ಬೆಂಗಳೂರು/ಕಾರವಾರ: ಕರಾವಳಿಯಲ್ಲಿಂದು ವರುಣಾರ್ಭಟ (Rain News) ಮುಂದುವರೆದಿದೆ. ಶನಿವಾರ ಬೆಳಗ್ಗೆ ಕುಮಟಾ, ಭಟ್ಕಳ ತಾಲೂಕುಗಳಲ್ಲಿ ಮಳೆಯ (Karnataka weather Forecast) ಸಿಂಚನವಾಗಿದೆ. ಕುಮಟಾದಲ್ಲಿ ಬೆಳಿಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದ್ದರೆ, ಭಟ್ಕಳ ತಾಲ್ಲೂಕಿನಲ್ಲಿ ಸಾಧಾರಣವಾಗಿ ಮಳೆ ಸುರಿಯುತ್ತಿದೆ.
ಕಾರವಾರ, ಅಂಕೋಲಾ ಸೇರಿ ಘಟ್ಟದ ಮೇಲಿನ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಕಳೆದ ಎರಡ್ಮೂರು ದಿನಗಳಿಂದ ಮಳೆ ಅಬ್ಬರಿಸುತ್ತಿದೆ. ಜನವರಿ 9ರ ವರೆಗೆ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮೀನುಗಾರರಿಗೆ ಎಚ್ಚರಿಕೆ
ಮುಂದಿನ 48 ಗಂಟೆಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸೂಚನೆಯನ್ನು ಇದೆ. ಇನ್ನು ಮೀನುಗಾರರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.
0.5-1.5 ಮೀ ಎತ್ತರವನ್ನು ಹೊಂದಿರುವ ಹೆಚ್ಚಿನ ಅವಧಿಯ (16-18 ಸೆಕೆಂಡ್) ಅಲೆಗಳ ಉಬ್ಬರವಿಳಿತದ ಪರಿಣಾಮದಿಂದಾಗಿ ಸಮುದ್ರ ತೀರದ ಸಮೀಪದಲ್ಲಿ ಪ್ರಕ್ಷುಬ್ಧವಾಗಿರುವ ಸಾಧ್ಯತೆ ಇದೆ. ಪ್ರಸ್ತುತ ವೇಗವು 10-30 ಸೆಕೆಂಡಿನ ನಡುವೆ ಬದಲಾಗುತ್ತದೆ. ಹೀಗಾಗಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ.
ಇನ್ನು ರಾಜಧಾನಿ ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಆವರಿಸಲಿದೆ. ಗರಿಷ್ಠ ಉಷ್ಣಾಂಶ 29 ಹಾಗೂ ಕನಿಷ್ಠ ಉಷ್ಣಾಂಶ 18 ಡಿ.ಸೆ ಇರುವ ಸಾಧ್ಯತೆ ಇದೆ.
ವಿಜಯಪುರದಲ್ಲಿ ಚಳಿ, ಕರಾವಳಿಯಲ್ಲಿ ಮಳೆ
ರಾಜ್ಯದ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದು, ಕನಿಷ್ಠ ಉಷ್ಣಾಂಶ ವಿಜಯಪುರದಲ್ಲಿ 14.8 ಡಿ.ಸೆ ದಾಖಲಾಗಿದೆ. ಶಿರಾಲಿಯಲ್ಲಿ 4 ಸೆಂ.ಮೀ, ಹೊನ್ನಾವರ, ಕುಮಟಾದಲ್ಲಿ ತಲಾ 3 ಸೆಂ.ಮೀ, ಮಂಕಿ, ಗೋಕರ್ಣ, ಮಣಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