ಬೆಂಗಳೂರು: ವೀಕೆಂಡ್‌ನಲ್ಲಿ ಮೋಜು ಮಸ್ತಿ ಮಾಡಬೇಕೆಂದು ಎಂದುಕೊಂಡವರಿಗೆ, ಜತೆಗೆ ಐಪಿಎಲ್ ಮ್ಯಾಚ್ (IPL 2023) ಅನ್ನು ಸ್ಟೇಡಿಯಂಗೆ ಹೋಗಿ ನೋಡಬೇಕು ಎಂದುಕೊಂಡವರಿಗೆ ಮಳೆ ಅಡ್ಡಿಯಾಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ ಸೇರಿ 8 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ (Karnataka Rain) ಸಾಧ್ಯತೆ ಇದೆ.
ವೀಕೆಂಡ್ ಮಸ್ತಿಯಲ್ಲಿರುವವರಿಗೆ ಮಳೆಯು ರಗಳೆ ಕೊಡಬಹುದು. ಬೆಂಗಳೂರಲ್ಲಿ ಏಪ್ರಿಲ್ 2ರಂದು ನಡೆಯುವ ಐಪಿಎಲ್ ಮ್ಯಾಚ್‌ಗೆ (IPL 2023) ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಏಪ್ರಿಲ್ 1 ಮತ್ತು 2 ರಂದು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕೋಲಾರ ಸೇರಿ ಕೊಡಗು, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆಯಿಂದ ಇರಲಿದೆ. ಬೆಂಗಳೂರು ನಗರದಲ್ಲಿ ಮುಂಜಾನೆ ಬಿಸಿಲಿದ್ದರೆ, ಸಂಜೆ ಅಥವಾ ರಾತ್ರಿ ಹೊತ್ತಿಗೆ ಜಿಟಿ ಜಿಟಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇನ್ನು ಗುರುವಾರ ದಕ್ಷಿಣ ಒಳನಾಡಿನಲ್ಲಿ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದರೆ, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆಯಿಂದ ಕೂಡಿತ್ತು. ಚಾಮರಾಜನಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 38.7 ಡಿಗ್ರಿ ಸೆಲಿಯಸ್ಸ್ ದಾಖಲಾಗಿದ್ದರೆ, ಬಾಗಲಕೋಟೆಯಲ್ಲಿ ಕನಿಷ್ಠ ಉಷ್ಣಾಂಶ 14.2 ಡಿಗ್ರಿ ಸೆಲಿಯಸ್ಸ್ ದಾಖಲಾಗಿದೆ.