ಬೆಂಗಳೂರು: ಪಠ್ಯ ಪುಸ್ತಕ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಪರಿಷ್ಕರಣೆಯನ್ನು ಸ್ಥಗಿತಗೊಳಿಸವಂತೆ ಸರ್ಕಾರದ ಮೇಲೆ ನಿತ್ಯವೂ ಒತ್ತಡ ಹೇರಲಾಗುತ್ತಿದ್ದು, ಈ ಸಂಬಂಧ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ. ಪಿ. ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥ ಅವರನ್ನು ಆಯ್ಕೆ ಮಾಡಲು ಯಾವ ಮಾನದಂಡ ಅನುಸರಿಸಲಾಗಿದೆ ಎಂದು ನಾಡಿನ 83 ಸಾಹಿತಿಗಳು ಸೋಮವಾರ ಮುಖ್ಯಮಂತ್ರಿಗೆ ಪತ್ರ ಬರೆದು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ನಿರಂಜನಾರಾಧ್ಯ ಪತ್ರ ಬರೆದಿದ್ದು, ಪರಿಷ್ಕರಣೆಯು ಅಸಂವಿಧಾನಿಕ, ಅಪ್ರಜಾಸತ್ತಾತ್ಮಕ ಹಾಗು ಅವೈಜ್ಞಾನಿಕವಾಗಿದೆ, ಹೀಗಾಗಿ ಪಠ್ಯಪುಸ್ತಕ ಪರಿಷ್ಕರಣೆ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ,
ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯಪುಸ್ತಕವನ್ನು ಕ್ರಮವನ್ನು ರೂಪಿಸುವಾಗ ಅಥವಾ ಪರಿಷ್ಕರಿಸುವಾಗ , ಒಂದು ಪ್ರಮಾಣೀಕರಿಸಿದ ಚೌಕಟ್ಟು ಹಾಗು ಪ್ರಜಾಸತ್ತಾತ್ಮಕ ವಿಧಾನವನ್ನು ಅನುಸರಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ ಪಠ್ಯ ಪುಸ್ತಕಗಳ ರಚನೆ ಅಥವಾ ಪರಿಷ್ಕರಣೆಯ ಸಂದರ್ಭದಲ್ಲಿ ಭಾಷಾ ಹಾಗು ಸಮಾಜ ವಿಜ್ಞಾನದ ವಿಷಯಗಳಲ್ಲಿ, ವಿಷಯಗಳಲ್ಲಿ ವಿಷಯದ ಜೊತೆಗೆ ವಸ್ತುನಿಷ್ಠತೆ, ಸಾಕ್ಷಾಧಾರಗಳು ಮತ್ತು ಪಠ್ಯದ ಮೂಲಕ ಮಕ್ಕಳಲ್ಲಿ ಬೆಳೆಸಬೇಕಾದ ಮೌಲ್ಯಗಳು ಪ್ರಾಮುಖ್ಯತೆ ಪಡೆಯುತ್ತವೆ . ವಿಷಯ ಆಯ್ಕೆಯ ಜೊತೆಗೆ ಲೇಖಕರ ಹಿನ್ನೆಲೆ ಮತ್ತು ಅದನ್ನು ಸಮರ್ಥಿಸಬಹುದಾದ ಸಂಶೋಧನಾತ್ಮಕ ಪುರಾವೆ ಮಕ್ಕಳಿಗೆ ಆದರ್ಶವಾಗುತ್ತದೆ . ಈ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯ ಪುಸ್ತಕಗಳನ್ನು ರಚಿಸುವಾಗ ಸ್ವಾತಂತ್ರ್ಯ, ಭಾತೃತ್ವ, ನಂಬಿಕೆ ,ಪರಸ್ಪರ ಗೌರವ ಮತ್ತು ಬಹುತ್ವವನ್ನು ಗೌರವಿಸುವುದು ಮತ್ತು ಮಾನವೀಯ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸುವ ಮೂಲಕ ಪ್ರಜ್ಞಾವಂತ ನಾಗರೀಕರನ್ನಾಗಿ ರೂಪಿಸುವ ಪಠ್ಯವನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿ ಒಂದು ವಸ್ತುನಿಷ್ಠ ವೈಚಾರಿಕ ವಿಷಯ ತಜ್ಞತೆಯ ಸಮಿತಿಯ ಮೇಲಿರುತ್ತದೆ ಎಂದು ನಿರಂಜನಾರಾಧ್ಯ ಹೇಳಿದ್ದಾರೆ.
