Site icon Vistara News

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಬೆಂಗಳೂರಲ್ಲಿ ತುಂತುರು ಮಳೆಯಾಟ

Light to moderate rain very likely to occur at many places over Coastal Karnataka

ಬೆಂಗಳೂರು: ಕರಾವಳಿಯ ಹಲವೆಡೆ ಭರ್ಜರಿ ಮಳೆಯಾಗುತ್ತಿದ್ದು, ಜ.10ರಂದು ಮುಂದುವರಿಯಲಿದೆ (Rain News) ಎಂದು ಹವಾಮಾನ ಇಲಾಖೆ (Karnataka weather Forecast) ಮುನ್ಸೂಚನೆಯನ್ನು ನೀಡಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಸೇರಿ ಮಲೆನಾಡು ಭಾಗದಲ್ಲಿ ಸಾಧಾರಣವಾಗಿ ಮಳೆಯಾಗಲಿದೆ. ಇನ್ನು ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ.

ಇನ್ನು ರಾಜ್ಯದಲ್ಲಿ ಸೋಮವಾರದಂದು ಕರಾವಳಿ ಹಾಗೂ ದಕ್ಷಿಣ ಒಳನಾಡಲ್ಲಿ ಮಳೆಯಾಗಿದೆ. ಉತ್ತರ ಒಳನಾಡಲ್ಲಿ ಒಣಹವೆ ಮುಂದುವರಿದಿದೆ. ಕನಿಷ್ಠ ಉಷ್ಣಾಂಶವು ಬೀದರ್‌ನಲ್ಲಿ 16 ಡಿ.ಸೆ ದಾಖಲಾಗಿದೆ. ದಕ್ಷಿಣ ಕನ್ನಡದ ಮಂಗಳೂರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಪಣಂಬೂರು 4, ಉಡುಪಿಯಲ್ಲಿ 3 ಸೆಂ.ಮೀ, ಮುಲ್ಕಿ, ಮಾಣಿ, ಮೈಸೂರಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ತಾಪಮಾನ ಮುನ್ಸೂಚನೆ

ಮುಂದಿನ 48 ಗಂಟೆಯಲ್ಲಿ ರಾಜ್ಯದ ಹಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದಾಗಿ ಚಳಿಯ ವಾತಾವರಣವು ಕೊಂಚ ಹೆಚ್ಚಾಗಿ ಇರಲಿದೆ.

ಬೆಂಗಳೂರಲ್ಲಿ ಹೇಗಿರಲಿದೆ ಹವಾಮಾನ

ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶವು 25 ಹಾಗೂ ಕನಿಷ್ಠ ಉಷ್ಣಾಂಶವು 18 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಇದನ್ನೂ ಓದಿ: Peenya Flyover : ವಾಹನ ಸವಾರರೇ ಗಮನಿಸಿ ಜನವರಿ 16 ರಿಂದ ಪೀಣ್ಯ ಫ್ಲೈಓವರ್‌ ಬಂದ್‌!

ಚಳಿಗಾಲದಲ್ಲಿ ಹಲ್ಲಿನ ಸಮಸ್ಯೆ ನಿಭಾಯಿಸುವುದು ಹೇಗೆ?

ಹಲ್ಲುಗಳ ಕ್ಷೇಮಕ್ಕೆ ಮಾರಕವಾಗುವಂಥ ಕೆಲವು ವಿಚಿತ್ರ ಸವಾಲುಗಳು (Dental issues in winter) ಚಳಿಗಾಲದಲ್ಲಿ ಎದುರಾಗುವುದು ನಿಜ. ರಜೆಯ ಪ್ರವಾಸಗಳು, ಮಿತ್ರಕೂಟಗಳು, ಹೊಸವರ್ಷದ ಪಾರ್ಟಿ ಎಂದು ಸಹಜವಾಗಿ ಸಿಹಿ ತಿನ್ನುವ ಪ್ರಮಾಣ ಹೆಚ್ಚಿರುತ್ತದೆ. ಇದಕ್ಕೆ ಸರಿಯಾಗಿ, ಆಗಾಗ ಬಾಯಿ ತೊಳೆಯದಿರುವುದು, ಚಳಿಯ ನೆವವನ್ನೊಡ್ಡಿ ರಾತ್ರಿ ಹಲ್ಲುಜ್ಜದೇ ಮಲಗುವುದು ಮುಂತಾದವುಗಳಿಂದ ದಂತಸ್ವಾಸ್ಥ್ಯ ಹಾಳಾಗುತ್ತದೆ.

