Site icon Vistara News

Karnataka Weather : ಸಿಲಿಕಾನ್‌ ಸಿಟಿಯಲ್ಲಿ ದಟ್ಟ ಮಂಜು; ರಾಜ್ಯಾದ್ಯಂತ ನಾಳೆಯೂ ಒಣ ಹವೆ

Mist weather

ಬೆಂಗಳೂರು: ಬುಧವಾರವೂ ರಾಜ್ಯಾದ್ಯಂತ ಒಣ ಹವೆ (Dry weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ಬೆಂಗಳೂರು ಸುತ್ತಮುತ್ತ ಆಕಾಶ ನಿರ್ಮಲವಾಗಿರಲಿದೆ. ಬೆಳಗಿನ ಜಾವ ದಟ್ಟ ಮಂಜು ಮುಸುಕುವ ಸಾಧ್ಯತೆ ಇದ್ದರೆ, ನಂತರ ಬಿಸಿಲು ಹೆಚ್ಚಿರಲಿದೆ. ರಾತ್ರಿ ಹೊತ್ತು ಕೊರೆಯುವ ಚಳಿ ಇರಲಿದೆ. ಗರಿಷ್ಠ ಉಷ್ಣಾಂಶವು 29 ಹಾಗೂ ಕನಿಷ್ಠ ಉಷ್ಣಾಂಶವು 17 ಡಿ.ಸೆ ಇರಲಿದೆ.

ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದಾಗಿ ಸೆಕೆಯು ಹೆಚ್ಚಾಗಲಿದೆ.

Young woman sleeping profoundly at night Pumpkin Seeds Benefits

ಇನ್ನೂ ಸೋಮವಾರ ರಾಜ್ಯದಲ್ಲಿ ಒಣಹವೆ ಇತ್ತು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ ಉಷ್ಣಾಂಶವು 10.6 ಡಿ.ಸೆ ದಾಖಲಾಗಿತ್ತು. ತುಮಕೂರು, ರಾಯಚೂರು, ಬೆಳಗಾವಿ, ಹಾವೇರಿ, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಕೊಪ್ಪಳ, ಬಾಗಲಕೋಟೆ, ಕಲಬುರಗಿ, ಗದಗದಲ್ಲಿ ಗರಿಷ್ಠ ತಾಪಮಾನ 35 ನಿಂದ 37 ಡಿ.ಸೆ ದಾಖಲಾಗಿದೆ.

ಬೆಂಗಳೂರು ಗ್ರಾಮಾಂತರ, ಕೋಲಾರ, ಧಾರವಾಡ ಹಾಗೂ ಚಿಕ್ಕಬಳ್ಳಾಪುರ, ಬೆಳಗಾವಿ, ಬಾಗಲಕೋಟೆ, ತುಮಕೂರು, ವಿಜಯಪುರ, ಹಾಸನ ಸೇರಿದಂತೆ ಕೊಡಗು ಮತ್ತು ಕೊಪ್ಪಳದಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ನಿಂದ 15 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ.

ಇದನ್ನೂ ಓದಿ: Alcohol price hike: ಬಿಯರ್ ದರ 10 ರೂಪಾಯಿ ಹೆಚ್ಚಳ? ಪ್ರಸ್ತಾವನೆ ಸಲ್ಲಿಸಿದೆ ಅಬಕಾರಿ ಇಲಾಖೆ!