ಮಾನವ ಹಕ್ಕುಗಳ ಪರಿಕಲ್ಪನೆಗೆ ಒಂದು ಸಾರ್ವತ್ರಿಕ ಚೌಕಟ್ಟಿದೆ. ಮಕ್ಕಳು ಚಿಕ್ಕವರಿರುವಾಗಲೇ ಅವರಿಗೆ ಈ ಸಾರ್ವತ್ರಿಕ ಮೌಲ್ಯಗಳನ್ನು ಅವರ ವಯಸ್ಸಿಗೆ ಅನುಗುಣವಾದ ಪರಿಭಾಷೆಯಲ್ಲಿ ಪರಿಚಯಿಸುವುದು ಅಗತ್ಯವಿದೆ. ಸಮಕಾಲೀನ ಭಾರತವನ್ನು ಕೇಂದ್ರವಾಗಿಟ್ಟುಕೊಂಡು ವಿದ್ಯಾರ್ಥಿಗಳಿಗೆ ದೇಶ ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗು ಸಾಂಸ್ಕೃತಿಕ ಸವಾಲುಗಳನ್ನು ವಿಶ್ಲೇಷಿಸಿ ತೀರ್ಮಾನಿಸುವ ಆಳವಾದ ಜ್ಞಾನವನ್ನು ಒದಗಿಸಬೇಕು. ಜ್ಞಾನ ಗ್ರಹಿಕೆಯ ಪಲ್ಲಟವನ್ನು ಗಮನದಲ್ಲಿಟ್ಟಿಕೊಂಡು, ವರ್ತಮಾನ ಭಾರತವನ್ನು ಆದಿವಾಸಿ, ದಲಿತ ಮತ್ತು ಇನ್ನಿತರ ಸಮಾಜದ ಅಂಚಿನಲ್ಲಿರುವ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸುವಂತಾಗಬೇಕು ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಆಧುನಿಕ ಚರಿತ್ರೆಯ ಸಂಗತಿಗಳನ್ನು ಹಾಗು ಜಾಗತಿಕ ಮಟ್ಟದಲ್ಲಿನ ಮಹತ್ವದ ಬೆಳವಣಿಗೆಗಳನ್ನು ಚರಿತ್ರೆಯಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಸುತ್ತಲಿನ ಪ್ರಪಂಚದಲ್ಲಿ ಬದಲಾವಣೆ ಮತ್ತು ನಿರಂತರತೆಯ ಪ್ರಕ್ರಿಯೆಗಳನ್ನು ಅನ್ವೇಷಿಸಲು ಮತ್ತು ಅಧಿಕಾರ ಮತ್ತು ಹತೋಟಿ ಇವುಗಳನ್ನು ಅಂದು ಹಾಗೂ ಇಂದು ಯಾವ ಬಗೆಯಲ್ಲಿ ಬಳಸಲಾಗಿದೆ ಎಂಬುವುದನ್ನು ತುಲನಾತ್ಮಕವಾಗಿ ಮತ್ತು ವಿಮರ್ಶಾತ್ಮಕವಾಗಿ ನೋಡುವುದನ್ನು ಚರಿತ್ರೆಯ ಮುಖಾಂತರ ತಿಳಿಸಿಕೊಡಬೇಕು ಎಂದು ನಿರಂಜನಾರಾಧ್ಯ ವಿವರಿಸಿದ್ದಾರೆ.