ಚಳಿಗಾಲದಲ್ಲಿ ದೇಹದೆಲ್ಲೆಡೆ ನೋವು ಹೆಚ್ಚು ಎಂಬ ದೂರು ಸಹಜ. ಆದರೆ ಹಲ್ಲಿಗೂ ಇದು ಅನ್ವಯಿಸುತ್ತದೆಯೇ? ಚಳಿಯಲ್ಲಿ ನಡುಗುತ್ತಾ ಕಟಕಟನೇ ಹಲ್ಲು ಕಡಿದು ಈ ಅವಸ್ಥೆ ಬರಬಹುದೆಂದು ಭಾವಿಸಿದ್ದರೆ, ಹಾಗೇನಿಲ್ಲ. ಚಳಿಯೆಂದು ಆಗೊಂದು ಕಾಫಿ ಗುಟುಕರಿಸಿದ್ದಾಯ್ತು; ಸ್ವಲ್ಪ ಹೊತ್ತಿಗೆ ಸೂಪ್‌ ಹೀರಿದ್ದಾಯ್ತು; ಮತ್ತೊಂದು ಖಡಕ್ ಕಷಾಯ;‌ ಆಮೇಲೆ ಗ್ರೀನ್‌ ಟೀ. ಇವೆಲ್ಲವುಗಳ ಬೆನ್ನಿಗೆ ಬಾಯಿ ತೊಳೆಯುತ್ತಾ ಕೂರುವುದಕ್ಕೆ ಸಾಧ್ಯವೇ? ತಣ್ಣೀರನ್ನು ಬಾಯಿಗೆ ಹಾಕುವುದೆಂತು! ಹಗಲಿಗೆ ಹೀಗಾದರೆ ರಾತ್ರಿಯ ಹೊತ್ತಿಗೆ ಹಲ್ಲುಜ್ಜುವಷ್ಟು ವ್ಯವಧಾನವಿಲ್ಲ. ಚಳಿಗೆ ಯಾವ ಮೊದಲು ಬೆಚ್ಚನೆಯ ಹೊದಿಕೆಯೊಳಗೆ ಮುದುರಿಕೊಳ್ಳುತ್ತೇವೋ ಎಂಬ ಗಡಿಬಿಡಿ. ಸಾಲದೇ ಹಲ್ಲು ಹಾಳಾಗುವುದಕ್ಕೆ ಇಷ್ಟು ಕಾರಣಗಳು?

