ವಿಜಯಪುರ/ ಬಳ್ಳಾರಿ: ರಾಜ್ಯದ ಹಲವು ಕಡೆ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮುಂಜಾನೆ ಬಿಸಲು, ಮಧ್ಯಾಹ್ನ ಮೋಡ ಮುಸುಕಿದ ವಾತಾವರಣ, ಸಂಜೆ ವೇಳೆಗೆ ದಿಢೀರ್ ಬರುವ ಮಳೆಗೆ ಜನರು ಹೈರಾಣಾಗಿದ್ದಾರೆ. ಜನಜೀವನವೂ ಅಸ್ತವ್ಯಸ್ತವಾಗಿದೆ. ವಿಜಯಪುರ ಹಾಗೂ ಬಳ್ಳಾರಿ ಜಿಲ್ಲೆಯ ಅಲ್ಲಲ್ಲಿ ಶನಿವಾರ (ಮಾ. 18) ಭರ್ಜರಿ ಮಳೆಯಾಗಿದೆ. ಸಿಂದಗಿಯಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ವಿದ್ಯಾರ್ಥಿಗಳು ಮಳೆಯನ್ನೂ ಲೆಕ್ಕಿಸದೇ ಹೆಕ್ಕಿ ತಿಂದರು.
ಶನಿವಾರವೂ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ವಿಜಯಪುರದ ಸಿಂದಗಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಮಧ್ಯಾಹ್ನದ ಹೊತ್ತಿಗೆ ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ಆಲಿಕಲ್ಲು ಮಳೆ ಸುರಿದಿದೆ. ಸಿಂದಗಿಯಲ್ಲಿ ಮನೆಗೆ ಹೊರಟಿದ್ದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಬಂಧಿಯಾಗುವಂತಾಯಿತು. ಕಾಲೇಜು ಆವರಣದಲ್ಲಿ ನಿಂತು ಆಲಿಕಲ್ಲುಗಳನ್ನು ಆಯ್ದುಕೊಂಡು ಓಡುತ್ತಿದ್ದ ಚಿತ್ರಣ ಕಂಡು ಬಂತು.
ಬಳ್ಳಾರಿಯಲ್ಲೂ ಆಲಿಕಲ್ಲು ಮಳೆ; ಬೆಳೆ ಹಾನಿ
ಬಳ್ಳಾರಿಯ ಕೃಷ್ಣನಗರ ಕ್ಯಾಂಪ್ ಸೇರಿದಂತೆ ನಗರದ ವಿವಿಧೆಡೆ ಆಲಿಕಲ್ಲು ಮಳೆ ಆಗಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಅಕಾಲಿಕ ಮಳೆಯಿಂದಾಗಿ, ಬಯಲಿನಲ್ಲಿ ಒಣಗಿ ಹಾಕಿದ್ದ ಮೆಣಸಿನಕಾಯಿ ಕೊಚ್ಚಿಹೋಗಿತ್ತು. ಇದು ರೈತರನ್ನು ಕಂಗಾಲಾಗುವಂತೆ ಮಾಡಿತು. ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದ ಮೆಣಸಿನಕಾಯಿಯನ್ನು ಆಯ್ದುಕೊಳ್ಳುವುದು ಕಂಡುಬಂತು.
ಆಲಿಕಲ್ಲು ಮಳೆಗೆ ಅಪಾರ ಪ್ರಮಾಣ ಬೆಳೆ ಹಾನಿ
ಕಳೆದೆರಡು ದಿನಗಳಿಂದ ಸುರಿದ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಬಯಲು ಸೀಮೆ ಕೋಲಾರದಲ್ಲಿ ಬೇಸಿಗೆಯ ಮೊದಲ ಮಳೆಗೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೈಗೆ ಬರಬೇಕಿದ್ದ ಮಾವು ನೆಲಕ್ಕೆ ಉದುರಿದ್ದು, ರೈತನಿಗೆ ದಿಕ್ಕು ತೋಚದಂತಾಗಿದೆ.