ಎಲ್ಲಕ್ಕಿಂತ ಮಿಗಿಲಾಗಿ, ಭಾರತೀಯ ಸಂವಿಧಾನದ ತಾತ್ವಿಕ ಬುನಾದಿ ಮತ್ತು ಅದರಲ್ಲಿ ಪ್ರಸ್ತಾಪವಾಗಿರುವ ವಿಶಿಷ್ಟ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಭಾತೃತ್ವ, ಜಾತ್ಯತೀತತೆ, ಘನತೆ, ಬಹುತ್ವ ಮತ್ತು ಶೋಷಣೆ ವಿಮುಕ್ತಿ ಸಮ-ಸಮಾಜದ ಬಗ್ಗೆ ಆಳವಾದ ಚರ್ಚೆ ಶಿಕ್ಷಣ ಪ್ರಕ್ರಿಯೆಯ ಕೇಂದ್ರಬಿಂದುವಾಗಿರಬೇಕು. ಭಾರತದಲ್ಲಿ ಪ್ರಜಾಪ್ರಭುತ್ವ ಪ್ರವೃದ್ಧಮಾನಕ್ಕೆ ಬಂದಿದ್ದು, ಪ್ರಜಾಪಭುತ್ವವನ್ನು ಗಟ್ಟಿಗೊಳಿಸುವ ಬಲಿಷ್ಠ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಿದೆ. ಅದರಲ್ಲೂ ವಿಶೇಷವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸಮಾಜವನ್ನು ವಿಶ್ಲೇಷಿಸಲು ಅಗತ್ಯವಾದ ಜ್ಞಾನವನ್ನು ಮಕ್ಕಳಿಗೆ ಕಟ್ಟಿಕೊಡಬೇಕಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ ಈಗ ನಡೆಯುತ್ತಿರುವ ಪಠ್ಯಪರಿಷ್ಕಣೆ ಪ್ರಕ್ರಿಯೆಯು, ಇದೆಲ್ಲವನ್ನೂ ಗಾಳಿಗೆ ತೂರಿ ಕೇವಲ ಒಂದು ಪಕ್ಷದ ಕೋಮುವಾದಿ ಹಾಗು ಪ್ರತಿಗಾಮಿ ವಿಷಯಗಳನ್ನು ಪಠ್ಯದಲ್ಲಿ ಸೇರಿಸುವ ಮೂಲಕ ಕೋಮುವಾದ ಹಾಗು ಪಂಥೀಯ ಭಾವನೆಗಳನ್ನು ಬಿತ್ತಿ-ಬೆಳೆಸುವ ಅಪಾಯಕಾರಿ ಬೆಳೆವಣಿಗೆಯಾಗಿ ಮಾರ್ಪಟ್ಟಿದೆ ಎಂದು ನಿರಂಜನಾರಾಧ್ಯ ವಿಷಾಧಿಸಿದ್ದಾರೆ.
ಪಠ್ಯ ಪರಿಷ್ಕರಣೆ ಎಂದರೆ ಪಾಠ ಸೇರಿಸುವ- ಪಾಠ ತೆಗೆಯುವ ಆಟವಾಗಿ ಮಾರ್ಪಟ್ಟಿದೆ .
ಈ ಎಲ್ಲಾ ಬೆಳವಣಿಗೆಗಳನ್ನು ಒಬ್ಬ ಸಾಮಾನ್ಯ ಪ್ರಜ್ಞಾವಂತನಾಗಿ ಯಾವುದೇ ಪಕ್ಷಪಾತವಿಲ್ಲದೆ , ಸಂವಿಧಾನದ ಚೌಕಟ್ಟು ಮೌಲ್ಯಗಳನ್ನು ಹಾಗು ೨೦೦೫ ರ ಪಠ್ಯಕ್ರಮ ಚೌಕಟ್ಟಿನ ನೆಲೆಯಲ್ಲಿ ಗಮನಿಸಿದರೆ ಆಘಾತ ಮತ್ತು ಆತಂಕವಾಗುತ್ತಿದೆ. ಒಂದು ಪಠ್ಯಕ್ರಮ ಚೌಕಟ್ಟಿಲ್ಲದೆ ಪರಿಷ್ಕರಣೆ ಹೇಗೆ ಸಾಧ್ಯ .ಇದು ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಅತ್ಯಂತ ವಿಷಾದಕರ ಬೆಳವಣಿಗೆ. ಶಿಕ್ಷಕರು, ಮಕ್ಕಳ ಪಾಲಕರು , ಶಿಕ್ಷಣ ತಜ್ಞರು ಹಾಗು ವಿಷಯ ತಜ್ಞರನ್ನು ಒಳಮಾಡಿಕೊಳ್ಳದೆ, ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಮಕ್ಕಳ ಶಿಕ್ಷಣದ ಜೊತೆಗೆ ಭವಿಷ್ಯವನ್ನು ಬಲಿಕೊಡಲು ಹೊರಟಿರುವುದು ಅತ್ಯಂತ ಖಂಡನೀಯ.ನಮ್ಮ ನಾಡಿನ ಮಕ್ಕಳ ಶಿಕ್ಷಣ ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗಿರಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದ್ದಾರೆ.
