Site icon Vistara News

Karnataka Weather : ಮುಂಜಾನೆ ಮಂಜಿನ ಹೊದಿಕೆ; ಉತ್ತರ ಕರ್ನಾಟಕದಲ್ಲಿ ಕಡಿಮೆ ತಾಪಮಾನ

weather Forecast

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ (Karnataka weather Forecast) ಇರಲಿದ್ದು, ಇದರ ಹೊರತಾಗಿ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿಯಲ್ಲಿ ಶುಷ್ಕ ವಾತಾವರಣ (Dry weather) ಇರಲಿದೆ.

ಡಿ.29-30ರಂದು ಬೆಂಗಳೂರಲ್ಲಿ ಬೆಳಗಿನ ಜಾವ ಮಂಜಿನ ಹೊದಿಕೆ ಇರಲಿದೆ. ಹವಾಮಾನ ತಜ್ಞರ ಪ್ರಕಾರ ಭಾಗಶ: ಮೋಡ ಕವಿದ ವಾತಾವರಣ ಇರಲಿದ್ದು, ಜತೆಗೆ ಥಂಡಿ ಚಳಿಯು ಸಾಥ್‌ ನೀಡಲಿದೆ. ಮುಂಜಾನೆ ಮಂಜು ಆವರಿಸಲಿದ್ದು, ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಶುಷ್ಕ ವಾತಾವರಣ ಇರಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಮತ್ತು ಮೈಸೂರು, ರಾಮನಗರ, ಮಂಡ್ಯ, ತುಮಕೂರು, ವಿಜಯನಗರದಲ್ಲೂ ಯಥಾಸ್ಥಿತಿ ಇರಲಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ಇರಲಿದೆ.

ಇದನ್ನೂ ಓದಿ: ಅಳುತ್ತಿದ್ದ ಮಗುವಿಗೆ ಹಾಲು ಕುಡಿಸ್ಬೇಡ ಎಂದಿದ್ದಕ್ಕೆ 4ನೇ ಮಹಡಿಯಿಂದ ಹಾರಿದಳು ಮುಂಗೋಪಿ

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 29 ಡಿ.ಸೆ -16 ಡಿ.ಸೆ
ಮಂಗಳೂರು: 35 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 29 ಡಿ.ಸೆ – 15 ಡಿ.ಸೆ
ಗದಗ: 31 ಡಿ.ಸೆ – 14 ಡಿ.ಸೆ
ಹೊನ್ನಾವರ: 36 ಡಿ.ಸೆ- 21 ಡಿ.ಸೆ
ಕಲಬುರಗಿ: 32 ಡಿ.ಸೆ – 18 ಡಿ.ಸೆ
ಬೆಳಗಾವಿ: 30 ಡಿ.ಸೆ – 14 ಡಿ.ಸೆ
ಕಾರವಾರ: 36 ಡಿ.ಸೆ – 22 ಡಿ.ಸೆ

ಚಳಿಗಾಲದಲ್ಲಿ ಕೂದಲು ಉದುರುವುದನ್ನು ತಡೆಯುವುದು ಹೇಗೆ?

ಚಳಿಗಾಲದಲ್ಲಿ ಹಳೆಯ ಎಲೆಗಳನ್ನೆಲ್ಲ ಉದುರಿಸಿ, ಹೊಸತು ಬೆಳೆಸಿಕೊಳ್ಳುವುದು ಗಿಡ-ಮರಗಳ ಸ್ವಭಾವ. ಇವುಗಳಲ್ಲಿ ಒಂದರ್ಧ ನಮಗೂ ಇದೆ… ಹಳೆಯ ತಲೆಯ ಕೂದಲುಗಳು ಉದುರುವುದು. ಆದರೆ ಹೊಸತು ಹುಟ್ಟುವ ಮಾತು ಬಂದಾಗ ಮರಗಳಂತೆ ಭರ್ತಿಯಾಗಿ ತುಂಬುವುದಿಲ್ಲ ನಮ್ಮ ತಲೆ. ಹಾಗಾದರೆ ಉದುರಿದ ಕೂದಲುಗಳು ಚೆನ್ನಾಗಿ (Hair care tips for Winter) ಹುಟ್ಟುವಂತೆ, ʻತಲೆ ಖಾಲಿʼ ಆಗದಂತೆ ಮಾಡುವಲ್ಲಿ ನಮ್ಮ ಪಾತ್ರವೇನಾದರೂ ಇದೆಯೇ? ನಾವೇನಾದರೂ ಆರೈಕೆ ಮಾಡಬಹುದೇ?

