ಬೆಂಗಳೂರು: ಸಚಿವಾಲಯಗಳ ಸಂರಚನೆಯನ್ನು ಬದಲಾಯಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ನಾಳೆ (ಮೇ 27) ಸಚಿವಾಲಯ ಬಂದ್‌ಗೆ ಕರೆ ನೀಡಿದೆ.
ಶುಕ್ರವಾರದಂದು ಸ್ವಯಂ ಪ್ರೇರಣೆಯಿಂದ ಸಚಿವಾಲಯದ ಅಧಿಕಾರಿ/ ನೌಕರರು ಕಚೇರಿಗೆ ಗೈರುಹಾಜರಾಗುವ ಮೂಲಕ ಸಚಿವಾಲಯ ಸೇವೆಯನ್ನು ಸ್ಥಗಿತಗೊಳಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಗುರುಸ್ವಾಮಿ ಪಿ. ತಿಳಿಸಿದ್ದಾರೆ.
ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಸರ್ಕಾರ ಇದಕ್ಕೆ ಸ್ಪಂದಿಸದೇ ಇದ್ದರೆ ಸಂಘದ ಸರ್ವ ಸದಸ್ಯರ ಸಭೆ ಕರೆದು, ಈ ಕುರಿತು ಚರ್ಚಿಸಿ, ಮುಂದೆ ಅನಿರ್ದಿಷ್ಟ ಕಾಲ ಸಚಿವಾಲಯವನ್ನು ಬಂದ್ ಮಾಡುವ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಸಚಿವಾಲಯದಲ್ಲಿನ 542 ಕಿರಿಯ ಸಹಾಯಕರ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆಯನ್ನು ಕೈಬಿಡಬೇಕು, ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯ ಸಂಪುಟ ಉಪಸಮಿತಿಯು ಸಚಿವಾಲಯಕ್ಕೆ ಸಂಬಂಧಿಸಿದಂತೆ ಅವೈಜ್ಞಾನಿಕವಾಗಿ ಮಾಡಿರುವ ಶಿಫಾರಸುಗಳನ್ನು ಕೈಬಿಡಬೇಕು, ಟಿ. ಎಂ. ವಿಜಯ ಭಾಸ್ಕರ್ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋದ ಶಿಫಾರಸುಗಳನ್ನು ಜಾರಿಗೆ ತರಬಾರದು, ಸಚಿವಾಲಯದಲ್ಲಿ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವವರನ್ನು ಕೂಡಲೇ ಮಾತೃ ಇಲಾಖೆಗೆ ಹಿಂದಕ್ಕೆ ಕಳುಹಿಸಬೇಕು, ನಿವೃತ್ತಿಯಾದ ಅಧಿಕಾರಿಗಳು ಮತ್ತು ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳಬಾರದು ಹೀಗೆ ಒಟ್ಟು 14 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಘ ಈ ಹೋರಾಟ ನಡೆಸುತ್ತಿದೆ.
ಬಂದ್ ಕರೆ ಕಾನೂನು ಬಾಹಿರ
ಸಚಿವಾಲಯ ನೌಕರರ ಸಂಘದವರು ನೀಡಿರುವ ಬಂದ್ ಕರೆಯು ಕಾನೂನು ಬಾಹಿರವಾಗಿದ್ದು, ಇದನ್ನು ಸರ್ಕಾವು ಗಂಭೀರವಾಗಿ ಪರಿಗಣಿಸಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ತಿಳಿಸಿದ್ದಾರೆ.
ಸಚಿವಾಲಯದ ಎಲ್ಲ ಅಧಿಕಾರಿಗಳು/ ನೌಕರರು ಕಡ್ಡಾಯವಾಗಿ ಶುಕ್ರವಾರ ಕಚೇರಿಗೆ ಹಾಜರಾಗಬೇಕು. ಒಂದು ವೇಳೆ ಯಾರಾದರೂ ಪೂರ್ವಾನುಮತಿ ಪಡೆಯದೇ ಕಚೇರಿಗೆ ಗೈರು ಹಾಜರಾದಲ್ಲಿ ಅವರನ್ನು ʼಲೆಕ್ಕಕ್ಕಿಲ್ಲದ ಅವಧಿʼ (Dies-non) ಎಂದು ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಒಂದು ವೇಳೆ ಯಾರಾದರೂ ಕಚೇರಿಗೆ ಹಾಜರಾಗಲು ಮುಂದಾದಾಗ ಅವರಿಗೆ ಅಡ್ಡಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ಹೂಡಲಾಗುವುದು ಅಥವಾ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.