ಬೆಂಗಳೂರು: ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ ಅಬ್ಬರ (Karnataka Weather Forecast) ಮುಂದುವರಿದಿದೆ. ಉತ್ತರ ಒಳನಾಡಲ್ಲಿ ಮಳೆಯು (Rain News) ಆಮೆಗತಿಯಲ್ಲಿದ್ದರೆ, ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಸಕ್ರಿಯಗೊಂಡಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ಇಲ್ಲೆಲ್ಲ ಭರ್ಜರಿ ಮಳೆ ಸಾಧ್ಯತೆ
ಕರಾವಳಿಯ ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರಿಸಲಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಕೋಲಾರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜತೆಗೆ ಚಿಕ್ಕಬಳ್ಳಾಪುರ, ಚಿತ್ರದುರ್ಗದ ಕೆಲವೆಡೆ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗು ಇರಲಿದೆ.
ಮಳೆ ನಡುವೆಯೂ ತಾಪಮಾನ ಏರಿಕೆ
ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಜತೆಗೆ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.
ಗುಡುಗು ಮಳೆಯೊಂದಿಗೆ ಬೀಸಲಿದೆ ಬಲವಾದ ಗಾಳಿ
ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಒಂದೆರಡು ಬಾರಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಲಿದೆ. ಮೇಲ್ಮೈ ಗಾಳಿಯು ಬಲವಾಗಿರುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Belgavi News : ಗ್ರಾಮಸ್ಥರನ್ನು ಕಂಗೆಡಿಸಿದ ಸರಣಿ ಸಾವುಗಳು; ಇದು ದೇವಿ ಶಾಪನಾ?
ಶನಿವಾರ ಹೇಗಿತ್ತು ಮಳೆ ಅಬ್ಬರ
ನ.4ರ ಶನಿವಾರ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ, ಕರಾವಳಿಯ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಧರ್ಮಸ್ಥಳ, ಸೋಮವಾರಪೇಟೆ, ಹುಣಸೂರು, ಸಕಲೇಶಪುರದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ. ಮಂಗಳೂರು, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ, ರಾಮನಗರ, ಬಂಡೀಪುರ, ಚಿಂತಾಮಣಿ ಪಿಟಿಒ, ಚಿಕ್ಕಬಳ್ಳಾಪುರ, ಮಡಿಕೇರಿಯಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.
ಪುತ್ತೂರು, ಬೆಳ್ತಂಗಡಿ, ಟಿ ನರಸೀಪುರ, ಕಳಸ, ಭಾಗಮಂಡಲ, ಮಡಿಕೇರಿ, ಸರಗೂರು, ಕುಣಿಗಲ್, ಗೋಪಾಲ್ ನಗರ ಎಆರ್‌ಜಿ, ದೇವನಹಳ್ಳಿ, ಮಾಗಡಿ, ಕೊಳ್ಳೇಗಾಲ, ಪೊನ್ನಂಪೇಟೆಯಲ್ಲಿ ತಲಾ 2 ಸೆಂ.ಮೀ, ಉಪ್ಪಿನಂಗಡಿ, ಮಾಣಿ, ಮದ್ದೂರು, ರಾಯಲ್ಪಾಡು, ಹೊಸಕೋಟೆ, ದೊಡ್ಡಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಕೆಐಎಎಲ್‌ನಲ್ಲಿ ತಲಾ 1 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಕಡಿಮೆ ಉಷ್ಣಾಂಶ 18.0 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿದೆ.
ಹಾಸನಾಂಬೆ ದರ್ಶನಕ್ಕೆ ಮಳೆ ಅಡ್ಡಿ
ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದರ್ಶನಕ್ಕೆ ಮಳೆ ಅಡ್ಡಿಯಾಯಿತು. ಭಾನುವಾರ ಮಧ್ಯಾಹ್ನದ ವೇಳೆ ದಿಢೀರ್ ಸುರಿದ ಮಳೆಗೆ ಭಕ್ತರು ಹೈರಾಣಾದರು. ಸರತಿ ಸಾಲಿನ ಎಲ್ಲಾ ಕಡೆ ಟೆಂಟ್ ಹಾಕಿ ಮಳೆ ಬಂದರೂ ಸಮಸ್ಯೆ ಆಗದಂತೆ ಜಿಲ್ಲಾಡಳಿತ ಸಿದ್ಧತೆ ಮಾಡಿತ್ತು. ದೇಗುಲದ ಆವರಣದಲ್ಲಿ ನಿಂತಿದ್ದ ಕೆಲ ಭಕ್ತರಿಗೆ ದರ್ಶನಕ್ಕೆ ಮಳೆ ಅಡ್ಡಿ ಆಯಿತು. ನೈವೇದ್ಯಕ್ಕಾಗಿ ದರ್ಶನ ಸ್ಥಗಿತವಾಗಿದ್ದ ಸಂದರ್ಭದಲ್ಲಿ ದಿಢೀರ್ ಸುರಿದ ಮಳೆಗೆ ನೆನೆಯುತ್ತಲೇ ಭಕ್ತ ವೃಂದ ನಿಂತಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