ಮುಖ್ಯವಾಗಿ ವಾತಾವರಣದಲ್ಲಿ ಶುಷ್ಕತೆ ಹೆಚ್ಚುವುದು ಕೂದಲುಗಳ ಮೇಲೂ ಪರಿಣಾಮ ಬೀರುತ್ತದೆ. ಕೂದಲಿನ ಬುಡಕ್ಕೆ ಹಾನಿಯಾಗುತ್ತದೆ. ಇದರಿಂದ ಹೊಟ್ಟಿನಂಥ ಸಮಸ್ಯೆಗಳು ವಕ್ಕರಿಸಿಕೊಂಡು, ಕೂದಲು ಉದುರುವುದು ಹೆಚ್ಚಾಗುತ್ತದೆ. ಇದನ್ನು ತಡೆಯುವುದಕ್ಕೆ ಮಾರುಕಟ್ಟೆಯಲ್ಲಿರುವ ದುಬಾರಿ ಬೆಲೆಯ ಕೇಶಾರೈಕೆಯ ವಸ್ತುಗಳನ್ನು ತಂದು ಬಳಸಿದರೂ ನಿರೀಕ್ಷಿಸಿದ ಫಲ ದೊರೆಯದೆ ಇರಬಹುದು. ಇವೆಲ್ಲವುಗಳ ಜೊತೆಗೆ ಚಳಿಗಾಲದಲ್ಲಿ ಹೆಚ್ಚಾಗುವ ಮಾಲಿನ್ಯ, ಸೋಂಕುಗಳು, ಅನಾರೋಗ್ಯ ಮುಂತಾದವೆಲ್ಲ ಸೇರಿ ಕೂದಲಿನ ಸಮಸ್ಯೆಯನ್ನು ಬಿಗಡಾಯಿಸುತ್ತವೆ. ಇದಕ್ಕಾಗಿ ಹಿಂದಿನಿಂದ ಇಂದಿನವರೆಗೂ ಚಾಲ್ತಿಯಲ್ಲಿರುವ ಕೆಲವು ಕ್ರಮಗಳು ಉತ್ತಮ ಪರಿಹಾರವನ್ನು ಒದಗಿಸಬಲ್ಲವು.

ಭೃಂಗರಾಜ

ಪ್ರೊಟೀನ್‌, ವಿಟಮಿನ್‌ ಇ ಮತ್ತು ಇತರ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಈ ಮೂಲಿಕೆಕೂದಲುಗಳ ಆರೈಕೆಯಲ್ಲಿ ಅಗ್ರಗಣ್ಯ. ಇದು ತಲೆಯ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಇದರಿಂದ ಕೂದಲಿನ ಬುಡ ದೃಢವಾಗಿ, ಉದುರುವುದು ಕಡಿಮೆಯಾಗುತ್ತದೆ. ತಲೆಹೊಟ್ಟು, ಸೋಂಕುಗಳು ದೂರವಾಗುತ್ತವೆ. ಭೃಂಗರಾಜದ ತೈಲವನ್ನು ಲಘುವಾಗಿ ಕೂದಲಿನ ಬುಡಕ್ಕೆ ನಿಯಮಿತವಾಗಿ ಮಸಾಜ್‌ ಮಾಡುವುದರಿಂದ ಈ ಭಾಗಕ್ಕೆ ರಕ್ತ ಸಂಚಾರ ಹೆಚ್ಚುತ್ತದೆ, ಕೂದಲು ಸೊಂಪಾಗಿ ಬೆಳೆಯುತ್ತದೆ.

ನೆಲ್ಲಿಕಾಯಿ

ವಿಟಮಿನ್‌ ಸಿ, ಕಬ್ಬಿಣ ಮತ್ತು ಕ್ಯಾರೊಟಿನ್‌ಗಳಿಂದ ಕೂಡಿರುವ ನೆಲ್ಲಿಕಾಯಿ ಸಹ ಕೂದಲಿನ ಸಮಸ್ಯೆಗೆ ಅತ್ತ್ಯುತ್ತಮಪರಿಹಾರ ಒದಗಿಸಬಲ್ಲದು. ತಲೆಯ ಚರ್ಮದ ಆರೋಗ್ಯ ವೃದ್ಧಿಸಿ, ಕೂದಲು ಉದುರುವುದನ್ನು ಮತ್ತು ತುಂಡಾಗುವುದನ್ನು ತಡೆಯುತ್ತದೆ. ಜೊತೆಗೆ ಬೆಟ್ಟದ ನೆಲ್ಲಿ ಕಾಯಿಗೆ ಫಂಗಸ್‌ ಸೋಂಕು ಗುಣಪಡಿಸುವ ಶಕ್ತಿ ಇರುವುದರಿಂದ ತಲೆಯಲ್ಲಿ ಹೊಟ್ಟಾಗುವುದನ್ನು ತಡೆದು, ನವೆಯನ್ನು ನಿವಾರಿಸುತ್ತದೆ. ಉತ್ಕರ್ಷಣ ನಿರೋಧಕಗಳು ಇದರಲ್ಲಿ ತುಂಬಿರುವುದರಿಂದ ತಲೆಕೂದಲು ಬೆಳ್ಳಗಾಗುವುದನ್ನು ಇದು ತಡೆಯುತ್ತದೆ.

