Site icon Vistara News

Karnataka Weather : ಚಳಿ ಇರಲಿ, ಮಳೆ ಬರಲಿ; ಆರೋಗ್ಯದ ಕುರಿತು ಕಾಳಜಿ ಇರಲಿ

karnataka weather Forecast

ಬೆಂಗಳೂರು: ಶನಿವಾರ ರಾಜ್ಯಾದ್ಯಂತ ಒಣ ಹವೆ (Dry weather) ಮೇಲುಗೈ ಸಾಧಿಸಿದೆ. ವಿಜಯಪುರದಲ್ಲಿ ಕಡಿಮೆ ಉಷ್ಣಾಂಶ 10.2 ಡಿ.ಸೆ ದಾಖಲಾಗಿತ್ತು. ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ತಾಪಮಾನ ಎಚ್ಚರಿಕೆ

ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು ಸೇರಿದಂತೆ ವಿಜಯಪುರ, ಯಾದಗಿರಿಯಲ್ಲಿ ಥಂಡಿ ವಾತಾವರಣ ಇರಲಿದೆ.

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಆವರಿಸಲಿದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇಲ್ಲೆಲ್ಲ ಶುಷ್ಕ ವಾತಾವರಣ

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಮತ್ತು ಮೈಸೂರು, ರಾಮನಗರ, ಮಂಡ್ಯ, ತುಮಕೂರು, ವಿಜಯನಗರದಲ್ಲಿ ಶುಷ್ಕ ವಾತಾವರಣ ಇರಲಿದೆ. ಜತೆಗೆ ಕರಾವಳಿ‌ಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಒಣಹವೆ ಇರಲಿದೆ.

ಇದನ್ನೂ ಓದಿ: Puneeth Kerehalli : ಪ್ರಾಣ ಬೆದರಿಕೆ ಹಾಕಿದ ಪುನೀತ್‌ ಕೆರೆಹಳ್ಳಿ; ಮಾಲ್ ಆಫ್ ಏಷ್ಯಾ ಸಿಬ್ಬಂದಿ ದೂರು

ಚಳಿಗಾಲದ ಸೋಂಕುಗಳಿಂದ ಮಕ್ಕಳನ್ನು ಕಾಪಾಡುವುದು ಹೇಗೆ?

ಚಳಿ ಹೆಚ್ಚುತ್ತಿದ್ದಂತೆ (flu prevention tips) ಸೋಂಕುಗಳ ಲಕ್ಷಣಗಳು ಎಲ್ಲೆಡೆ ತೀವ್ರವಾಗುತ್ತಿವೆ. ಸುಸ್ತು, ಕೆಮ್ಮು, ನೆಗಡಿ, ಜ್ವರ, ಗಂಟಲುನೋವು ಮುಂತಾದವುಗಳದ್ದೇ ಕಾರುಭಾರು ಎಲ್ಲೆಡೆ. ಪ್ರೌಢರಲ್ಲೂ ಈ ಲಕ್ಷಣಗಳು ತೊಂದರೆ ಕೊಡುತ್ತವಾದರೂ ಮಕ್ಕಳಷ್ಟಲ್ಲ. ರೋಗ ನಿರೋಧಕ ಶಕ್ತಿ ಇನ್ನೂ ಬಲವಾಗದ ಎಳೆಯರಿಗೆ ಚಳಿಗಾಲದ ವೈರಸ್‌ಗಳು ನೀಡುವ ಕಾಟ ಒಂದೆರಡು ದಿನಗಳಿಗೆ ಮುಗಿಯುವುದೇ ಇಲ್ಲ. ಮೊದಲು ನೆಗಡಿಯೊ ಕೆಮ್ಮೊ ಶುರುವಾಗಿ ಮಾರನೇ ದಿನಕ್ಕೆ ಜೋರು ಜ್ವರ, ನಡುಕ, ಬೆನ್ನಿಗೇ ಗಂಟಲು ನೋವು ಅಥವಾ ತಲೆನೋವು ಇಲ್ಲವೇ ಕಿವಿ ನೋವು, ಏಳಲಾರದ ಸುಸ್ತು ಇತ್ಯಾದಿ ಇತ್ಯಾದಿ. ನಾಲ್ಕು ದಿನ ಕಾಡಿಸಿದ ಜ್ವರ ಹೇಗೊ ಬಿಟ್ಟರೂ, ಕಫ-ಕೆಮ್ಮು ತಾರಕಕ್ಕೇರಿ ಇನ್ನೂ ನಾಲ್ಕು ದಿನ ಚೇತರಿಸಿಕೊಳ್ಳುವುದಕ್ಕೆ ಬೇಕು ಎಂಬಂಥ ಸ್ಥಿತಿಗೆ ಪುಟಾಣಿಗಳನ್ನು ತರುತ್ತದೆ. ಚಳಿಗಾಲದ ಸೋಂಕುಗಳು ಮಕ್ಕಳನ್ನು ಕಾಡದಂತೆ ತಡೆಯುವುದು ಹೇಗೆ?

