ಒಡಿಶಾದಲ್ಲಿ ಮೂರು ರೈಲುಗಳ ನಡುವೆ ಅಪಘಾತವಾಗಿದ್ದ (Odisha Train Accident) ಕಾರಣ ಪೂರ್ವ ಕರಾವಳಿ ರೈಲ್ವೆ ವಲಯದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಅನೇಕ ಪ್ರಯಾಣಿಕರು ಪರದಾಡುವಂತೆ ಆಗಿತ್ತು. ಹೀಗೆ ಕೋಲ್ಕತ್ತದ ಹೌರಾದಲ್ಲಿ ಸಿಲುಕಿದ್ದ ಕರ್ನಾಟಕದ ವಾಲಿಬಾಲ್ ಆಟಗಾರರು ಇದೀಗ ಸುರಕ್ಷಿತವಾಗಿ ಬಂದಿದ್ದಾರೆ. ಒಡಿಶಾದಲ್ಲಿ ರೈಲು ದುರಂತವಾಗಿದ್ದರಿಂದ ಇವರಿಗೆಲ್ಲ ವಾಪಸ್ ಬರಲು ರೈಲು ಇರಲಿಲ್ಲ. ಒಟ್ಟು ಯುವಕರು/ಯುವತಿಯರು ಎಲ್ಲ ಸೇರಿ 32 ಆಟಗಾರರು ಇದ್ದರು. ಇಂದು ಬೆಳಗ್ಗೆ ಇಂಡಿಗೊ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದು, ತಮ್ಮ ಮನೆಗಳಿಗೆ ಹೋಗಿದ್ದಾರೆ.
ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಕೋರಮಂಡಲ ಎಕ್ಸ್ಪ್ರೆಸ್, ಬೆಂಗಳೂರು ಹೌರಾ ಮತ್ತು ಗೂಡ್ಸ್ ರೈಲುಗಳ ಮಧ್ಯೆ ಅಪಘಾತವಾಗಿತ್ತು. ಹೀಗಾಗಿ ಆ ಮಾರ್ಗದ ಸುಮಾರು 49 ರೈಲುಗಳ ಸಂಚಾರ ರದ್ದಾಗಿತ್ತು. ಈ ವಾಲಿಬಾಲ್ ಆಟಗಾರರು, ಕೋಚ್ಗಳೆಲ್ಲ ರಾಜ್ಯಕ್ಕೆ ತಲುಪಲು ರೈಲು ಇಲ್ಲದೆ ಪರದಾಡುತ್ತಿದ್ದರು. ಅಲ್ಲಿಂದಲೇ ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ಗೆ ಮನವಿಯನ್ನೂ ಮಾಡಿದ್ದರು. ಅದಾದ ಬಳಿಕ ಸಂತೋಷ್ ಲಾಡ್ ಅವರು ವಿಮಾನಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಇಂದು ಮುಂಜಾನೆ 4.15ಕ್ಕೆ ಕೋಲ್ಕತ್ತ ವಿಮಾನ ನಿಲ್ದಾಣದಿಂದ ಹೊರಟು, ಬೆಂಗಳೂರಿಗೆ ತಲುಪಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು ‘ನಾವೆಲ್ಲ ಸಬ್ ಜ್ಯೂನಿಯರ್ ನ್ಯಾಶನಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹೋಗಿದ್ದೆವು. ಶುಕ್ರವಾರ ರಾತ್ರಿ 11ಗಂಟಗೆ ವಾಪಸ್ ಕರ್ನಾಟಕಕ್ಕೆ ಬರಲು ರೈಲು ಇತ್ತು. ಆದರೆ ಅದೇ ಮಾರ್ಗದಲ್ಲಿ ಅಪಘಾತವಾಗಿದ್ದರಿಂದ ಬರಬೇಕಾದ ರೈಲು ರದ್ದಾಯಿತು. ನಮಗೆ ಅಲ್ಲೇ ಉಳಿಯಬೇಕಾಯಿತು. ಊಟ-ತಿಂಡಿ ಸರಿಯಾಗಲಿಲ್ಲ, ಉರಿಬಿಸಿಲಿಗೆ ಆರೋಗ್ಯ ಸಮಸ್ಯೆ ಆಗುತ್ತಿತ್ತು. ಕೆಮ್ಮು ಶುರುವಾಗಿತ್ತು. ನಮ್ಮೊಂದಿಗೆ ಇದ್ದ ಕೋಚ್ವೊಬ್ಬರ ಪರಿಚಯದ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಆಗಿತ್ತು’ ಎಂದು ಆಟಗಾರ್ತಿಯೊಬ್ಬಳು ವಿಸ್ತಾರನ್ಯೂಸ್ಗೆ ತಿಳಿಸಿದ್ದಾರೆ. ಇನ್ನು ಇವರೆಲ್ಲ ಮೇ 27ರಂದು ಕೋಲ್ಕತ್ತಕ್ಕೆ ತೆರಳಿದ್ದರು. ವಾಪಸ್ ಬರಲು ವಿಮಾನ ವ್ಯವಸ್ಥೆ ಮಾಡಿಕೊಟ್ಟ ಸಚಿವರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿದ್ದಾರೆ.