ಹೌದು, ಹಲ್ಲುಗಳ ಕ್ಷೇಮಕ್ಕೆ ಮಾರಕವಾಗುವಂಥ ಕೆಲವು ವಿಚಿತ್ರ ಸವಾಲುಗಳು ಚಳಿಗಾಲದಲ್ಲಿ ಎದುರಾಗುವುದು ನಿಜ. ರಜೆಯ ಪ್ರವಾಸಗಳು, ಮಿತ್ರಕೂಟಗಳು, ಹೊಸವರ್ಷದ ಪಾರ್ಟಿ ಎಂದು ಸಹಜವಾಗಿ ಸಿಹಿ ತಿನ್ನುವ ಪ್ರಮಾಣ ಹೆಚ್ಚಿರುತ್ತದೆ. ಇದಕ್ಕೆ ಸರಿಯಾಗಿ, ಆಗಾಗ ಬಾಯಿ ತೊಳೆಯದಿರುವುದು, ಚಳಿಯ ನೆವವನ್ನೊಡ್ಡಿ ರಾತ್ರಿ ಹಲ್ಲುಜ್ಜದೇ ಮಲಗುವುದು ಮುಂತಾದವು ದಂತ ಸ್ವಾಸ್ಥ್ಯ ಹಾಳಾಗುವುದಕ್ಕೆ ಬಹಳಷ್ಟು ಕೊಡುಗೆಯನ್ನು ನೀಡುತ್ತವೆ. ಹಾಗಾದರೆ ಚಳಿಗಾಲದಲ್ಲಿ ಹಲ್ಲುಗಳ ಯೋಗಕ್ಷೇಮ ಕಾಪಾಡಲು ಏನು ಮಾಡಬಹುದು?

ಆಗಾಗ ನೀರು ಕುಡಿಯಿರಿ

ಚಳಿಗಾಲದಲ್ಲಿ ಬಾಯಾರಿಕೆಯ ಅನುಭವ ಸಹಜವಾಗಿ ಕಡಿಮೆ. ಹಾಗೆಂದು ನೀರು ಕುಡಿಯುವುದು ಕಡಿಮೆಯಾದರೆ ಹಲ್ಲುಗಳು ಸೇರಿದಂತೆ ದೇಹಾರೋಗ್ಯ ಕ್ಷೀಣಿಸುತ್ತದೆ. ಆಗಾಗ ನೆನಪಿನಿಂದ ನೀರು ಕುಡಿಯುವುದು ಅಗತ್ಯ. ಇದರಿಂದ ಬಾಯಲ್ಲಿ ಇಳಿದಿರುವ ಆಹಾರ ಕಣಗಳನ್ನು ಸ್ವಚ್ಛ ಮಾಡಿದಂತಾಗುತ್ತದೆ. ಬಾಯಿ ಒಣಗಿದಷ್ಟೂ ದಂತಕುಳಿಗಳ ಭೀತಿ ಹೆಚ್ಚು.

ಮೆಲ್ಲುವುದನ್ನು ನಿಲ್ಲಿಸಿ

ಚಳಿಯಲ್ಲಿ ಆಗೀಗ ಏನಾದರೂ ಬಾಯಾಡುವ ಬಯಕೆ ಆಗಬಹುದು. ಅಂಟಾದ ಚಿಕ್ಕಿ, ಉಪ್ಪಿನ ಶೇಂಗಾ, ಖಾರದ ಪಾಪ್‌ಕಾರ್ನ್‌ ಮುಂತಾದವುಗಳನ್ನು ಕಾಣುತ್ತಿದ್ದಂತೆ ತಿನ್ನುವ ಬಯಕೆಯಾಗಬಹುದು. ಇದಕ್ಕೆ ಕಡಿವಾಣ ಹಾಕಿ. ಆಮ್ಲೀಯ ತಿನಿಸುಗಳು ಮತ್ತು ಶರ್ಕರಪಿಷ್ಟಗಳನ್ನು ಹೆಚ್ಚು ಸಮಯದವರೆಗೆ ಹಲ್ಲುಗಳ ಮೇಲೆ ಉಳಿಸಿಕೊಂಡರೆ, ಬ್ಯಾಕ್ಟೀರಿಯಗಳಿಗೆ ಖಂಡಿತ ಹಬ್ಬ.

