ಕೊಪ್ಪಳ/ಕಲಬುರಗಿ: ರಾಜ್ಯಾದ್ಯಂತ ಶುಕ್ರವಾರ (ಏ.7) ಮಳೆ (Karnataka Rain) ಅಬ್ಬರಿಸುತ್ತಿದ್ದು, ಸಿಡಿಲಿಗೆ ಜಾನುವಾರುಗಳು ಬಲಿಯಾಗಿವೆ. ಕಲಬುರಗಿ ಜಿಲ್ಲೆಯ ಅವರಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಮೂರು ಜಾನುವಾರುಗಳು ಬಲಿಯಾಗಿವೆ. ಗ್ರಾಮದ ಬನ್ನೆಪ್ಪಾ ಪೂಜಾರಿ ಎಂಬುವವರಿಗೆ ಸೇರಿರುವ ಜಾನುವಾರುಗಳು ಶುಕ್ರವಾರ ನಸುಕಿನ ಜಾವ ಸಿಡಿಲಿಗೆ ಮೃತಪಟ್ಟಿವೆ. ಇತ್ತ ಲಕ್ಷಾಂತರ ಮೌಲ್ಯದ ಜಾನುವಾರುಗಳನ್ನು ಕಳೆದುಕೊಂಡ ರೈತ ಬನ್ನೆಪ್ಪಾ ಕಂಗಾಲಾಗಿದ್ದು, ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.
ಇನ್ನು ಗುರುವಾರ ರಾತ್ರಿಯಿಂದಲೇ ಬಿರುಗಾಳಿ ಸಹಿತ ಮಳೆ ಆಗುತ್ತಿದ್ದು, ಶುಕ್ರವಾರ ಕಲಬುರಗಿಯಾದ್ಯಂತ ಮೋಡ ಕವಿದ ವಾತಾವರಣ ಇತ್ತು. ಇತ್ತ ಅಫಜಲಪುರದಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳು ಹಾರಿ ಹೋಗಿದ್ದವು. ಮಹಾರಾಷ್ಟ್ರ-ಕರ್ನಾಟಕ ಗಡಿಭಾಗ ಬಳೂರ್ಗಿ ಹಾಗೂ ಅರ್ಜುಣಗಿಗಳಲ್ಲಿ ವಿಧಾನಸಭಾ ಚುನಾವಣೆ ನಿಮಿತ್ತ ಪೊಲೀಸರಿಗಾಗಿ ನಿರ್ಮಿಸಿದ್ದ ಚೌಕಿಗಳು, ಟೆಂಟ್‌ಗಳು ಧರೆಗುರುಳಿದ್ದವು. ರಾತ್ರಿಯಿಡಿ ಸುರಿದ ಗಾಳಿ ಮಳೆಗೆ ಟೆಂಟ್ ಹಾರಿ ಹೋಗಿ, ಪೊಲೀಸರು ರಾತ್ರಿಯಿಡೀ ಜಾಗರಣೆ ಇರುವಂತಾಯಿತು.
ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ
ಕೊಪ್ಪಳ ಜಿಲ್ಲೆಯ ವಿವಿಧೆಡೆ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಆಗುತ್ತಿದೆ. ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಭೀಮಾಂಬಿಕ ದೇವಸ್ಥಾನದ ಆವರಣದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಹೊತ್ತಿ ಉರಿದಿದೆ. ಕುಕನೂರು ಪಟ್ಟಣದ ತಹಸೀಲ್ದಾರ ಕಚೇರಿ ಬಳಿ ಇರುವ ಭೀಮಾಂಬಿಕ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರು. ಅದೃಷ್ಟವಶಾತ್ ಅಕ್ಕ ಪಕ್ಕ ಜನರು ಯಾರು ಇರದ ಕಾರಣಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಇತ್ತ ಮೊದಲ ವರ್ಷಧಾರೆಯಿಂದ ರೈತರ ಮೊಗದಲ್ಲಿ ಹರುಷ ಉಂಟಾಗಿದ್ದು, ಕೃಷಿ ಕಾರ್ಯದಲ್ಲಿ ತೊಡಗಿದ್ದರು.
ವಿಜಯನಗರದಲ್ಲಿ ಸಿಡಿಲಿನಿಂದ ಪಾರಾದ ಚೆಕ್ ಪೋಸ್ಟ್ ಸಿಬ್ಬಂದಿ
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ಚೆಕ್ ಪೋಸ್ಟ್ ಸಿಬ್ಬಂದಿ ಸಿಡಿಲಿನಿಂದ ಪಾರಾಗಿದ್ದಾರೆ. ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ತೆಂಗಿನ ಮರಕ್ಕೆ ಬೆಂಕಿ ಬಿದ್ದಿದ್ದು, ಸಿಡಿಲಿನ ಶಬ್ಧಕ್ಕೆ ಬೆದರಿ ಓಡಿದ್ದಾರೆ. ಬಿಸಿಲಿನಿಂದ ಬಸವಳಿದಿದ್ದ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ, ಹಂಪಾಪಟ್ಟಣ ಸುತ್ತಮುತ್ತ ವರುಣ ತಂಪೆರೆದಿದ್ದಾನೆ. ಇನ್ನು ಹೊಸಪೇಟೆಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಆಗಾಗ ಜಿಟಿ, ಜಿಟಿಯಾಗಿ ಮಳೆಯಾಗುತ್ತಿದೆ.
ಆಲಿಕಲ್ಲು ಮಳೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿತ್ತು. ಅದರಂತೆ ಶಿರಸಿ ಸುತ್ತಮುತ್ತ ಶುಕ್ರವಾರ ಆಲಿಕಲ್ಲು ಸಹಿತ ಮಳೆಯಾಗಿರುವ ವರಿದಿ ಆಗಿದೆ.
ಇದನ್ನೂ ಓದಿ: Suicide Case: ಗಂಡ ಚಾಕೊಲೇಟ್ ತಂದು ಕೊಡಲಿಲ್ಲವೆಂದು ನೇಣಿಗೆ ಶರಣಾದಳು ಹೆಂಡತಿ!