Site icon Vistara News

Karnataka weather : ರಾಜ್ಯದಲ್ಲಿ ಮಂಕಾದ ಮಳೆ; ಜೋರಾಗಿ ಬೀಸಲಿದೆ ಥಂಡಿ ಗಾಳಿ

Dry weather likely to prevail over the karnataka

ಬೆಂಗಳೂರು: ರಾಜ್ಯದಲ್ಲಿ ನಾಲ್ಕೈದು ದಿನಗಳಿಂದ ಅಬ್ಬರಿಸಿದ್ದ ಮಳೆಯು (Rain News) ಮಾಯವಾಗಿದೆ. ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka weather Forecast) ಮುನ್ಸೂಚನೆಯನ್ನು ನೀಡಿದೆ.

ರಾಜ್ಯದಲ್ಲಿ ಬುಧವಾರದಂದು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆ ಇತ್ತು. ಕನಿಷ್ಠ ಉಷ್ಣಾಂಶ 14.0 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿತ್ತು.

ಬೆಂಗಳೂರಲ್ಲಿ ಚುಮುಚುಮು ಚಳಿಗೆ ಬಿಸಿಲು ಸಾಥ್‌

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಹೊತ್ತು ದಟ್ಟಮಂಜು ಮುಸುಕಲಿದೆ. ಉಳಿದಂತೆ ಕೆಲವೆಡೆ ಸೂರ್ಯ ದರ್ಶನ ಕೊಡಲಿದ್ದಾನೆ. ಗರಿಷ್ಠ ಉಷ್ಣಾಂಶ 27 ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Mount Carmel College : ಕೋ ಎಜುಕೇಶನ್‌ಗೆ ಮೌಂಟ್‌ ಕಾರ್ಮೆಲ್‌ ಮುಕ್ತ; ಹುಡುಗರು ಬೇಡ ಅಂದ್ರಾ ಹೆಣ್ಮಕ್ಕಳು!?

Winter Backache: ಚಳಿಗಾಲದಲ್ಲೇ ಬೆನ್ನು ನೋವು ಬಾಧಿಸುವುದೇಕೆ?

ಚಳಿಗಾಲದಲ್ಲಿ ಪ್ರಕಟವಾಗುವ ಹಲವು ನೋವುಗಳ ಪೈಕಿ ಬೆನ್ನಿನ ನೋವು (winter backache) ಸಹ ಒಂದು. ವರ್ಷದ ಉಳಿದೆಲ್ಲಾ ದಿನಗಳಲ್ಲಿ ಸುಮ್ಮನಿರುವ ಬೆನ್ನು ಚಳಿಯಲ್ಲಿ ಎಷ್ಟೇಕೆ ಹಾಡೇಳುತ್ತದೆ ಎಂಬುದು ಹಲವರ ಕುತೂಹಲ. ಹೌದು, ಬೆನ್ನು ಹುರಿಯ ಉದ್ದಕ್ಕೂ ಕೆಲವು ನಿಗದಿತ ಸ್ಥಳಗಳಲ್ಲಿ ಚಳಿಯಿಂದಾಗಿ ನೋವು ಹೆಚ್ಚುತ್ತದೆ. ಕುತ್ತಿಗೆ, ನಡುಬೆನ್ನು, ಕೆಳಬೆನ್ನು ಮುಂತಾದೆಡೆಗಳಲ್ಲಿ ಚುಚ್ಚುವ, ಹಿಂಡುವಂಥ ನೋವಿನ ಅಲೆಗಳು ಏಳುತ್ತವೆ. ಮಲಗಲಾಗದು, ಕೂರಲಾಗದು, ಏಳಲೂ ಆಗದು! ಏಕೆ ಹೀಗೆ? ವಾತಾವರಣದ ಉಷ್ಣತೆ ಕುಸಿಯುತ್ತಿದ್ದಂತೆ ದೇಹದ ಸ್ನಾಯುಗಳ ನಮ್ಯತೆಯೂ ಕುಸಿಯುತ್ತದೆ. ಮಾಂಸಖಂಡಗಳು ಪೆಡುಸಾಗುವುದು, ಬಿಗಿಯಾಗುವುದು ಚಳಿಗಾಲದ ಸಹಜ ಬೆಳವಣಿಗೆ. ಬೆನ್ನು ಹುರಿಗೆ ಆಧಾರ ನೀಡುವ ಸ್ನಾಯುಗಳಲ್ಲಿ ಬಿಗಿತ ಕಾಣುತ್ತಿದ್ದಂತೆ ಬೆನ್ನಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಯಲ್ಲಿ ತೊಡಗಿದರೂ ತೊಂದರೆ, ಕಿರಿಕಿರಿ ಆರಂಭವಾಗುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ನಿವಾರಿಸಿಕೊಳ್ಳದಿದ್ದರೆ, ಬೆನ್ನಿನಲ್ಲಿ ನೋವು, ಸೆಳೆತ ಆರಂಭವಾಗುತ್ತದೆ.

