Site icon Vistara News

Karnataka Weather : ವಾರ ಪೂರ್ತಿ ಬೆಂಗಳೂರು ಸೇರಿ ಕರಾವಳಿಯಲ್ಲಿ ಗುಡುಗು ಸಹಿತ ಮಳೆ

Bengaluru Rain

ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ಕರಾವಳಿಯ ಹಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Karnataka Weather Forecast) ಸಾಧ್ಯತೆ ಇದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ (Rain News) ಸಾಧ್ಯತೆ ಇದೆ. ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ. ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ.

ಅ.30ರ ಸೋಮವಾರ ಬೆಂಗಳೂರಿನ ವಿವಿಧೆಡೆ ಮಳೆಯಾಗಿದೆ. ವಿಧಾನಸೌಧ, ಶಿವಾಜಿನಗರ, ಆರ್‌.ಟಿ ನಗರ, ಮೆಜೆಸ್ಟಿಕ್‌ ಸುತ್ತಮುತ್ತ ಮಳೆಯ ಸಿಂಚನವಾಗಿದೆ. ಶಾಂತಿನಗರ, ಮೈಸೂರು ರಸ್ತೆ, ಎಂ.ಜಿ ರೋಡ್ ಭಾಗದಲ್ಲಿ ಭಾರಿ ಮಳೆಯಾಗಿದೆ. ಧಾರವಾಡದಲ್ಲೂ ಗುಡುಗು ಸಹಿತ ಭಾರಿ ಮಳೆಯಾಗಿದೆ. ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆ ಸುರಿದಿದೆ. ಮಳೆಯಿಂದಾಗಿ ಕೆಲವೆಡೆ ವಿದ್ಯುತ್ ಕಡಿತ, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಬೆಂಗಳೂರಲ್ಲಿ ಸಂಜೆಗೆ ಮಳೆ

ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕು ಇರಲಿದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಉಷ್ಣಾಂಶಗಳ ಎಚ್ಚರಿಕೆ

ಮಳೆ ನಡುವೆಯೇ ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 -3 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವ ಸಾಧ್ಯತೆಯಿದೆ. ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 -3 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Karnataka Weather : ಉಡುಪಿಯಲ್ಲಿ ಭಾರಿ ಮಳೆ; ಸಿಡಿಲು ಬಡಿದು ಯುವಕ ಸಾವು

ಕರಾವಳಿ, ದಕ್ಷಿಣ ಒಳನಾಡಲ್ಲಿ ಮಳೆ ಅಬ್ಬರ

ಅ.29ರಂದು ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿರುವ ವರದಿ ಆಗಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಇತ್ತು. ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಕೊಡಗು ಜಿಲ್ಲೆಯ ನಾಪೋಕ್ಲು, ತಾಳಗುಪ್ಪದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಬೆಳ್ತಂಗಡಿ, ಬಾಳೆಹೊನ್ನೂರಲ್ಲಿ ತಲಾ 4 ಸೆಂ.ಮೀ, ಶಿರಾಲಿ, ಸಿದ್ದಾಪುರ, ಎನ್.ಆರ್.ಪುರದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.

ಪುತ್ತೂರು, ಹೊನ್ನಾವರ, ಮಡಿಕೇರಿ, ಮೂರ್ನಾಡಲ್ಲಿ ಹಾಗೂ ಶೃಂಗೇರಿ, ಕಳಸದಲ್ಲಿ ತಲಾ 2 ಸೆಂ.ಮೀ ಹಾಗೂ ಉಪ್ಪಿನಂಗಡಿ, ಮಾಣಿ, ಸುಳ್ಯ, ಧರ್ಮಸ್ಥಳ, ಉಡುಪಿ, ಕೋಟ, ಸಿದ್ದಾಪುರ, ಗೆರ್ಸೊಪ್ಪ, ಜಯಪುರ, ಸೋಮವಾರಪೇಟೆ, ಭಾಗಮಂಡಲ ವಿರಾಜಪೇಟೆ, ಹುಂಚದಕಟ್ಟ, ಸಕಲೇಶಪುರ ಸೇರಿ ಹುಣಸೂರಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಇತ್ತ ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 36.5 ಡಿ.ಸೆ, ಕಡಿಮೆ ಉಷ್ಣಾಂಶ 16.2 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version