Site icon Vistara News

ಅಧಿವೇಶನ | ಶಾಸಕರು, ಗಣ್ಯರ ನಿಧನಕ್ಕೆ ಕಂಬನಿ ಮಿಡಿದ ವಿಧಾನ ಮಂಡಲ, ಅಧಿವೇಶನ ನಾಳೆಗೆ ಮುಂದೂಡಿಕೆ

Karnataka session

ಬೆಂಗಳೂರು: ಬಹು ನಿರೀಕ್ಷಿತ, ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನ ಸೋಮವಾರ ಆರಂಭವಾಗಿದ್ದು, ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಉಭಯ ಸದನಗಳನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

೧೧ ಗಂಟೆಗೆ ಉಪಭಯ ಸದನಗಳ ಕಲಾಪ ಪ್ರತ್ಯೇಕವಾಗಿ ಆರಂಭವಾಯಿತು. ವಿಧಾನ ಸಭೆಯಲ್ಲಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್‌ನಲ್ಲಿ ಸಭಾಪತಿ ರಘುನಾಥ ರಾವ್‌ ಮಲ್ಕಾಪೂರೆ ಅವರು ಸಂತಾಪ ಸೂಚಕ ಗೊತ್ತುವಳಿ ಮಂಡಿಸಿದರು. ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಉಮೇಶ್ ಕತ್ತಿ, ಮಾಜಿ ಸಚಿವ ಎಂ‌ ರಘುಪತಿ, ಪ್ರಭಾಕರ ರಾಣೆ, ಮಾಜಿ ಎಂಎಲ್ಸಿ ಎಂಡಿ ರಮೇಶ್ ರಾಜು, ಮಾಜಿ ಸಚಿವರಾದ ರಘುಪತಿ, ಪ್ರಭಾಕರ ರಾಣೆ, ಯಾದವ್ ರಾವ್, ಮಾಜಿ ಶಾಸಕರಾದ ಕೆಂಪೇಗೌಡ, ಶ್ರೀರಾಮರೆಡ್ಡಿ, ಎಂ ದೇಸಾಯಿ, ಎ.ಜಿ.ಕೊಡ್ಗಿ, ಈಶಣ್ಣ ಗುಳಗಣ್ಣ, ಸಂಗೀತ ಕ್ಷೇತ್ರದ ದಿಗ್ಗಜ ಶಿವಮೊಗ್ಗ ಸುಬ್ಬಣ್ಣ, ಸಾಹಿತಿ ಪ್ರೊ ಕೋಡಿ ಕುಶಾಲಪ್ಪಗೌಡ, ಹಾಸನದ ಖ್ಯಾತ ವೈದ್ಯ ಡಾ. ಗುರುರಾಜ ಹೆಬ್ಬಾರ್, ಖ್ಯಾತ ಸಂಗೀತ ಕಲಾವಿದ ಶಿವಕುಮಾರ್ ಶರ್ಮಾ ಅವರಿಗೆ ಸಂತಾಪ ಸಲ್ಲಿಸಲಾಯಿತು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕರಾದ ರಮೇಶ್‌ ಕುಮಾರ್‌, ಆರ್‌.ವಿ. ದೇಶಪಾಂಡೆ, ಸಿ.ಟಿ. ರವಿ, ಸಚಿವ ಗೋವಿಂದ ಕಾರಜೋಳ ಅವರು ಉಮೇಶ್‌ ಕತ್ತಿ ಮತ್ತು ಇತರರ ಬದುಕಿನ ನಾನಾ ಮುಖಗಳ ಮೇಲೆ ಬೆಳಕು ಚೆಲ್ಲಿದರು.

ವಿಧಾನ ಪರಿಷತ್‌ನಲ್ಲಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಸವರಾಜ ಹೊರಟ್ಟಿ, ಬಿ.ಕೆ. ಹರಿಪ್ರಸಾದ್‌, ಲಕ್ಷಣ ಸವದಿ, ಚನ್ನರಾಜ ಹಟ್ಟಿಹೊಳಿ, ಹನುಮಂತ ನಿರಾಣಿ, ನಾಗರಾಜ್‌ ಯಾದವ್‌ ಅವರು ಅಗಲಿದ ಗಣ್ಯರ ಜತೆಗಿನ ತಮ್ಮ ಒಡನಾಟದ ಅನುಭವಗಳನ್ನು ಹೇಳಿಕೊಂಡರು.

ಜೆಡಿಎಸ್‌ ಶಾಸಕಾಂಗ ಪಕ್ಷ ಸಭೆ
ಅಧಿವೇಶನ ಆರಂಭಕ್ಕೆ ಮುನ್ನ ಬೆಳಗ್ಗೆ ೯.೩೦ಕ್ಕೆ ವಿಧಾನಸೌಧದ ಜೆಡಿಎಸ್‌ ಕಚೇರಿಯಲ್ಲಿ ಪಕ್ಷದ ಶಾಸಕಾಂಗ ಪಕ್ಷ ಸಭೆ ನಡೆಯಿತು. ಜೆಡಿಎಸ್‌ ಸದನ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮತ್ತು ಉಪನಾಯಕ ಬಂಡೆಪ್ಪ ಕಾಶೆಂಪುರ್‌ ಅವರ ನೇತೃತ್ವದ ಸಭೆಯಲ್ಲಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕಾಗಿರುವ ವಿಚಾರಗಳ ಕುರಿತು ಚರ್ಚೆ ನಡೆಯಿತು. ಸರ್ಕಾರದ ೪೦% ಕಮಿಷನ್‌, ಮಳೆ ಹಾನಿ, ಪಿಎಸ್‌ಎ ನೇಮಕಾತಿ ಅಕ್ರಮಗಳನ್ನು ಅಸ್ತ್ರಗಳಾಗಿ ಬಳಸಲು ನಿರ್ಧರಿಸಲಾಯಿತು.

ವಿಧಾನಸಭೆ ಕಾರ್ಯಕಲಾಪ ಸಲಹಾ ಸಮಿತಿ ಸಭೆ
ವಿಧಾನಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದ ಬಳಿಕ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದಲ್ಲಿ ವಿಧಾನಸಭೆ ಕಾರ್ಯಕಲಾಪ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಸಿಎಂ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಉಪನಾಯಕ ಯು.ಟಿ ಖಾದರ್, ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಅಶೋಕ್, ಮಾಧುಸ್ವಾಮಿ, ಕಾರಜೋಳ, ಜೆಡಿಎಸ್ ನ ಎಚ್ ಕೆ ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ, ಶಾಸಕ ಸತೀಶ್ ರೆಡ್ಡಿ ಮುಂತಾದವರು ಭಾಗಿಯಾಗಿದ್ದರು.

ಇದನ್ನೂ ಓದಿ | ಅಧಿವೇಶನ | ಎಲ್ಲ ಪಕ್ಷಗಳ ಬಿ ಫಾರಂ ನನ್ನ ಕಿಸೆಯಲ್ಲಿದೆ ಅಂತಿದ್ದರು ಕತ್ತಿ, ನೆನಪು ಮಾಡಿಕೊಂಡ ಬೊಮ್ಮಾಯಿ

Exit mobile version