ನಮ್ಮ ಮಕ್ಕಳು ಸ್ವಾತಂತ್ರ್ಯ ಚಳುವಳಿಯ ನೈಜ ಇತಿಹಾಸವನ್ನು ಅರಿತು , ತ್ಯಾಗ ಬಲಿದಾನ ಹೋರಾಟಗಳಗಳ ಮೂಲಕ ಪಡೆದ ಈ ಮೌಲ್ಯಯುತ ಸ್ವಾತಂತ್ರ್ಯವನ್ನು ಗೌರವಿಸಲು ಅಗತ್ಯವಾದ ಜ್ಞಾನವನ್ನು ಕಟ್ಟಿಕೊಡಬೇಕು. ಜೊತೆಗೆ, ಸ್ವಾತಂತ್ರ್ಯ ಚಳುವಳಿಯ ಅಂತಿಮ ಫಲಿತಾಂಶವಾಗಿ ರೂಪಗೊಂಡ ಸಂವಿಧಾನವನ್ನು ಪೂರ್ಣವಾಗಿ ಜಾರಿಗೊಳಿಸುವ ಮೂಲಕ ಒಂದು ಸಮ ಸಮಾಜವನ್ನು ಕಟ್ಟಿಕೊಳ್ಳಬೇಕು. ಜೊತೆಗೆ, ಶಿಕ್ಷಣ ನಮ್ಮಲ್ಲಿರು ಹಲವು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಮಸ್ಯೆಗಳಿಗೆ ಪರಿಹಾರವನ್ನೊದಗಿಸುವ ಮೂಲಕ ಸಾಮಾಜಿಕ ಪರಿವರ್ತನೆಯ ಸಾಧನವಾಗಬೇಕು ಎಂದು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ಈ ಸುದ್ದಿಯನ್ನೂ ಓದಿ| ರೋಹಿತ್ ಚಕ್ರತೀರ್ಥ ಆಯ್ಕೆಗೆ ಮಾನದಂಡ ಏನು?: ಸರ್ಕಾರಕ್ಕೆ 83 ಸಾಹಿತಿಗಳ ಪತ್ರ
ಈಗಿನ ಪರಿಷ್ಕರಣೆಯಲ್ಲಿ ಇದಾವುದು ಚರ್ಚೆಯಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ , ಪಠ್ಯ ಪುಸ್ತಕದ ಪರಿಷ್ಕರಣಾ ಪ್ರಹಸನವನ್ನು ಇಲ್ಲಿಗೆ ನಿಲ್ಲಿಸಿ, ಮಕ್ಕಳಿಗೆ ಆದಷ್ಟು ಶೀಘ್ರವಾಗಿ ಪಠ್ಯಪುಸ್ತಕಗಳನ್ನು ಒದಗಿಸಲು ಕ್ರಮವಹಿಸಬೇಕೆಂದು ನಾನು ತಮ್ಮನ್ನು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇನೆ. ಈಗಿನ ಪರಿಷ್ಕರಣಾ ಕ್ರಮ, ವಿಧಾನ ಮತ್ತು ವಿಷಯಗಳ ಆಯ್ಕೆಯಲ್ಲಿ ಹೆಚ್ಚು ಗೊಂದಲವಿರುವುದರಿಂದ, ಈಗಿನ ಪರಿಷ್ಕರಣೆಯನ್ನು ಸಂಪೂರ್ಣವಾಗಿ ಕೈಬಿಟ್ಟು , ಈ ಹಿಂದೆ ರಚನೆಯಾಗಿದ್ದ ಪಠ್ಯಪುಸ್ತಕಗಳನ್ನು ಯಥಾವತ್ತಾಗಿ ಮುಂದುವರಿಸಬೇಕೆಂದು ಒತ್ತಾಯಿಸಿದ್ದಾರೆ.
ಬಸವಾದಿ ನೆಲೆಯಲ್ಲಿನ ಸಮಾನತೆ , ಅನುಭವ ಮಂಟಪದ ಮುಕ್ತ ಚರ್ಚೆಯ ಪರಂಪರೆ ಹಾಗು ಎಲ್ಲಕಿಂತ ಮಿಗಿಲಾಗಿ ಜಾತ್ಯತೀತ ಸಮಾಜದ ಕಲ್ಪನೆಯ ಸಮಾಜದಿಂದ ಬಂದಿರುವ ತಾವು ಈ ಸೂಕ್ಷ್ಮತೆಗಳನ್ನು ಅರಿತು ತಕ್ಷಣ ಮಧ್ಯಪ್ರವೇಶಿಸಬೇಕೆಂದು ನಿರಂಜನಾರಾಧ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.