ಒಬ್ಬರಿಂದೊಬ್ಬರಿಗೆ ವೇಗವಾಗಿ ಹರಡುವ ಈ ವೈರಸ್‌ಗಳು ಮಕ್ಕಳಲ್ಲಿ ಪ್ರಸರಣವಾಗುವುದು ಇನ್ನೂ ತ್ವರಿತವಾಗಿ. ಶಾಲೆಯಲ್ಲಿ ಅಥವಾ ಡೇ ಕೇರ್‌ನಲ್ಲಿ ಒಟ್ಟಿಗೆ ಆಡುವ, ಅಕ್ಕಪಕ್ಕ ಕುಳಿತುಕೊಳ್ಳುವ, ಒಬ್ಬರ ವಸ್ತುಗಳನ್ನು ಇನ್ನೊಬ್ಬರು ಮುಟ್ಟುವ ಸಂದರ್ಭಗಳು ದಿನವೂ ಇರುವುದರಿಂದ, ಮಕ್ಕಳಲ್ಲಿ ಸೋಂಕುಗಳು ತಡೆಯುವು ಸಾಹಸವೇ ಸರಿ. ಅದರಲ್ಲೂ ಕೆಲವು ತಿಂಗಳ ಹಿಂದೆ ಉಂಟಾದ ಸೋಂಕಿನಿಂದ ಪ್ರತಿರೋಧಕ ಶಕ್ತಿ ಜಾಗೃತವಾಗಿರುತ್ತದೆ ಎಂದು ಮಕ್ಕಳ ವಿಷಯದಲ್ಲಿ ಹೇಳಲಾಗದು. ಹಾಗಾಗಿ ಚಿಣ್ಣರು ಆಗಾಗ ಹುಷಾರು ತಪ್ಪುವುದು ಸಾಮಾನ್ಯ ಎಂಬಂತೆ ಆಗುತ್ತದೆ.

ಲಸಿಕೆ ಬೇಕು

ಆಯಾ ವರ್ಷದ ಫ್ಲೂ ಋತುವಿನಲ್ಲಿ ಯಾವೆಲ್ಲಾ ವೈರಸ್‌ಗಳು ಬರಬಹುದು ಎಂಬ ಲೆಕ್ಕಾಚಾರದ ಮೇಲೆ ಫ್ಲೂ ಲಸಿಕೆಯನ್ನು ತಯಾರಿಸಲಾಗುತ್ತದೆ. ಹಾಗಾಗಿ ಪ್ರತಿ ವರ್ಷ ಮಕ್ಕಳಿಗೆ ಫ್ಲೂ ಲಸಿಕೆಯನ್ನು ಹಾಕಿಸುವುದು ಉತ್ತಮ. ಇದರಿಂದ ರೋಗ ನಿರೋಧಕಶಕ್ತಿಯನ್ನು ತಾತ್ಕಾಲಿಕವಾಗಿ ಉತ್ತೇಜಿಸಿದಂತಾಗುತ್ತದೆ. ಒಂದೊಂದು ಸೋಂಕು ತಾಗಿದರೂ, ಅದರ ತೀವ್ರತೆ ಕಡಿಮೆ ಇರುತ್ತದೆ. ರೋಗ ಗುಣವಾಗುವುದಕ್ಕೆ ಬೇಕಾಗುವ ಸಮಯವೂ ಕಡಿಮೆಯೇ.

