ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ (Karnataka politics) ನಾಯಿ ಹೆಸರಲ್ಲಿ ಜಗಳ ಜೋರಾಗಿದೆ. ಒಂದು ಕಡೆ ಕಾಂಗ್ರೆಸಿಗರು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸುತ್ತಿದ್ದಾರೆ. ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸುತ್ತಾ ಕಾಂಗ್ರೆಸ್‌ನ ಜನ್ಮ ಜಾಲಾಡುತ್ತಿದ್ದಾರೆ. ಈ ನಡುವೆ ಆರೋಗ್ಯ ಸಚಿವ ಕೆ. ಸುಧಾಕರ್ ಅವರು, ಬೊಮ್ಮಾಯಿ ಅವರು ಕನ್ನಡಿಗರ ಪಾಲಿನ ನಿಯತ್ತಿನ ನಾಯಿ ಹೌದು ಎಂದು ಸಮರ್ಥಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಸಿಎಂ ಬಸವರಾಜ ಬೊಮ್ಮಾಯಿ ನಾಯಿ ಮರಿಯಂತೆ ಇರ್ತಾರೆ ಎನ್ನುವ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕೂಡಾ ಸಮರ್ಥಿಸಿದ್ದಾರೆ. ಈ ಹೇಳಿಕೆಗಳಿಂದ ರಾಜ್ಯದ ಆರೋಗ್ಯ ಸಚಿವ ಕೆ. ಸುಧಾಕರ್ ಕೆಂಡಾಮಂಡಲರಾಗಿದ್ದಾರೆ.
ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿರುವ ಸುಧಾಕರ್ ಅವರು, ಹಾಗಿದ್ದರೆ ನೀವ್ಯಾಕೆ ಚಂದ್ರಶೇಖರ್ ರಾವ್ ಮುಂದೆ ಹೋಗಿ ಯಾಕೆ ಕೈ ಕಟ್ಟಿ ನಿಲ್ತೀರಾ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ʻʻಹೌದು ಸಿಎಂ ಬೊಮ್ಮಾಯಿ ಆರುಕೋಟಿ ಜನರ ನಿಯತ್ತಿನ ನಾಯಿʼʼ ಎಂದು ಬೊಮ್ಮಾಯಿ ಗುಣಗಾನ ಮಾಡಿರುವ ಸುಧಾಕರ್ ಅವರು, ʻʻಸಿದ್ದರಾಮಯ್ಯ ಅವರ ಹೇಳಿಕೆಗೆ ಸಿಎಂ ಬೊಮ್ಮಾಯಿ ನಿನ್ನೆ ಸ್ಪಷ್ಟವಾದ ಕೊಟ್ಟಿದ್ದಾರೆ. ಬೊಮ್ಮಾಯಿ ಒಂದರ ಮೇಲೊಂದು ಬಾಣ ಬಿಡ್ತಾ ಇದಾರೆ. ಇನ್ನೆಷ್ಟು ಬಾರಿ ಕಪಾಳಮೋಕ್ಷ ಮಾಡಿಸಿಕೊಳ್ತೀರಾ?ʼʼ ಎಂದು ಕಾಂಗ್ರೆಸಿಗರನ್ನು ಪ್ರಶ್ನಿಸಿದ್ದಾರೆ.
ಯುವ ಮೋರ್ಚಾದಿಂದ ಪ್ರತಿಭಟನೆ
ಈ ನಡುವೆ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಮೌರ್ಯ ಸರ್ಕಲ್ ಬಳಿಯಿಂದ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನಾ ಮೆರವಣಿಗೆ ಫ್ರೀಡಂ ಪಾರ್ಕ್‌ವರೆಗೆ ನಡೆದಿದೆ. ಬಾಯಿಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸುತ್ತಿರುವ ಅವರು, ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಬ್ಯಾನರ್ ಗಳನ್ನು ಹಿಡಿದಿದ್ದಾರೆ.ʼ
ಇದನ್ನೂ ಓದಿ | Karnataka Elections | ನಾಯಿ ಮರಿ ಹೇಳಿಕೆಗೆ ಅರುಣ್ ಸಿಂಗ್ ಆಕ್ರೋಶ: ಇದು ಬೊಮ್ಮಾಯಿಗಲ್ಲ ರಾಜ್ಯದ ಜನರಿಗೆ ಅಪಮಾನ ಎಂದ ಬಿಜೆಪಿ