ಬೆನ್ನಿನ ಒಂದು ಭಾಗದಲ್ಲಿ ನೋವು ಆರಂಭವಾಗಿ, ಅದು ಕ್ರಮೇಣ ಹೆಚ್ಚಿದರೆ ನೋವು ಎಲ್ಲಿದೆ ಎಂಬುದನ್ನೇ ಹೇಳಲಾಗದಂತೆ ಕುತ್ತಿಗೆ, ಭುಜಗಳನ್ನೆಲ್ಲಾ ವ್ಯಾಪಿಸುತ್ತದೆ. ಇದರೊಂದಿಗೆ ಚಳಿಯೆಂಬ ಕಾರಣಕ್ಕೆ ಕೂರುವಾಗ, ಮಲಗುವಾಗ ಮುದುರಿಕೊಂಡೇ ಇದ್ದರೆ ತೊಂದರೆ ಅಸಹನೀಯ ಎನ್ನುವಷ್ಟು ಹೆಚ್ಚುತ್ತದೆ. ಇವೆಲ್ಲ ದೈಹಿಕ ಕಾರಣಗಳಾದವು. ಮಾನಸಿಕ ಕಾರಣಗಳೂ ದೇಹದ ನೋವಿಗೆ ಕೊಡುಗೆಯನ್ನು ನೀಡುತ್ತವೆ. ಚಳಿಗಾಲದ ಮುಗ್ಗಲು ವಾತಾವರಣದಲ್ಲಿ ಕಾಣಿಸಿಕೊಳ್ಳುವ ಋತುಮಾನದ ಖಿನ್ನತೆಯಂಥ ಲಕ್ಷಣಗಳು ದೇಹದ ಹಲವೆಡೆಗಳಲ್ಲಿ ನೋವು ಹೆಚ್ಚಿಸುತ್ತವೆ. ಅಂತೂ ಚಳಿಗಾಲದಲ್ಲಿ ನೋವುಗಳು ಹೆಚ್ಚುವುದಕ್ಕೆ ನೂರೆಂಟು ನೆವನಗಳು. ಹಾಗಾದರೆ ತಣ್ಣನೆಯ ವಾತಾವರಣಕ್ಕೆ ತಾರಕಕ್ಕೇರುವ ಬೆನ್ನುನೋವನ್ನು ಕಡಿಮೆ ಮಾಡುವುದಕ್ಕೆ ಮಾರ್ಗಗಳಿಲ್ಲವೇ?

Back Pain

ಖಂಡಿತ ಇದೆ!

ಒಂದೇ ಭಂಗಿಯಲ್ಲಿ ದೀರ್ಘ ಕಾಲ ಇದ್ದರೆ ಮಾಂಸಖಂಡಗಳಲ್ಲಿ ಗಡುಸುತನ ಬರುವ ಸಾಧ್ಯತೆಗಳು ಹೆಚ್ಚುತ್ತವೆ. ನಿಂತಲ್ಲೇ ನಿಂತಿದ್ದರೆ ಕಾಲುಗಳು ಮಾತ್ರವಲ್ಲ, ಬೆನ್ನಿನ ಕೆಳಭಾಗದಲ್ಲೂ ನೋವಿನ ಅಲೆಗಳು ಏಳುತ್ತವೆ. ಹೆಚ್ಚು ಕಾಲ ಕೂತೇ ಇದ್ದರೆ ಬೆನ್ನು ಮಾತ್ರವಲ್ಲ, ಸೊಂಟದ ಮೇಲೂ ಒತ್ತಡ ಹೆಚ್ಚುತ್ತದೆ. ಹಾಗಾಗಿ ಒಂದೇ ಭಂಗಿಯಲ್ಲಿ ಹೆಚ್ಚು ಕಾಲ ಇರಬೇಡಿ. ಆಗಾಗ ಓಡಾಡಿ, ದೇಹವನ್ನು ಸ್ಟ್ರೆಚ್‌ ಮಾಡಿ. ಇದರಿಂದ ಮಾಂಸಪೇಶಿಗಳಲ್ಲಿನ ಬಿಗಿತ ಕಡಿಮೆಯಾಗುತ್ತದೆ.

ವಸ್ತ್ರಗಳು

ಭರ್ಜರಿಯಾದ ಒಂದು ಜಾಕೆಟ್‌ ಧರಿಸಿ, ದೇಹವನ್ನು ಬೆಚ್ಚಗಿರಿಸುವ ಪ್ರಯತ್ನವೇ? ಸರಿಯಲ್ಲ. ಇದರ ಬದಲು, ಹಲವು ಪದರಗಳಲ್ಲಿ ವಸ್ತ್ರಗಳನ್ನು ಧರಿಸಿ. ಇದರಿಂದ ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವುದು ಸುಲಭ. ಒಂದು ದಪ್ಪನೆಯ ಜಾಕೆಟ್‌ನಿಂದ ಸೆಕೆಯಾದರೆ ಅದನ್ನು ತೆಗೆಯಲೇ ಬೇಕು. ತೆಗೆದರೆ ಚಳಿ ಸೋಕುತ್ತದೆ. ಆಗ ದೇಹವನ್ನು ಬೆಚ್ಚಗಿರಿಸುವುದು ಹೇಗೆ?

