ಗಂಗಾವತಿ: ಮಂಗಳವಾರ ಬೆಳಗಿನಜಾವ ಸುರಿದ ಭಾರೀ ಮಳೆಯಿಂದಾಗಿ (Karnataka Rain) ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಬೆಟ್ಟದಿಂದ ಬೃಹತ್ ಗಾತ್ರದ ಕಲ್ಲು ಬಂಡೆಯೊಂದು ಉರುಳಿದೆ. ಅದೃಷ್ಟವಶಾತ್ 20ಕ್ಕೂ ಹೆಚ್ಚು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜೀವ ಉಳಿಸಿದ ಪೈಪ್‌ಲೈನ್
ತಾಲೂಕಿನ ಸಂಗಾಪುರದ 2ನೇ ವಾರ್ಡ್‌ನ ಗದ್ವಾಲ್ ಏರಿಯಾದ ಸಮೀಪದಲ್ಲಿರುವ ಬೆಟ್ಟದಿಂದ ಬೃಹತ್ ಗಾತ್ರದ ಕಲ್ಲು ಬಂಡೆಯೊಂದು ಉರುಳಿ ಅದೃಷ್ಟವಶಾತ್ ಐದಾರು ಮನೆಗಳಿಗೆ ಹಾನಿಯಾಗುವುದು ಕೂದಲೆಳೆಯ ಅಂತರದಿಂದ ತಪ್ಪಿದೆ.
ಇದನ್ನೂ ಓದಿ: Yuvraj Singh : ಶೀಘ್ರದಲ್ಲೇ ತೆರೆಗೆ ಬರಲಿದೆ ಯುವರಾಜ್ ಸಿಂಗ್ ಬಯೋಪಿಕ್
ಕುಡಿಯುವ ನೀರಿಗಾಗಿ ಹಾಕಲಾಗಿದ್ದ ನಾಲ್ಕು ಇಂಚು ಗಾತ್ರದ ಕಬ್ಬಿಣದ ಪೈಪ್, ಉರುಳಿ ಬಂದಿರುವ ಕಲ್ಲು ಬಂಡೆಯನ್ನು ತಡೆಹಿಡಿದಿದೆ. ಇದರಿಂದ ನಾಲ್ಕೈದು ಮನೆಯಲ್ಲಿ ವಾಸವಿದ್ದ ಸುಮಾರು 20ಕ್ಕೂ ಹೆಚ್ಚು ಜನರ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಆಕಸ್ಮಿಕ ಕಬ್ಬಿಣದ ಪೈಪ್‌ಲೈನ್ ಕಲ್ಲು ಬಂಡೆಯನ್ನು ಹಿಡಿದು ನಿಲ್ಲಿಸದೇ ಇದ್ದರೆ ಗಾಢ ನಿದ್ರೆಯಲ್ಲಿದ್ದ ಐದಾರು ಕುಟುಂಬದ ಸದಸ್ಯರಿಗೆ ಊಹಿಸಲಾಗದ ಹಾನಿಯಾಗಿರುತಿತ್ತು ಎಂದು ಪ್ರತ್ಯಕ್ಷದರ್ಶಿ ಲೋಕೇಶ್ ರಾಠೋಡ್ ತಿಳಿಸಿದ್ದಾರೆ.
ಮಳೆಯ ಅವಾಂತರದಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಗಂಗಾವತಿ ನಗರದ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ಇಡೀ ರಾತ್ರಿ ನಿದ್ರೆ ಬಿಟ್ಟು ಬಕೇಟು, ಪಾತ್ರೆಗಳಿಂದ ನೀರು ಹೊರ ಹಾಕಿ ಹೈರಾಣಾದ ಘಟನೆ ನಡೆದಿದೆ. ಇಲ್ಲಿನ ಗಾಂಧಿನಗರದ ಕೊಳಚೆ ಪ್ರದೇಶದಲ್ಲಿನ ಸಾಕಷ್ಟು ಮನೆಗಳಿಗೆ ಹಾನಿಯಾಗಿದ್ದು, ಬಸಮ್ಮ ಹನುಮಂತಪ್ಪ ಸುಳೇಕಲ್ ಎಂಬ ಮಹಿಳೆಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಜುಲೈ ನಗರದ ಪೆಟ್ರೋಲ್ ಬಂಕ್ ಹಿಂದಿನ ಜನವಸತಿ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ.
ನಗರದ ಜನವಸತಿ ಪ್ರದೇಶಗಳಾದ ಎಚ್ಆರ್‌ಎಸ್ ಕಾಲೋನಿ, ಮಹೆಬೂಬ ನಗರ, ಕಿಲ್ಲಾ ಏರಿಯಾ, ಗೌಸೀಯಾ ಕಾಲೋನಿ, ಈದ್ಗಾ ಕಾಲೋನಿ, ಬನ್ನಿಗಿಡದ ಕ್ಯಾಂಪ್, ಅಗಡಿ ಸಂಗಣ್ಣ ಕ್ಯಾಂಪ್, ಲಿಂಗರಾಜ ಕ್ಯಾಂಪ್, ಶರಣಬಸವೇಶ್ವರ ನಗರದಲ್ಲಿನ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Gold Rate Today: ಸ್ವರ್ಣ ಪ್ರಿಯರಿಗೆ ಕೊಂಚ ನಿರಾಳ; ಚಿನ್ನದ ದರ ಇಳಿಕೆ
ಮನೆಗಳಿಗೆ ಹಾನಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಹಸೀಲ್ದಾರ್ ಯು. ನಾಗರಾಜ್, ತಾಲೂಕಿನಾದ್ಯಂತ ಮಂಗಳವಾರ ನಸುಕಿನ ವೇಳೆ ಸುರಿದ ಅಪಾರ ಪ್ರಮಾಣ ಮಳೆಯಿಂದಾಗಿ ಸಾರ್ವಜನಿಕರ ಆಸ್ತಿ-ಪಾಸ್ತಿ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ವೆಂಕಟಗಿರಿ ಹೋಬಳಿಯಲ್ಲಿ ಸುಮಾರು ಆರು ಮನೆಗಳು ಕುಸಿದಿರುವ ಮಾಹಿತಿ ಸಿಕ್ಕಿದೆ. ಮರಳಿ ಹೋಬಳಿಯಲ್ಲಿ ಸುಮಾರು ನಾಲ್ಕಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಸಂಜೆ ವೇಳೆಗೆ ಪೂರ್ಣ ಪ್ರಮಾಣದ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.