Site icon Vistara News

karnataka weather forecast : ಭಾರಿ ವರ್ಷಧಾರೆ ಜತೆಗೆ ಶೀತಮಯ ವಾತಾವರಣ; ಹೊಸನಗರದಲ್ಲಿ ದಾಖಲೆ ಮಳೆ!

womens walking in rain

ಬೆಂಗಳೂರು: ನೈರುತ್ಯ ಮುಂಗಾರು ಕರಾವಳಿಯಲ್ಲಿ ಪ್ರಬಲವಾಗಿದ್ದರೆ, ಒಳನಾಡಿನಲ್ಲಿ ಸಾಮಾನ್ಯವಾಗಿದೆ. ಶನಿವಾರ ಕರಾವಳಿಯಲ್ಲಿ ವ್ಯಾಪಕ ಮಳೆ ಸುರಿದಿದೆ. ಧರ್ಮಸ್ಥಳದಲ್ಲಿ 15 ಸೆಂ.ಮೀ, ಕ್ಯಾಸಲ್ ರಾಕ್‌ನಲ್ಲಿ 14 ಸೆಂ.ಮೀ, ಕೊಟ್ಟಿಗೆಹಾರ 12 ಸೆಂ.ಮೀ ಹಾಗೂ ಮಣಿ, ಭಾಗಮಂಡಲ ತಲಾ 11 ಸೆಂ. ಮೀ, ಉಪ್ಪಿನಂಗಡಿ, ವಿರಾಜಪೇಟೆ ತಲಾ 9 ಸೆಂ.ಮೀ, ಅಂಕೋಲಾದಲ್ಲಿ 8 ಸೆಂ.ಮೀ, ಕೊಲ್ಲೂರು 7 ಸೆಂ.ಮೀ (karnataka weather forecast) ಮಳೆಯಾಗಿದೆ. ಇನ್ನು ಶಿರಾಲಿಯಲ್ಲಿ ಅತೀ ಹೆಚ್ಚಿನ ಗರಿಷ್ಠ ಉಷ್ಣಾಂಶ 32.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶವು 18.0 ಡಿಗ್ರಿ ಸೆಲ್ಸಿಯಸ್‌ ಬಾಗಲಕೋಟೆಯಲ್ಲಿ ದಾಖಲಾಗಿದೆ. ಮುಂದಿನ 24 ಗಂಟೆಯಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಭಾರೀ ಮಳೆ ಮುನ್ನೆಚ್ಚರಿಕೆ

ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು,ಕೊಡಗು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ. ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ.

ಮೀನುಗಾರರಿಗೆ ಎಚ್ಚರಿಕೆ

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ 45-55 ಕಿ.ಮೀ ವೇಗದಲ್ಲಿ 65 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಚಂಡಮಾರುತದ ವಾತಾವರಣ ಇರುತ್ತದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Balloon blast : ಬರ್ತ್‌ಡೇ ಪಾರ್ಟಿಯಲ್ಲಿ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ

ಸಾವೇಹಕ್ಲಿನಲ್ಲಿ ಅತಿಹೆಚ್ಚು ಮಳೆ ದಾಖಲು

ಹೊಸನಗರ : ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಲ್ಲಿ ಹಸ್ತ ಮಳೆಯ ಆರ್ಭಟ ಮುಂದುವರೆದಿದೆ. ಭಾನುವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಸಾವೇಹಕ್ಲಿನಲ್ಲಿ ಅತಿಹೆಚ್ಚು 144 ಮಿ.ಮೀ. ಮಳೆ ದಾಖಲಾಗಿದೆ.

ಉಳಿದಂತೆ ಹುಲಿಕಲ್ 122, ಮಾಸ್ತಿಕಟ್ಟೆ 110, ಚಕ್ರಾನಗರ 104, ಬಿದನೂರು ನಗರ 94, ಯಡೂರು 71, ಮಾಣಿ 70, ಸೊನಲೆ 66, ಸಂಪೆಕಟ್ಟೆ 59.5, ತ್ರಿಣಿವೆ 52, ಹೊಸನಗರ 42, ಮೇಲಿನಬೆಸಿಗೆ 39.5, ಮುಂಬಾರು 36.5 ಮತ್ತು ಕೋಡೂರು 31.5 ಮಿ.ಮಿ ಮಳೆ ದಾಖಲಾಗಿದೆ. 1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಭಾನುವಾರ ಬೆಳಗ್ಗೆ 8:00 ಗಂಟೆಗೆ 1787.95 ಅಡಿ ತಲುಪಿದ್ದು ಜಲಾಶಯಕ್ಕೆ 11738 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಹೊಸನಗರದಲ್ಲಿ ಭಾನುವಾರ ಭಾರಿ ಮಳೆ ನಡುವೆಯು ಜನರ ಓಡಾಟ

ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವ ಹೊಸನಗರ ತಾಲೂಕಿನಲ್ಲಿ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮಳೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ನೀರಿಗಾಗಿ ಪರಿತಪಿಸುವಂತಾಗಿತ್ತು. ರೈತಾಪಿ ಜನರು ಬೆಳೆದ ಮಳೆಯಾಧಾರಿತ ಬೆಳೆಗಳಾದ ಭತ್ತ, ಜೋಳ, ರಾಗಿ, ಶುಂಠಿ, ಸೇರಿದಂತೆ ಇನ್ನಿತರ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿದ್ದ ಕಾರಣದಿಂದ ಕಳೆದ ಎರಡು ವಾರಗಳ ಹಿಂದೆ ಬರ ಪ್ರದೇಶ ತಾಲೂಕು ಎಂದು ರಾಜ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿರುವುದರಿಂದ ತಾಲೂಕಿನಾದ್ಯಂತ ಶೀತಮಯ ವಾತಾವರಣ ಉಂಟಾಗಿದೆ. ವಿದ್ಯುತ್ ಸಹ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version