ಬಿಸಿ ಸ್ನಾನ

ಚಳಿಗಾಲದಲ್ಲಿ ಅಭ್ಯಂಗ ಸ್ನಾನ ಹಿತವೆನಿಸುತ್ತದೆ. ಸರಳವಾಗಿ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಬಿಸಿ ನೀರಿನ ಸ್ನಾನ ಮಾಡುವುದು ಸಹ ಪರಿಣಾಮಕಾರಿ. ಇದಕ್ಕಾಗಿ ಸುಡು ಬಿಸಿಯ ನೀರನ್ನು ಮೇಲೆ ಸುರಿದುಕೊಂಡು, ಚರ್ಮ ಕೆಂಪಾಗಿಸಿಕೊಳ್ಳುವ ಅಗತ್ಯವಿಲ್ಲ. ಹಾಯೆನಿಸುವಷ್ಟು ಬಿಸಿ ಇದ್ದರೆ ಸಾಕು. ಅದರಲ್ಲೂ ಮಲಗುವ ಮುನ್ನ ಸಮಶೀತೋಷ್ಣ ನೀರಿನಲ್ಲಿ ಸ್ನಾನ ಮಾಡಿ ಮಲಗಿದರೆ, ಬೆನ್ನು ಮತ್ತಿತರ ಭಾಗಗಳಲ್ಲಿ ಮಾಂಸಖಂಡಗಳು ಸಡಿಲವಾಗಿ ದೇಹಕ್ಕೆ ಆರಾಮ ದೊರೆಯುತ್ತದೆ. ನೋವಿನಿಂದ ರಾತ್ರಿ ನಿದ್ದೆಗೆಡುವುದು ತಪ್ಪುತ್ತದೆ.

ಹೀಟರ್

ರಾತ್ರಿ ಬೆಚ್ಚಗೆ ಹೊದ್ದು ಮಲಗಿದರೂ ಕೆಲವೊಮ್ಮೆ ಚಳಿಯೆನಿಸುತ್ತದೆ. ಇಂಥ ಸಂದರ್ಭಗಳಲ್ಲೇ ಕಾಲು, ಭುಜ, ಕುತ್ತಿಗೆಗಳಲ್ಲಿ ನೋವು ಹೆಚ್ಚುವುದು. ಬೇಕಿದ್ದರೆ ಮಿತ ಪ್ರಮಾಣದಲ್ಲಿ ರೂಮ್‌ ಹೀಟರ್‌ ಬಳಸಿ. ಇದರಿಂದ ಚಳಿಗೆ ನೋವು ಹೆಚ್ಚಾಗುವ ಪ್ರಮಾಣವನ್ನು ತಗ್ಗಿಸಬಹುದು.

ಭಂಗಿ

ನಿಲ್ಲುವ, ಕೂರುವ, ಮಲಗುವ ಭಂಗಿಗಳ ಬಗ್ಗೆ ನಿಗಾ ವಹಿಸಿ. ಕೈಕಾಲು ಕೊಕ್ಕೆಯಂತೆ ಇರಿಸಿಕೊಳ್ಳುವುದು, ಕುತ್ತಿಗೆ, ಬೆನ್ನು ಮುದುರಿಕೊಳ್ಳುವುದು- ಇವೆಲ್ಲಾ ನೋವುಗಳ ತೀವ್ರತೆಯನ್ನು ಹೆಚ್ಚಿಸುತ್ತವೆ. ಹಾಗಾಗಿ ಸರಿಯಾದ ಭಂಗಿಯನ್ನು ಅಳವಡಿಸಿಕೊಳ್ಳುವುದು ನೋವು ನಿವಾರಣೆಯಲ್ಲಿ ಮಹತ್ವದ್ದು.

ಆಹಾರ-ನೀರು

ಚಳಿಗಾಲವೆಂದು ಹೆಚ್ಚು ನೀರು ಕುಡಿಯದಿರುವುದು ಸ್ನಾಯುಗಳ ಬಿಗಿತವನ್ನು ಅತಿಯಾಗಿಸುತ್ತದೆ. ಹಾಗಾಗಿ ನೀರು ಹೆಚ್ಚು ಕುಡಿದಷ್ಟೂ ನೋವು ಶೀಘ್ರ ಕಡಿಮೆಯಾಗುತ್ತದೆ. ಆಹಾರದಲ್ಲೂ ಸಮತೋಲನವಿರಲಿ. ಎಣ್ಣೆ, ಮಸಾಲೆ, ಜಿಡ್ಡು ಹೆಚ್ಚಿರುವ ಆಹಾರಗಳು, ದೇಹದಲ್ಲಿ ಉರಿಯೂತವನ್ನು ಹೆಚ್ಚಿಸಿ ಸಮಸ್ಯೆಯನ್ನು ಬಿಗಡಾಯಿಸುತ್ತವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version