ಅನಿಲ್ ಕಾಜಗಾರ್ ವಿಸ್ತಾರ ನ್ಯೂಸ್ ಬೆಳಗಾವಿ
ಚುನಾವಣೆ ಘೋಷಣೆಗೂ ಮುನ್ನವೇ (Karnataka Election) ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಚುನಾವಣೆ ಅಖಾಡ ರಂಗೇರಿದೆ. ಮತದಾರರನ್ನು ಸೆಳೆಯಲು ರಾಜಕೀಯ ನಾಯಕರು ನಾನಾ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಗಿಫ್ಟ್ ಪಾಲಿಟಿಕ್ಸ್ ಜೊತೆಗೆ ಆಣೆ ಪ್ರಮಾಣ ರಾಜಕೀಯ ಸಹ ಶುರುವಾಗಿದೆ.
ಕಾಂಗ್ರೆಸ್, ಬಿಜೆಪಿ ನಾಯಕರು ಮತದಾರರನ್ನು ಸೆಳೆಯಲು ಜಿದ್ದಿಗೆ ಬಿದ್ದು ಭರಪೂರ ಉಡುಗೊರೆಗಳನ್ನು ಬಹಿರಂಗವಾಗಿಯೇ ಹಂಚುತ್ತಿದ್ದಾರೆ. ಈಗ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಮನೆ ಮನೆಗೆ ತೆರಳಿ ಆಣೆ ಪ್ರಮಾಣ ಮಾಡಿಸಿಕೊಂಡು ಮಿಕ್ಸರ್ ಗ್ರೈಂಡರ್ ಹಂಚುತ್ತಿದ್ದಾರೆಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಧನಂಜಯ ಜಾಧವ್ ಗಂಭೀರ ಆರೋಪ ಮಾಡಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಳದಿ-ಕುಂಕುಮ ಕಾರ್ಯಕ್ರಮ ನಡೆಸಿ ಆ ಮೂಲಕ ಟಿಫಿನ್ ಬಾಕ್ಸ್ ಹಂಚಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈಗ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಗ್ರಾಮೀಣ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ತೆಂಗಿನಕಾಯಿ ಮೇಲೆ ಆಣೆ ಪ್ರಮಾಣ ಮಾಡಿಸಿ ಮಿಕ್ಸರ್ ಗ್ರೈಂಡರ್ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಧನಂಜಯ ಜಾಧವ್ ಈ ಆರೋಪ ಮಾಡಿದ್ದಾರೆ.
ಇದರೊಂದಿಗೆ ಆಣೆ ಪ್ರಮಾಣ ಮಾಡಿಸುವ ಬಗ್ಗೆ ಮತದಾರರು ತರಾಟೆಗೆ ತೆಗೆದುಕೊಳ್ಳುವ ವಿಡಿಯೊಗಳನ್ನು ಧನಂಜಯ ಜಾಧವ್ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯರು ಮಿಕ್ಸರ್ ಗ್ರೈಂಡರ್ ಒಯ್ಯುತ್ತಿರುವ ವಿಡಿಯೊ ಸಹ ರಿಲೀಸ್ ಮಾಡಿದ್ದಾರೆ.
ʻʻತೆಂಗಿನಕಾಯಿ ಹಿಡಿದು ಆಣೆ ಮಾಡಿಸಿ ಮಿಕ್ಸರ್ ಗ್ರೈಂಡರ್ ನೀಡುತ್ತಿದ್ದು, ನಿಜವಾದ ಅಭಿವೃದ್ಧಿ ಮಾಡಿದ್ರೆ ಆಣೆ ಪ್ರಮಾಣ ಏಕೆ ಮಾಡಿಸ್ತಿದ್ರಿ? ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಚೇಲಾಗಳು ಪ್ರತಿ ಮನೆಗೆ ತೆರಳಿ ಆಣೆ ಮಾಡಿಸುತ್ತಿದ್ದಾರೆ. ಇದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜನರು ವಿರೋಧ ಮಾಡುತ್ತಿದ್ದಾರೆ. ನಮಗೆ ವೋಟ್ ಹಾಕಬೇಕು ಅಂತಾ ಆಣೆ ಮಾಡಿಸುತ್ತಿದ್ದಾರೆ..ಈ ರೀತಿಯ ನೀಚ ರಾಜಕಾರಣ ವಿರೋಧಿಸುವೆ. ಇನ್ನೂರು ರೂಪಾಯಿ ವಸ್ತು ನೀಡಿ ವೋಟ್ ಹಾಕಬೇಕೆಂದು ಆಣೆ ಮಾಡಿಸುತ್ತಿದ್ದೀರಾ?ʼʼ ಎಂದು ಕಿಡಿಕಾರಿದ್ದಾರೆ.
ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರ. ತನ್ನ ರಾಜಕೀಯ ಬದ್ಧವೈರಿ ಲಕ್ಷ್ಮೀ ಹೆಬ್ಬಾಳ್ಕರ್ ರನ್ನು ಶತಾಯ ಗತಾಯ ಸೋಲಿಸಲೇಬೇಕೆಂದು ಧನಂಜಯ್ ಜಾಧವ್ ಪಣ ತೊಟ್ಟಿದ್ದಾರೆ. ಚುನಾವಣೆ ಗೆದ್ದ ತೀರುತ್ತೇನೆ ಎಂಬ ಹಠಕ್ಕೆ ಲಕ್ಷ್ಮಿ ಹೆಬ್ಬಾಳಕರ ಬಿದ್ದಿದ್ದಾರೆ.
ಈ ಮಧ್ಯೆ ಬಿಜೆಪಿಯಲ್ಲಿ ಅನೇಕರು ಟಿಕೆಟ್ ಆಕಾಂಕ್ಷಿಗಳಿದ್ದು ಅದರಲ್ಲೂ ಮಾಜಿ ಶಾಸಕ ಸಂಜಯ ಪಾಟೀಲ್ ಸಹ ಮತದಾರರಿಗೆ ಬಹಿರಂಗವಾಗಿ ಗಿಫ್ಟ್ ನೀಡುತ್ತಿದ್ದಾರೆ. ಇತ್ತಿಚೆಗೆ ತಮ್ಮ ಜನುಮ ದಿನದ ಪ್ರಯುಕ್ತ ಶಕ್ತಿ ಪ್ರದರ್ಶನ ಮಾಡಿದ್ದ ಸಂಜಯ್ ಪಾಟೀಲ್ ಕಾರ್ಯಕ್ರಮಕ್ಕೆ ಬಂದವರಿಗೆ ತಟ್ಟೆ, ಲೋಟ, ಬಟ್ಟಲುಗಳನ್ನು ಗಿಫ್ಟ್ ಆಗಿ ನೀಡಿದ್ದರು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಏನೇ ಕೊಟ್ಟರೂ ಅದರ ಡಬಲ್ ಕೊಡ್ತೀನಿ ಅಂತಾ ತಮ್ಮ ಭಾಷಣದಲ್ಲಿ ಬಹಿರಂಗವಾಗಿಯೇ ಆಮಿಷವೊಡ್ಡಿದ್ದರು.
ಒಟ್ಟಿನಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಕೈ, ಬಿಜೆಪಿ ನಾಯಕರು ನಾನಾ ಬಗೆಯ ಗಿಫ್ಟ್ ವಿತರಣೆ ಮಾಡುತ್ತಿದ್ದು, ಗಿಫ್ಟ್ ಪಾಲಿಟಿಕ್ಸ್ ಜೊತೆ ಈಗ ಪ್ರಾಮಿಸ್ ಪಾಲಿಟಿಕ್ಸ್ ಶುರುವಾಗಿದ್ದು ಚುನಾವಣೆಯಲ್ಲಿ ಇದು ಯಾರಿಗೆ ಪ್ಲಸ್ ಆಗುತ್ತದೆ ಯಾರಿಗೆ ಮೈನಸ್ ಆಗುತ್ತದೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.
ಇದನ್ನೂ ಓದಿ | Karnataka Election : ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುವೆ: ಸಿದ್ದರಾಮಯ್ಯ ಘೋಷಣೆ