ವಾಕಿಂಗ್‌- ಆರೋಗ್ಯದೆಡೆಗೆ ಒಂದೊಂದೇ ಹೆಜ್ಜೆ ಇರಿಸಿ

ಬಿಸಿಲಾದರೇನು, ಚಳಿಯಾದರೇನು… ಪ್ರತಿ ದಿನವೂ ವ್ಯಾಯಾಮ ಮಾಡಲೇಬೇಕು (Benefits Of Walking Every Day) ಎನ್ನುವ ಮಾತುಗಳನ್ನು ಸಾಕಷ್ಟು ಕೇಳಿರಬಹುದು ಈವರೆಗೆ. ಅಷ್ಟಾದರೂ ವ್ಯಾಯಾಮವೆಂದರೆ ಮುಖ ಮುರಿಯುವವರ ಸಂಖ್ಯೆ ಹೆಚ್ಚೆ ಹೊರತಾಗಿ ಕಡಿಮೆಯಿಲ್ಲ. ಇರುವುದರಲ್ಲೇ ಅತಿ ಕಡಿಮೆ ಖರ್ಚು ಮತ್ತು ಸುಲಭದ ವ್ಯಾಯಾಮವೆಂದರೆ ನಡಿಗೆ ಇಲ್ಲವೇ ವಾಕಿಂಗ್.‌ ಬೆಳಗಿನ ಚುರುಕು ನಡಿಗೆ, ಊಟದ ನಂತರದ ಕಿರು ನಡಿಗೆ, ಸಂಜೆಯ ದೀರ್ಘ ವಾಕಿಂಗ್-‌ ಇಂಥ ಎಲ್ಲವೂ ನಮ್ಮನ್ನು ಒಂದೊಂದೇ ಹೆಜ್ಜೆ ಆರೋಗ್ಯದೆಡೆಗೆ ನಡೆಸಿಕೊಂಡು ಹೋಗುತ್ತವೆ. ಈ ಸರಳ ವಾಕಿಂಗ್‌ನಿಂದ ಇರುವ ಪ್ರಯೋಜನಗಳು ಏನೆಂದು ಗೊತ್ತೇ?

ಹೃದಯಾರೋಗ್ಯ

ನಿಯಮಿತವಾದ ದೈನಂದಿನ ನಡಿಗೆಯಿಂದ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ. ಜೊತೆಗೆ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ಹೃದಯದ ಆರೋಗ್ಯ ಗಣನೀಯವಾಗಿ ಸುಧಾರಿಸುತ್ತದೆ. ಹೃದಯ ರೋಗಗಳ ಭೀತಿಯನ್ನು ಸರಳ ನಡಿಗೆಯ ಮೂಲಕವೂ ದೂರ ಮಾಡಬಹುದು.

ತೂಕ ನಿರ್ವಹಣೆ

ತ್ವರಿತ ನಡಿಗೆಯನ್ನು ಮಧ್ಯಮ ತೀವ್ರತೆಯ ಏರೋಬಿಕ್‌ ವ್ಯಾಯಾಮ ಎಂದು ಪರಿಗಣಿಸಲಾಗಿದೆ. ಎಲ್ಲಾ ವಯಸ್ಸು, ಫಿಟ್‌ನೆಸ್‌ ಮತ್ತು ಪ್ರಾಂತ್ಯಗಳ ಜನರಿಗೂ ಇದನ್ನು ಅವರದ್ದೇ ಆದ ಅನುಕೂಲದಲ್ಲಿ ಮಾಡುವುದಕ್ಕೆ ಕಷ್ಟವಾಗದು. ಹಾಗಾಗಿ ತೂಕ ಇಳಿಸುವುದಕ್ಕೆ ಅನುಕೂಲಕರವಾದ ವ್ಯಾಯಾಮವಿದು ಎಂದೇ ಪರಿಗಣಿತವಾಗುತ್ತಿದೆ.

ಮೂಡ್‌ ಸುಧಾರಣೆ

ವಾಕಿಂಗ್‌ ಸೇರಿದಂತೆ ಯಾವುದೇ ರೀತಿಯ ದೈಹಿಕ ಚಟುವಟಿಕೆಗಳು ದೇಹದಲ್ಲಿ ಎಂಡಾರ್ಫಿನ್‌ ಚೋದಕವನ್ನು ಬಿಡುಗಡೆ ಮಾಡುತ್ತವೆ. ನಮ್ಮ ಮೂಡ್‌ ಚೆನ್ನಾಗಿರುವುದಕ್ಕೆ ಅಗತ್ಯವಾದ ಚೋದಕವಿದು. ಇದರಿಂದ ಒತ್ತಡ ನಿರ್ವಹಣೆಗೆ ನೆರವಾಗುವುದಲ್ಲದೆ ಖಿನ್ನತೆಯಂಥ ಮಾನಸಿಕ ಸಮಸ್ಯೆಗೂ ಉತ್ತರವಾಗಬಲ್ಲದು.

