ಬೆಂಗಳೂರು: ರಾಜ್ಯದಲ್ಲಿ ಇನ್ನೆರಡು ದಿನ ಮಳೆಯ (Rain News) ಸಿಂಚನವಾಗಲಿದೆ. ಕರಾವಳಿಯ ಒಂದೆರಡು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾದರೆ, ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಧಾರಣ (Karnataka Weather Forecast) ಮಳೆಯಾಗಬಹುದು.
ತಾಪಮಾನದ ಮುನ್ಸೂಚನೆ
ಮುಂದಿನ 48 ಗಂಟೆಯಲ್ಲಿ ರಾಜ್ಯದ ಹಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದಾಗಿ ಚಳಿಯ ವಾತಾವರಣ ಇರಲಿದೆ. ಕೆಲವೊಮ್ಮ ಥಂಡಿ ಗಾಳಿ ಬೀಸಲಿದೆ.
ಬೆಂಗಳೂರಲ್ಲಿ ಆವರಿಸಲಿದೆ ದಟ್ಟ ಮಂಜು; ಜಿಟಿ ಮಳೆ ಸಾಥ್
ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಮಧ್ಯಾಹ್ನ ಅಥವಾ ಸಂಜೆ ವೇಳೆ ಹಗುರದಿಂದ ಕೂಡಿದ ಜಿಟಿ ಜಿಟಿ ಮಳೆಯಾಗಲಿದೆ. ಕೆಲವೊಮ್ಮೆ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ.
ಇದನ್ನೂ ಓದಿ:Killer Bmtc : ಎರಡು ದಿನದ ಅಂತರದಲ್ಲಿ ಬಿಎಂಟಿಸಿಗೆ ಮತ್ತೊಂದು ಬಲಿ
ಅಂಕೋಲಾ ಉತ್ಸವಕ್ಕೆ ಮಳೆ ಅಡ್ಡಿ; ದಿಕ್ಕಾಪಾಲಾದ ಜನರು
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಅಂಕೋಲಾ ಉತ್ಸವದ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ತಡರಾತ್ರಿ ಏಕಾಏಕಿ ಮಳೆ ಸುರಿದಿದೆ. ಧಾರಾಕಾರ ಮಳೆಗೆ ಜನರು ದಿಕ್ಕಾಪಾಲಾದರು. ಅಂಕೋಲಾದ ಜೈಹಿಂದ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಳೆ ಬರುತ್ತಿದ್ದಂತೆ ವೇದಿಕೆ ಎದುರಿನಿಂದ ಜನರು ಚೆಲ್ಲಾಪಿಲ್ಲಿಯಾದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.
ಕಳೆದ ನಾಲ್ಕೈದು ದಿನಗಳಿಂದ ಕರಾವಳಿಯಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ ಭಾಗದಲ್ಲಿ ಮಳೆಯಾಗುತ್ತಿದೆ. ಘಟ್ಟದ ಮೇಲಿನ ತಾಲ್ಲೂಕುಗಳಲ್ಲೂ ತುಂತುರು ಮಳೆಯ ಸಿಂಚನವಾಗುತ್ತಿದ್ದು, ಇನ್ನೂ ಎರಡು ದಿನ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರಲ್ಲೂ ಇಂದು ಜಿಟಿ ಜಿಟಿ ಮಳೆ
ಸೋಮವಾರ (ಜ.8) ಬೆಂಗಳೂರಿನ ಹಲವು ಭಾಗಗಳಲ್ಲಿ ವರುಣ ತಂಪೆರೆದಿದ್ದಾನೆ. ಕಳೆದೊಂದು ವಾರದಿಂದ ಮೋಡ ಕವಿದ ವಾತಾವರಣವಿತ್ತು. ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿತ್ತು. ಸೋಮವಾರ ಮಧ್ಯಾಹ್ನದ ವೇಳೆ ವಿಧಾನಸೌಧ, ಶಿವಾಜಿನಗರ, ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ ಸೇರಿದಂತೆ ಮಲ್ಲೇಶ್ವರ, ಬಸವನಗುಡಿ ಸುತ್ತಮುತ್ತ ತುಂತುರು ಮಳೆಯಾಗಿದೆ. ಇನ್ನು ದಿಢೀರ್ ಮಳೆಗೆ ಕೆಲ ವಾಹನ ಸವಾರರು ಪರದಾಡಿದರು.
ಕರಾವಳಿ, ಮಲೆನಾಡಲ್ಲಿ ಮಳೆಯಾಟ
ರಾಜ್ಯದಲ್ಲಿ ಭಾನುವಾರದಂದು ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಇತ್ತು. ದಕ್ಷಿಣ ಕನ್ನಡದ ಮಂಗಳೂರು ವಿಮಾನ ನಿಲ್ದಾಣದಲ್ಲಿ 4 ಸೆಂ.ಮೀ, ಮಣಿ, ಪಣಂಬೂರಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಶಿವಮೊಗ್ಗದ ತಾಳಗುಪ್ಪ 2 ಸೆಂ.ಮೀ, ಉತ್ತರ ಕನ್ನಡದ ಅಂಕೋಲಾ, ಚಿಕ್ಕಮಗಳೂರಿನ ಕೊಪ್ಪದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಇನ್ನು ವಿಜಯಪುರದಲ್ಲಿ ಕಡಿಮೆ ಉಷ್ಣಾಂಶ 14.5 ಡಿ.ಸೆ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.