ಕೆಂಪು ಈರುಳ್ಳಿ

ಕೂದಲಿನ ಬೆಳವಣಿಗೆಗೆ ಅಗತ್ಯವಾದ ಸಲ್ಫರ್‌ ಅಂಶ ಈರುಳ್ಳಿಯಲ್ಲಿ ಯಥೇಚ್ಛವಾಗಿದೆ. ಹಾಗಾಗಿ ಉದ್ದ ಕೂದಲಿನಕನಸಿರುವವರಿಗೆ ಈರುಳ್ಳಿ ಒಳ್ಳೆಯ ಉಪಾಯ. ಇದನ್ನು ರುಬ್ಬಿ ರಸ ತೆಗೆದು ಇರುವಂತೆಯೇ ಹೇರ್‌ಪ್ಯಾಕ್‌ ಮಾಡುವವರಿದ್ದಾರೆ. ಇದನ್ನು ಎಣ್ಣೆಯಂತೆ ಮಾಡಿ ಬಳಸಿದರೂ ಫಲಿತಾಂಶ ಒಳ್ಳೆಯದೇ ಬಂದೀತು. ಇದರಲ್ಲಿರುವ ಹಲವು ರೀತಿಯ ಅಮೈನೊ ಆಮ್ಲಗಳು ಕೂದಲಿನ ಬೆಳವಣಿಗೆಗೆ ಅಗತ್ಯವಾದ ಕೆರಾಟಿನ್‌ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಜೊತೆಗೆ, ಕೂದಲು ತುಂಡಾಗದಂತೆಯೂ ಕಾಪಾಡುತ್ತವೆ.

ತುಳಸಿ

ತಲೆಯ ಚರ್ಮದಲ್ಲಿನ ರಕ್ತ ಸಂಚಾರವನ್ನು ತುಳಸಿ ಹೆಚ್ಚಿಸುತ್ತದೆ ಎನ್ನುತ್ತವೆ ಅಧ್ಯಯನಗಳು. ಇದರಿಂದಾಗಿ ಕೂದಲು ಉದುರುವುದು, ತೆಳ್ಳಗಾಗುವುದು ಮುಂತಾದ ಸಮಸ್ಯೆಗಳು ದೂರಾಗುತ್ತವೆ. ಅಲೋಪೇಶಿಯದಂಥ ಸಮಸ್ಯೆಗಳಲ್ಲಿ ತುಳಸಿಯ ಎಣ್ಣೆಯನ್ನು ಕೂದಲುಗಳಿಗೆ ಬಳಸುವುದು ಲಾಭದಾಯಕ ಎನ್ನುತ್ತವೆ ಸಂಶೋಧನೆಗಳು.

ದಾಸವಾಳ

ಇದನ್ನು ಸಾಮಾನ್ಯವಾಗಿ ಕಂಡೀಶನರ್‌ ಮಾದರಿಯಲ್ಲಿ ಬಳಸಲಾಗುತ್ತದೆ. ಇಂಥ ನೈಸರ್ಗಿಕ ಕಂಡೀಶನರ್‌ಗಳು ಕೂದಲಿನಲ್ಲಿ ಕೆರಾಟಿನ್‌ ಉತ್ಪಾದನೆಗೆ ನೆರವಾಗಿ ಕೇಶಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಜೊತೆಗೆ ರಕ್ತ ಸಂಚಾರವನ್ನು ವೃದ್ಧಿಸುವ ಅಮೈನೊ ಆಮ್ಲಗಳು ಸಹ ದಾಸವಾಳದಲ್ಲಿವೆ. ಇದರ ಎಲೆಗಳನ್ನು ಪೇಸ್ಟ್‌ ಮಾಡಿ ಕಂಡೀಶನರ್‌ ಮಾದರಿಯಲ್ಲಿ ಕೂದಲಿಗೆ ಬಳಸಿದರೆ, ಹೂವುಗಳ ರಸ ತೆಗೆದು ಎಣ್ಣೆ ಮಾಡಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version