ಆಹಾರ

ಆರೋಗ್ಯಯುತ ಆಹಾರವನ್ನು ಮಕ್ಕಳಿಗೆ ತಿನ್ನಿಸುವುದು ಯಜ್ಞದಂತೆಯೇ. ಆದರೂ ಸೋಂಕುಗಳೊಂದಿಗೆ ಹೋರಾಡುವ ಶಕ್ತಿ ಬೇಕೆಂದರೆ ಮಕ್ಕಳ ಆಹಾರಾಭ್ಯಾಸಗಳು ಸತ್ವಯುತವಾಗಿ ಇರಲೇಬೇಕು. ಜಂಕ್‌ ಸೇವನೆಯಿಂದ ಪ್ರತಿರೋಧಕ ಶಕ್ತಿ ತೀವ್ರವಾಗಿ ಕುಂಠಿತಗೊಳ್ಳುತ್ತದೆ. ಹಸಿರು ತರಕಾರಿಗಳು- ಸೊಪ್ಪು, ಋತುಮಾನದ ಹಣ್ಣುಗಳು, ಇಡೀ ಧಾನ್ಯಗಳು, ಮೊಳಕೆ ಕಾಳುಗಳು, ಡೈರಿ ಉತ್ಪನ್ನಗಳು, ಬೀಜಗಳು, ಮೊಟ್ಟೆ, ಮೀನು ಮುಂತಾದವು ಮಕ್ಕಳಿಗೆ ಅಗತ್ಯವಾಗಿ ಬೇಕಿರುವ ಆಹಾರಗಳ ಪಟ್ಟಿಯಲ್ಲಿವೆ. ಕರಿದ, ಸಂಸ್ಕರಿತ, ಸಕ್ಕರೆಭರಿತ, ಪ್ಯಾಕ್‌ ಮಾಡಿದ ಆಹಾರಗಳು ತರುವುದು ಹಾನಿಯನ್ನೇ ಹೊರತು ಆರೋಗ್ಯವನ್ನಲ್ಲ.

ಅಭ್ಯಾಸಗಳು

ಕೋವಿಡ್‌ ಭೀತಿಯೂ ಮತ್ತೆ ತಲೆದೋರುತ್ತಿರುವ ಹಿನ್ನೆಲೆಯಲ್ಲಿ, ಕೆಲವು ಹಳೆಯ ಅಭ್ಯಾಸಗಳನ್ನು ಮಕ್ಕಳಿಗೆ ನೆನಪಿಸುವುದು ಅಗತ್ಯ. ವೈಯಕ್ತಿಕ ಅಂತರವನ್ನು ಸಾಧ್ಯವಾದಷ್ಟು ಕಾಯ್ದುಕೊಳ್ಳುವುದು, ಆಗಾಗ ಕೈ ಶುಚಿ ಮಾಡುವುದು, ಲಿಫ್ಟ್‌, ಮೆಟ್ಟಿಲಿನ ಕಂಬಿಗಳು ಮುಂತಾದ ಎಲ್ಲರೂ ಮುಟ್ಟುವಂಥ ಜಾಗಗಳಲ್ಲಿ ಕೈ ಇಡದೇ ಇರುವುದು, ಕಣ್ಣು-ಬಾಯಿ-ಮೂಗು ಮುಟ್ಟದಿರುವುದು, ನೆಗಡಿ-ಕೆಮ್ಮು ಇದ್ದರೆ ಮಾಸ್ಕ್‌ ಹಾಕುವುದು ಮುಂತಾದ ಕೋವಿಡ್‌ ಕಾಲದ ಅಭ್ಯಾಸಗಳು ಚಳಿಗಾಲದಲ್ಲಿ ಜಾರಿಯಲ್ಲಿದ್ದರೆ ಹೆಚ್ಚಿನ ರಕ್ಷಣೆ ದೊರೆಯುತ್ತದೆ.