ಶ್ರೀನಿವಾಸಪುರ ತಾಲೂಕಿನ ಅರಿಕೆರೆ ಹಾಗೂ ಹೊಸೂರು ಗ್ರಾಮದಲ್ಲಿನ ಮಾವಿನ ತೋಟಗಳಲ್ಲಿ ಮಾವಿನ ಕಾಯಿ ಪಿಂದೆಗಳು ಹಾಗು ಹೂಗಳು ಉದುರಿಹೋಗಿದ್ದು, ಆಲಿಕಲ್ಲು ಮಳೆ ರಭಸಕ್ಕೆ ಎಲೆಗಳು ಉದುರಿ ಹೋಗಿ ಮಾವು ಬೆಳೆಗಾರರ ಆಸೆಗೆ ತಣ್ಣೀರು ಎರಚಿದೆ. ಶ್ರೀನಿವಾಸಪುರ ಕ್ಷೇತ್ರದಲ್ಲಿ ಸುಮಾರು 34ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗಿತ್ತು.
ಶ್ರೀನಿವಾಸಪುರ ಮಾವು ಬೆಳೆಗಾರರು ಎರಡು ವರ್ಷಗಳಿಂದ ಕೈ ಕೊಟ್ಟ ಬೆಳೆ ಈ ಬಾರಿ ಮಳೆ ಇಲ್ಲದೆ ಉತ್ತಮ ಇಳುವರಿಗೆ ಸೂಕ್ತವಾದ ವಾತಾವರಣದಲ್ಲಿ ಉತ್ತಮ ಫಸಲು ಬಂದಿತ್ತು. ಆದರೆ ಕಾಯಿ ಕಟ್ಟುವ ವೇಳೆಗೆ ಆಲಿಕಲ್ಲು ಮಳೆ ಎರಡು ದಿನ ಸುರಿದು ಮಾವು ಹೂ ಸೇರಿದಂತೆ ಎಲಚು ಕಾಯಿಗಳು ನಾಶವಾಗಿವೆ. ಮಾವು ಬೆಳೆಗಾರರ ನಿರೀಕ್ಷೆಯನ್ನು ಹುಸಿಯಾಗಿದೆ. ಈ ಬಗ್ಗೆ ಸರ್ಕಾರ ಪರಿಹಾರ ನೀಡಲೇಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಸ್ತೆ ಕಾಮಗಾರಿಗೆ ಅಕಾಲಿಕ ಮಳೆ ಎಫೆಕ್ಟ್
ವಿಜಯಪುರದ ಸಿಂದಗಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗೆ ಮಳೆ ಅಡ್ಡಿಯಾಗಿದೆ. ಕಳೆದ 3 ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಹಲವಾರು ರಸ್ತೆಗಳು ಸಂಪೂರ್ಣ ಬ್ಲಾಕ್ ಆಗಿದ್ದು, ವಾಹನ ಸಂಚಾರ ತುಂಬಾ ವಿರಳವಾಗಿದೆ. ಮೊದಲೇ ಅಮೆಗತಿಯಿಂದ ಸಾಗುತ್ತಿರುವ ಕಾಮಗಾರಿಗಳಿಂದ ಬೇಸತ್ತಿರುವ ಸಾರ್ವಜನಿಕರಿಗೆ ಈ ಅಕಾಲಿಕ ಮಳೆ ಮತ್ತಷ್ಟು ಕಣ್ಣು ಕೆಂಪಾಗುವಂತೆ ಮಾಡಿದೆ. ಮಳೆ ಬಂದ ಕಾರಣ ತಗ್ಗು ಗುಂಡಿಗಳಿಗೆ ನೀರು ತುಂಬಿದ್ದು ಪಾದಚಾರಿ ಮತ್ತು ವಾಹನ ಸವಾರರು ಪರದಾಡುವಂತಹ ಪರಸ್ಥಿತಿ ಎದುರಾಗಿದೆ.
ಕಳೆದ 6 ತಿಂಗಳಿನಿಂದ ಮಂದಗತಿಯಲ್ಲಿ ಸಾಗುತ್ತಿರುವ ನಗರದ ಪ್ರಮುಖ ರಸ್ತೆ ಕಾಮಗಾರಿಗಳಿಂದ ತಾಲೂಕಿನ ಸಾರ್ವಜನಿಕರು ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡುವುದನ್ನೇ ಬಿಟ್ಟಿದ್ದಾರೆ. ಎಲ್ಲೆಂದರಲ್ಲಿ ತಗ್ಗು ಗುಂಡಿ ತೋಡಿ ಎಚ್ಚರಿಕೆ ಸೂಚನಾ ಫಲಕ ಅಳವಡಿಕೆ ಮಾಡದೆ ಕಾಮಗಾರಿಯ ನಿಯಮಗಳನ್ನು ಗಾಳಿಗೆ ತೂರಿ ಕೆಲಸ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