ಅತಿಯಾದ ಬಿಸಿ

ಚಳಿಯೆಂಬ ನೆವದಲ್ಲಿ ಸುಡುವಷ್ಟು ಬಿಸಿ ತಿನ್ನುವ, ಕುಡಿಯುವ ಬಯಕೆಯಾಗಬಹುದು. ಅದರಲ್ಲೂ ಶೀತ-ಕೆಮ್ಮು-ಗಂಟಲು ನೋವು ಇದ್ದರಂತೂ ಬಿಸಿ ಇದ್ದಷ್ಟಕ್ಕೂ ಸಾಲದು ಎಂಬಂತಾಗುತ್ತದೆ. ಆದರೆ ಈ ಭಯಾನಕ ಬಿಸಿಗಿಂತ ಹದವಾದ ಸಮಶೀತೋಷ್ಣ ಬಿಸಿ ಹಲ್ಲುಗಳಿಗೆ ಹಿತ. ಕಾರಣ, ಅತಿಯಾದ ಬಿಸಿ ಪೇಯಗಳು ಹಲ್ಲುಗಳ ಎನಾಮಲ್‌ ಕವಚವನ್ನು ಹಾಳು ಮಾಡುತ್ತವೆ. ಇದರಿಂದ ಹಲ್ಲಿನ ಸಮಸ್ಯೆ ಹೆಚ್ಚುತ್ತದೆ.

ಗಮನಿಸಿ

ಆದಷ್ಟು ಬೇಗ ಹಲ್ಲುಜ್ಜಿ ಹಾಸಿಗೆಯಲ್ಲಿ ಮುದುರಿಕೊಳ್ಳುವ ಉದ್ದೇಶವಿದ್ದರೆ ಅಥವಾ ಬೆಳಗಿನ ಚಳಿಯಲ್ಲಿ ನೀರು ಮುಟ್ಟಲಾಗದೆ ಹರಿಬರಿಯಲ್ಲಿ ಹಲ್ಲುಜ್ಜಿದ ಶಾಸ್ತ್ರ ಮಾಡಿದರೆ, ಸಮಸ್ಯೆ ಆಗುವುದು ಖಂಡಿತ. ಸರಿಯಾಗಿ ಹಲ್ಲುಜ್ಜದಿದ್ದರೆ ಹಲ್ಲು ಹಳದಿಯಾಗಿ, ಪ್ಲೇಕ್‌ ನಿರ್ಮಾಣವಾಗುತ್ತದೆ. ಅದೇ ಮುಂದುವರಿದು ಕುಳಿಯಾಗಿ, ಒಸಡುಗಳಲ್ಲೂ ಸಮಸ್ಯೆಗಳು ತಲೆದೋರುತ್ತದೆ.

ಹಲ್ಲುಜ್ಜುವುದೆಂದರೆ ಅದಷ್ಟನ್ನೇ ಸ್ವಚ್ಛ ಮಾಡುವುದಲ್ಲ. ಒಸಡು ಮತ್ತು ನಾಲಿಗೆಯನ್ನೂ ಶುಚಿ ಮಾಡಬೇಕು. ಬಾಯಿ ವಾಸನೆ ಬರುತ್ತಿದೆ ಎಂದರೆ ಬಾಯಿಯ ಸ್ವಚ್ಛತೆ ಸಾಕಾಗಲಿಲ್ಲ ಎಂದೇ ಅರ್ಥ. ಹಲ್ಲು, ಒಡಸು, ನಾಲಿಗೆ ಮುಂತಾಗಿ ಬಾಯಿಯ ಯಾವುದೇ ಭಾಗಗಳಲ್ಲಿ ಬ್ಯಾಕ್ಟೀರಿಯಗಳ ಜಮಾವಣೆಯ ಸಂಕೇತವದು. ನಿಯಮಿತವಾಗಿ ಹಲ್ಲುಗಳನ್ನು ಫ್ಲೋಸ್‌ ಮಾಡುವುದು ಅಗತ್ಯ. ಇವುಗಳಲ್ಲಿ ಒಳದಾರಿಗಳನ್ನು ಬಳಸಿದರೆ ಬಾಯಿಯ ಆರೋಗ್ಯ ಹಾಳಾಗುವುದು ದಿಟ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version