ರಾಯಚೂರು/ಹಾಸನ/ಬೀದರ್: ರಾಯಚೂರಿನ ದೇವದುರ್ಗ ತಾಲೂಕಿನಲ್ಲಿ ಲಿಂಗದಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಮೂರು ಕುರಿಗಳು ಮೃತಪಟ್ಟಿವೆ. ದೇವದುರ್ಗ ಭಾಗದಲ್ಲಿ ಕಳೆದೆರಡು ದಿನಗಳಿಂದ ಗುಡುಗು ಸಹಿತ ಭಾರಿ ಮಳೆ (Karnataka Rain) ಆಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಗ್ರಾಮದ ಬಸವರಾಜ್ ಎಂಬುವವರಿಗೆ ಸೇರಿದ ಮೂರು ಕುರಿಗಳು ಮಳೆ ಹಿನ್ನೆಲೆ ಮರದ ಕೆಳಗೆ ನಿಂತಿದ್ದವು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿವೆ. ವಿಷಯ ತಿಳಿದು ಸ್ಥಳಕ್ಕೆ ದೇವದುರ್ಗದ ಕಂದಾಯ ನಿರೀಕ್ಷಕ ದೇವರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೆ ವೇಳೆ ಬಸವರಾಜ್ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.
ಶೆಡ್ ಕುಸಿದು 8 ಸಾವಿರಕ್ಕೂ ಅಧಿಕ ಕೋಳಿಗಳ ಮಾರಣ ಹೋಮ
ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಎಂಟು ಸಾವಿರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೂಡ್ಲಿ ಗ್ರಾಮದಲ್ಲಿ ಮಳೆ ಹಾಗೂ ಗಾಳಿಗೆ ಕೋಳಿ ಸಾಕಾಣಿಕೆಯ ಶೆಡ್ ಕುಸಿದಿದೆ. ಪರಿಣಾಮ ಸಾವಿರಾರು ಕೋಳಿಗಳ ಮಾರಣಹೋಮವಾಗಿದೆ.
ಕೂಡ್ಲಿ ಗ್ರಾಮದ ಮದನ್ ರಾವ್ ಪಾಟೀಲ್ ಎಂಬುವರಿಗೆ ಸೇರಿದ ಕೋಳಿ ಫಾರಂ ಕುಸಿದಿದೆ. ಸಾಲಸೋಲ ಮಾಡಿ ಇನ್ನೇನು ಮಾರಾಟಕ್ಕೆ ಬಂದಿದ್ದ ಕೋಳಿಗಳು ಮೃತಪಟ್ಟಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಹಾಸನದಲ್ಲಿ ಮಳೆಗೆ ತುಂಡಾದ ವಿದ್ಯುತ್ ತಂತಿ
ಹಾಸನ ಜಿಲ್ಲೆಯ ವಿವಿಧೆಡೆ ಗಾಳಿ ಸಹಿತ ಭಾರಿ ಮಳೆ ಆಗುತ್ತಿದ್ದು, ಚನ್ನರಾಯಪಟ್ಟಣ ತಾಲೂಕಿನ ದಿಂಡಗೂರು ಗ್ರಾಮದಲ್ಲಿ ಭಾರಿ ಗಾಳಿಯಿಂದ ವಿದ್ಯುತ್ ತಂತಿಯೊಂದು ತುಂಡಾಗಿ ಇನ್ನೊಂದು ತಂತಿ ಮೇಲೆ ಬಿದ್ದಿದೆ. ಪರಿಣಾಮ ಶಾರ್ಟ್ ಸರ್ಕ್ಯೂಟ್‌ನಿಂದ ಶ್ವಾನವೊಂದು ಮೃತಪಟ್ಟಿರುವ ಘಟನೆ ನಡೆದಿದೆ. ಶಿವು ಎಂಬುವವರು ಸಾಕಿದ್ದ ಶ್ವಾನ ಮೃತಪಟ್ಟಿದೆ. ಸುಮಾರು ಆರಕ್ಕೂ ಹೆಚ್ಚು ಮನೆಯಲ್ಲಿದ್ದ ರೆಫ್ರಿಜರೇಟರ್, ಟಿವಿಗಳಿಗೆ ಹಾನಿ ಆಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸ್ಥಳಕ್ಕೆ ವಿದ್ಯುತ್ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Karnataka Rain: ವೀಕೆಂಡ್‌ನಲ್ಲೂ ಇರಲಿದೆ ಮಳೆರಾಯನ ಕಿರಿಕ್; ಬೆಂಗಳೂರು ಸೇರಿ 18 ಜಿಲ್ಲೆಗಳಿಗೆ ಮಳೆ ಅಲರ್ಟ್
ಬಿರುಗಾಳಿಗೆ ಹೆದರಿ ಓಡಿದ ಜನರು
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದ ಹಾಸನ-ಮಡಿಕೇರಿ ರಸ್ತೆಯಲ್ಲಿ ಬಿರುಗಾಳಿಯ ರಭಸಕ್ಕೆ ರಸ್ತೆ ಬದಿಯ ಕ್ಯಾಂಟೀನ್‌ನ ಮೇಲೆ ಹಾಕಿದ್ದ ಟಾರ್ಪಲ್ ಹಾರಿ ಹೋಗಿದೆ. ಏಕಾಏಕಿ ಜೋರಾಗಿ ಗಾಳಿ ಬೀಸಿದ ಕಾರಣಕ್ಕೆ ಜನರು ಭೀತಿಗೊಂಡು ಓಡಿಹೋಗಿ ಸೂಕ್ತ ಸ್ಥಳದಲ್ಲಿ ರಕ್ಷಣೆ ಪಡೆದುಕೊಂಡರು. ರಸ್ತೆ ಬದಿಯ ಕೆಲವು ಅಂಗಡಿಗಳ ಮುಂದೆ ಇಟ್ಟಿದ್ದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿ ಆಗಿದ್ದವು. ಹಾರಿ ಹೋಗುತ್ತಿದ್ದ ಗೂಡಂಗಡಿಗಳ ಶೀಟ್‌ಗಳನ್ನು ಹಿಡಿಯಲು ಹರಸಾಹಸ ಪಡಬೇಕಾಯಿತು. ಜೋರು ಗಾಳಿಗೆ ರಸ್ತೆ ಹಾಗೂ ಅಂಗಡಿಗಳು, ಸುತ್ತಮುತ್ತಲಿನ ಮನೆಗಳು ಧೂಳುಮಯವಾಗಿದ್ದವು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