಿತು. ವಯೋಸಹಜವಾಗಿ 90ರ ಹರೆಯದಲ್ಲಿ ಜಿ.ಎಚ್. ಕೃಷ್ಣಮೂರ್ತಿಯವರು ವಿಶ್ರಾಂತಿ ಜೀವನಕ್ಕೆ ತೆರಳುತ್ತಾರೆ. ನಂತರ ಅವರ ಪುತ್ರ ಜಿ.ಆರ್. ನಾಗೇಂದ್ರ “ಕರ್ನಾಟಕ ಪ್ರೆಸ್’ ಹೆಸರಿನಲ್ಲಿ ಮುಂದುವರಿಸಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಶಿಫಾರಸಿನಂತೆ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರತಿಷ್ಠಿತ 2022ನೇ ಸಾಲಿನ “ಮುದ್ರಣ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Exit mobile version