ಚಟುವಟಿಕೆ

ಮಕ್ಕಳು ನಿತ್ಯವೂ ಮನೆಯಿಂದ ಹೊರಗೆ ಆಡುವುದನ್ನು ಪ್ರೋತ್ಸಾಹಿಸಿ. ಹೊರಾಂಗಣ ಆಟಗಳಲ್ಲಿ ಸೋಂಕು ಹರಡುವ ಪ್ರಮಾಣ ಕಡಿಮೆ. ಬಿಸಿಲಲ್ಲಿ ಮಕ್ಕಳು ಆಡಿದಾಗ ಪ್ರತಿರೋಧಕ ಶಕ್ತಿ ಇನ್ನಷ್ಟು ಬಲವಾಗುತ್ತದೆ. ಜಡವಾಗಿರುವುದು, ಸ್ಕ್ರೀನ್‌ ಮುಂದೆ ಬಿದ್ದುಕೊಂಡು ತಿನ್ನುವುದು- ಇಂಥವೆಲ್ಲಾ ಮಕ್ಕಳ ಶಕ್ತಿ-ಸಾಮರ್ಥ್ಯಗಳನ್ನು ಕುಗ್ಗಿಸುತ್ತವೆ.

ನಿದ್ದೆ

ಬೆಳೆಯುವ ಮಕ್ಕಳಿಗೆ 9-10 ತಾಸು ನಿದ್ದೆ ಅಗತ್ಯ. ಇದರಿಂದ ಶರೀರ ತಂತಾನೆ ಸರಿಮಾಡಿಕೊಳ್ಳಲು ಅಗತ್ಯವಾದ ವಿಶ್ರಾಂತಿ ನೀಡಿದಂತಾಗುತ್ತದೆ. ನಿದ್ದೆಯ ಸಮಯವನ್ನು ಟಿವಿ, ಮೊಬೈಲ್‌ಗಳು ಕಸಿದರೆ ಇದಕ್ಕಿಂತ ದೊಡ್ಡ ಸಂಕಷ್ಟ ಇನ್ನೊಂದಿಲ್ಲ. ಒಂದೊಮ್ಮೆ ಸೋಂಕು ಬಂದರೆ, ಔಷಧಿ-ಉಪಚಾರಗಳ ಜೊತೆಗೆ ಭರಪೂರ ವಿಶ್ರಾಂತಿ-ನಿದ್ದೆಯೂ ಮಕ್ಕಳಿಗೆ ಅತ್ಯಗತ್ಯ.

ನೀರು

ಸೋಂಕು ಇರಲಿ, ಇಲ್ಲದಿರಲಿ- ಮಕ್ಕಳು ನೀರು ಕುಡಿಯುವ ಪ್ರಮಾಣವನ್ನು ಗಮನಿಸಿ. ದಿನಕ್ಕೆ ಎಂಟು ಗ್ಲಾಸ್‌ ನೀರು ಮಕ್ಕಳಿಗೂ ಅಗತ್ಯ. ದೇಹದಿಂದ ಕಶ್ಮಲಗಳನ್ನು ತೆಗೆಯಲು ಇದು ಎಲ್ಲರಿಗೂ ಬೇಕಾಗುತ್ತದೆ. ಅವರು ಕುಡಿಯುವ ನೀರಿನ ಪ್ರಮಾಣ ಸಾಕಾಗುತ್ತಿಲ್ಲ ಎನಿಸಿದರೆ, ಇನ್ನಷ್ಟು ಕುಡಿಯುವಂತೆ ಪ್ರೋತ್ಸಾಹಿಸಿ. ಸೂಪ್‌, ಜ್ಯೂಸ್ ಮುಂತಾದ ದ್ರವಾಹಾರಗಳ ಮೂಲಕ ದೇಹಕ್ಕೆ ಸಾಕಷ್ಟು ನೀರು ದೊರೆಯುತ್ತಿದೆ ಎಂಬುದನ್ನು ಖಾತ್ರಿಪಡಿಸಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version