ಪ್ರತಿಪಕ್ಷಗಳ ಮಿತ್ರಕೂಟವಾದ ಯುಪಿಎಯ ಹೆಸರನ್ನು INDIA ಎಂಬು ಬದಲಿಸಲಾಗಿದೆ. I – Indian, N – National, D – Democractic, I – Inclusive, A – Alliance ಎನ್ನುವುದು ಕೂಟದ ಹೊಸ ಹೆಸರು.
ಐಎಎಸ್ ಅಧಿಕಾರಿಗಳ ದುರುಪಯೋಗ!
ಲೋಕಸಭೆ ಚುನಾವಣೆ ಎದುರಿಸಲು ಘಟಬಂಧನಕ್ಕೆ ಒಳಗಾದ (ಮೈತ್ರಿಕೂಟ ಸೇರಿದ) ಕಾಂಗ್ರೆಸ್ ಪಕ್ಷವು ಇಲ್ಲಿನ ಹೆಮ್ಮೆ, ಪರಂಪರೆ, ಸ್ವಾಭಿಮಾನಕ್ಕೆ ಘಟಶ್ರಾದ್ಧ ಮಾಡಿದೆ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಹೊರರಾಜ್ಯಗಳಿಂದ ಬಂದ ನಾಯಕರ ಸೇವೆ ನಮ್ಮ ಐಎಎಸ್ ಅಧಿಕಾರಿಗಳನ್ನು ಬಳಸಿಕೊಳ್ಳಾಗುತ್ತಿದೆ. ಈ ಮೂಲಕ ಐಎಎಸ್ ಜೀತಪದ್ಧತಿಯನ್ನು ಜಾರಿಗೆ ತರುತ್ತಿದೆ ಎಂದು ಎಚ್ಡಿಕೆ ಹರಿಹಾಯ್ದಿದ್ದಾರೆ.
ಕೇರಳದ ಮಾಜಿ ಸಿಎಂ ಸಾವಿಗೆ ಸಿಎಂ ಸಿದ್ದರಾಮಯ್ಯ ಸಂತಾಪ
ಹಿರಿಯ ಕಾಂಗ್ರೆಸ್ ನಾಯಕ, ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ನನಗೆ ಅತ್ಯಂತ ಆತ್ಮೀಯರಾಗಿದ್ದ ಉಮ್ಮನ್ ಚಾಂಡಿಯವರ ನಿಧನದ ಸುದ್ದಿ ಆಘಾತಕಾರಿ. ಕೇರಳ ರಾಜ್ಯವನ್ನು ಮಾನವ ಅಭಿವೃದ್ಧಿಯ ಸೂಚ್ಯಂಕಗಳಲ್ಲಿ ಉನ್ನತ ಸ್ಥಾನದಲ್ಲಿ ಇರಿಸಲು ಕಾರಣರಾದ ಮುಖ್ಯಮಂತ್ರಿಗಳಲ್ಲಿ ಓಮನ್ ಚಾಂಡಿ ಕೂಡ ಒಬ್ಬರಾಗಿದ್ದರು. ಎರಡು ಬಾರಿ ಕೇರಳ ರಾಜ್ಯದ ಮುಖ್ಯಮಂತ್ರಿಗಳಾಗಿ ಅಪಾರ ಸಾಧನೆ ಮಾಡಿದವರಾಗಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈತ್ರಿಕೂಟದ ಸಭೆ, ಸಂಜೆ ಸುದ್ದಿಗೋಷ್ಠಿ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಒಂದಾಗಿರುವ ಪ್ರತಿಪಕ್ಷಗಳ ಒಕ್ಕೂಟದ ಎರಡನೇ ದಿನದ ಸಭೆ ಇಂದು ನಡೆಯಲಿದೆ. ಬೆಳಗ್ಗೆ 11ಗಂಟೆಯಿಂದ ಸಭೆ ಶುರುವಾಗಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರಾಸ್ತಾವಿಕ ಭಾಷಣ ಮಾಡುವರು. ಇಂದಿನ ಸಭೆಯಲ್ಲಿ ಆರು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಊಟದ ವಿರಾಮ. ನಂತರ 3ಗಂಟೆಗೆ ಮೈತ್ರಿಕೂಟದ ಸಭೆ ಮುಕ್ತಾಯಗೊಳ್ಳಲಿದೆ. 4ಗಂಟೆಗೆ ಮೈತ್ರಿಕೂಟದ ನಾಯಕರೆಲ್ಲ ಸೇರಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಇಂದು ಸಚಿವ ಸಂಪುಟ ಸಭೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ. ನಾಳೆ ಮತ್ತು ನಾಡಿದ್ದು ಕೆಲವು ತಿದ್ದುಪಡಿ ವಿಧೇಯಕಗಳನ್ನು ವಿಧಾನಸಭೆ ಹಾಗೂ ಪರಿಷತ್ನಲ್ಲಿ ಸರ್ಕಾರ ಮಂಡನೆ ಮಾಡಲಿದ್ದು, ಅದರ ಪೂರ್ವಭಾವಿಯಾಗಿ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಬೇಕಿದೆ. ಹೀಗಾಗಿ ಸಿದ್ದರಾಮಯ್ಯನವರು ಇಂದು ಸಂಜೆ ಸಚಿವ ಸಂಪುಟ ಸಭೆ ಕರೆದಿದ್ದಾರೆ.