Site icon Vistara News

Karnataka Weather : ಮಲೆನಾಡು, ಕರಾವಳಿಯಲ್ಲಿ ಭಾರಿ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast

ಬೆಂಗಳೂರು: ರಾಜ್ಯಾದ್ಯಂತ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಕರಾವಳಿಯ ಹಲವು ಕಡೆಗಳಲ್ಲಿ, ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ (Karnataka Weather Forecast) ಇದೆ.

ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗಿನ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ‌ ನಿರೀಕ್ಷೆ ಮಾಡಲಾಗಿದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಜತೆಗೆ ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ ಇದೆ.

ನ.8ರಂದು ಒಳನಾಡು ಹಾಗೂ ಕರಾವಳಿಯ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಹಾಸನ, ಬಾಳೆಹೊನ್ನೂರಲ್ಲಿ ತಲಾ 9 ಸೆಂ.ಮೀ, ತಾಳಗುಪ್ಪ 8 ಸೆಂ.ಮೀ ಹಾಗೂ ಬೇವೂರು, ಭಾಗಮಂಡಲದಲ್ಲಿ ತಲಾ. 7 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ವಿಜಯಪುರದಲ್ಲಿ 18.5 ಡಿ.ಸೆ ದಾಖಲಾಗಿದೆ.

ವೆಪನ್‌ಗಳನ್ನು ಬಿಸಿಲಿನಲ್ಲಿ ಒಣಗಿಸಿದ ಸಿಬ್ಬಂದಿ!

ಇಡೀ ರಾಜ್ಯಕ್ಕೆ ಭದ್ರತೆ ಕೊಡುವ ಪೊಲೀಸ್ ಇಲಾಖೆಯ ಶಸ್ತ್ರಾಸ್ತ್ರಗಳಿಗೆ ಭದ್ರತೆ ಇಲ್ಲದಂತಾಗಿದೆ. ಕೇವಲ ಗಂಟೆಯ ಮಳೆಗೆ ಇಡೀ ಕೊಠಡಿಯ ಗೋಡೆಯೇ ಕುಸಿದು ಬಿದ್ದಿತ್ತು. ಉಲ್ಲಾಳು ಉಪನಗರ ಬಳಿ ಇರುವ ಪಶ್ಚಿಮ ಸಿಎಆರ್ ಶಸ್ತ್ರಾಸ್ತ್ರ ಕೊಠಡಿಯ ಭಾಗಶಃ ಕಟ್ಟಡವೇ ಕುಸಿದು ಬಿದ್ದಿದೆ. ಗೌಪ್ಯವಾಗಿರಬೇಕಾಗಿದ್ದ ಲಕ್ಷಾಂತರ ಮೌಲ್ಯದ ವೆಪನ್‌ಗಳು ಸದ್ಯ ಅವಶೇಷದಂತೆ ಕಾಣುತ್ತಿದೆ.

ಭಾರಿ ಮಳೆಗೆ ಶಸ್ತ್ರಾಸ್ತ್ರಗಳು ತೇಲಿಕೊಂಡು ಹೋಗುತ್ತಿದ್ದರೆ ಅಲ್ಲಿದ್ದ ಬೆರಳೆಣಿಕೆ ಸಿಬ್ಬಂದಿ ಅದನ್ನೆಲ್ಲ‌ ಒಂದು ಕಡೆ ಹಾಕಲು ಹರಸಾಹಸ ಪಟ್ಟರು. ಇಷ್ಟಕ್ಕೂ ಈ ಕಟ್ಟಡ ಕುಸಿತಕ್ಕೆ ಕಾರಣ ಅದಕ್ಕೆ ಹೊಂದಿಕೊಂಡಂತೆ ಇರುವ ಮೈದಾನ. ಆ ಸ್ಥಳವನ್ನು ಈಗಾಗಲೆ ಲಿಡ್ಕರ್ ಕಂಪನಿಗೆ ನೀಡಲಾಗಿದ್ದು ಕಾಮಗಾರಿಯಲ್ಲಿದೆ.

ಅಲ್ಲಿ ಶೇಖರಣೆಯಾಗುವ ನೀರು ಕಟ್ಟಡಕ್ಕೆ ಹಾನಿ ಉಂಟು ಮಾಡಿದೆ. ಹೀಗಾಗಿ ನೀರು ನಿಲ್ಲದಂತೆ ಸಿಎಆರ್ ಸಿಬ್ಬಂದಿ ರಂಧ್ರ ಕೊರೆದಿದ್ದರು. ಅದ್ಯಾವುದೂ ಪ್ರಯೋಜನವಾಗದೆ ಸದ್ಯ ಕಟ್ಟಡ ಕುಸಿದಿದೆ. ಇನ್ನು ಎಕೆ 47 ,9ಎಂಎಂ ಪಿಸ್ತೂಲ್ , ಪಂಪ್ ಆ್ಯಕ್ಷನ್ ಗನ್ ಸೇರಿದಂತೆ 210ಕ್ಕೂ ಹೆಚ್ಚು ವೆಪನ್‌ಗಳು ಮಳೆ ನೀರಿನಿಂದ ಹಾಳಾಗಿದೆ. ಅದೆಲ್ಲವನ್ನೂ ಬಿಸಿಲಿನಲ್ಲಿ ಒಣಗಿಸುವ ಕೆಲಸ ನಡೆಯುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version