ಕೀಲುಗಳ ಆರೋಗ್ಯ

ಕೀಲುಗಳು ದುರ್ಬಲವಾಗಿದ್ದಾಗ ಬೆವರು ಹರಿಯುವಂಥ ವ್ಯಾಯಾಮ ಮಾಡಲಾಗದು. ಇದರಿಂದ ಕೀಲುಗಳಿಗೆ ಇನ್ನಷ್ಟು ಹಾನಿಯಾಗುತ್ತದೆ. ಆದರೆ ವಾಕಿಂಗ್‌ನಂಥವನ್ನು ಮಾಡಲು ಸಾಧ್ಯ. ಇದರಿಂದ ದೇಹದ ತೂಕ ಹೆಚ್ಚದಂತೆ ಮಾಡಿ, ಕೀಲುಗಳ ಮೇಲೆ ಹೆಚ್ಚುವರಿ ಒತ್ತಡ ಬೀಳದಂತೆ ನಿರ್ವಹಿಸಬಹುದು. ಜೊತೆಗೆ ಮೂಳೆಗಳ ಆರೋಗ್ಯವನ್ನೂ ಕಾಪಾಡಿಕೊಂಡು, ಎಲುಬುಗಳು ಟೊಳ್ಳಾಗದಂತೆ ತಡೆಯಬಹುದು

ಪಚನಕ್ರಿಯೆ ಸುಧಾರಣೆ

ದೇಹದ ಚಯಾಪಚಯವನ್ನು ಹೆಚ್ಚಿಸುವಲ್ಲಿ ವಾಕಿಂಗ್‌ ಸಹಕಾರಿ. ದಿನದ ಯಾವುದೇ ಹೊತ್ತಿಗೆ ವಾಕ್ ಮಾಡಿದರೂ ಅದರಿಂದ ಲಾಭವೇ. ಚಯಾಪಚಯ ಹೆಚ್ಚಿದಂತೆ ಜೀರ್ಣಕ್ರಿಯೆಯೂ ಚುರುಕಾಗುತ್ತದೆ. ಇದರಿಂದ ಆಗುವ ಲಾಭಗಳು ಬದುಕಿನ ಹಲವು ಮಗ್ಗುಲನ್ನು ವ್ಯಾಪಿಸುತ್ತವೆ.

ಪ್ರತಿರೋಧಕತೆ ಹೆಚ್ಚಳ

ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗಿ, ಸತ್ವಗಳನ್ನು ದೇಹ ಹೀರಿಕೊಳ್ಳಲು ಸಾಧ್ಯವಾದರೆ, ದೇಹದ ಪ್ರತಿರೋಧಕತೆ ತಾನೇತಾನಾಗಿ ವೃದ್ಧಿಸುತ್ತದೆ. ಹಾಗಾಗಿ ಪ್ರತಿದಿನ ತಪ್ಪದಂತೆ ವಾಕಿಂಗ್‌ ಮಾಡುವುದರಿಂದ ಸೋಂಕುಗಳೊಂದಿಗೆ ಹೋರಾಡುವ ಸಾಮರ್ಥ್ಯವನ್ನೂ ದೇಹ ಪಡೆಯುತ್ತದೆ. ಜೊತೆಗೆ ದೇಹದ ಶಕ್ತಿಯೂ ಹೆಚ್ಚಿ, ಮಾಂಸಖಂಡಗಳ ದೃಢತೆಯೂ ವರ್ಧಿಸುತ್ತದೆ.

ಕಣ್ತುಂಬ ನಿದ್ದೆ

ದಣಿದ ದೇಹಕ್ಕೆ ನಿದ್ದೆ ಹೆಚ್ಚು ಎಂಬ ಗಾದೆ ಸುಳ್ಳೇನಲ್ಲ. ದೇಹಕ್ಕೆ ವ್ಯಾಯಾಮ ದೊರೆತು, ತಿಂದಿದ್ದು ಜೀರ್ಣವಾಗಿ, ಚಯಾಪಚಯವೂ ಹೆಚ್ಚಿ, ನಿದ್ದೆಯೂ ಕಣ್ತುಂಬಿಕೊಂಡರೆ- ಆರೋಗ್ಯ ಸುಧಾರಿಸುವುದಕ್ಕೆ ಇನ್ನೇನು ಬೇಕು? ಹಾಗಾಗಿ ಕಾಲ ಯಾವುದಾದರೂ ಆಗಲಿ, ನಿತ್ಯದ ನಡಿಗೆಯನ್ನು ಮಾತ್ರ ತಪ್ಪಿಸಲೇಬೇಡಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version