ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಂಜೆ ಭರ್ಜರಿ ಮಳೆಯಾಗಿದೆ. ಒಟ್ಟು 27 ಎಂಎಂ ಮಳೆಯಾಗಿದ್ದು, ಅತಿ ಹೆಚ್ಚು ಅಂದರೆ 3.8 ಸೆಂಮೀ ಮಳೆ ಹೆಮ್ಮಿಗೆಪುರದಲ್ಲಿ ಆಗಿದೆ. ಅದು ಬಿಟ್ಟರೆ ಎಚ್.ಗೊಲ್ಲಹಳ್ಳಿಯಲ್ಲಿ 3.6, ಬೇಗೂರಿನಲ್ಲಿ 2.8 ಸೆಂ.ಮೀ, ಸಂಪಂಗಿರಾಮ ನಗರ 2.6 ಸೆಂಮೀ, ವಿವಿ ಪುರ ಮತ್ತು ಗೊಟ್ಟಿಗೆರೆಯಲ್ಲಿ 2.4, ದಯಾನಂದ ನಗರ, ಜ್ಞಾನಭಾರತಿ, ನಾಯಂಡಹಳ್ಳಿ, ಕಾಟನ್‌ಪೇಟೆಗಳಲ್ಲಿ 2.1 ಸೆಂ.ಮೀ., ಹಂಪಿ ನಗರ, ಗಾಳಿ ಆಂಜನೇಯ ದೇಗುಲ ವಾರ್ಡ್, ಅಂಜನಾಪುರ, ಚಾಮರಾಜಪೇಟೆಯಲ್ಲಿ 2 ಸೆಂ.ಮೀ. ಮಳೆಯಾಗಿದೆ. ಬೆಂಗಳೂರು ಪೂರ್ವ, ಆರ್.ಆರ್.ನಗರ, ಬೊಮ್ಮನಹಳ್ಳಿ ಪ್ರದೇಶಗಳಲ್ಲಿ ಸಿಕ್ಕಾಪಟೆ ಮಳೆಯಾಗಿದ್ದು, ಯಲಹಂಕ, ದಾಸರಹಳ್ಳಿ ಮತ್ತು ಮಹದೇವಪುರ ಝೋನ್‌ಗಳಲ್ಲಿ ಮಳೆ ಪ್ರಮಾಣ ಕಡಿಮೆ ಇತ್ತು. ಇಂದೂ ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಲ್ಲಿ ನಿನ್ನೆ ಬೆಳಗ್ಗೆಯಿಂದಲೂ ಖಡಕ್ ಬಿಸಿಲು ಇರಲಿಲ್ಲ. ಈಗಾಗಲೇ ಕರ್ನಾಟಕಕ್ಕೆ ಮುಂಗಾರು ಪ್ರವೇಶವಾದ ಹಿನ್ನೆಲೆಯಲ್ಲಿ ಬೆಂಗಳೂರು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮೋಡದ ವಾತಾವರಣ ಇದೆ. ಹಾಗೇ, ಬೆಂಗಳೂರಿನಲ್ಲಿ ಸಂಜೆ ಹೊತ್ತಿಗೆ ಮಿಂಚು-ಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಅನೇಕ ಮರಗಳು ಉರುಳಿಬಿದ್ದಿವೆ. ರಸ್ತೆಗಳೆಲ್ಲ ಜಲಾವೃತಗೊಂಡಿದ್ದವು. ಇದರಿಂದಾಗಿ ವಾಹನ ಮತ್ತು ಜನಸಂಚಾರಕ್ಕೆ ತೊಡಕಾಗಿತ್ತು. ಬೆಂಗಳೂರಿನಲ್ಲಿ ಸದ್ಯ ಹಳದಿ ಅಲರ್ಟ್ ಘೋಷಣೆಯಾಗಿದೆ.
ಕರ್ನಾಟಕದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಮುಂದಿನ 3ದಿನಗಳ ಕಾಲ ಗಾಳಿ, ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗಲಿದೆ. ದಕ್ಷಿಣ ಕರಾವಳಿ ಜಿಲ್ಲೆಗಳಲ್ಲೂ ಹಳದಿ ಅಲರ್ಟ್ ಘೋಷಣೆಯಾಗಿದೆ. ಹಾಗೇ, ಬಾಗಲಕೋಟೆ, ಬೀದರ್, ಗದಗ್, ಕೊಪ್ಪಳ, ರಾಯಚೂರು ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸದ್ಯ ಮಳೆಯಾಗುವ ಲಕ್ಷಣವಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: Karnataka Rain: ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರಿ ಮಳೆ ಸಾಧ್ಯತೆ; ಬೆಂಗಳೂರಲ್ಲಿ ಹಳದಿ ಅಲರ್ಟ್