ಭಟ್ಕಳ: ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು, ಒಂದೂವರೆ ವರ್ಷದ ಮಗುವೊಂದರ ಮೇಲೆ ದಾಳಿ ನಡೆದ ಪರಿಣಾಮ ಮಗು ತೀವ್ರ ಗಾಯಗೊಂಡಿದೆ. ಮಗುವಿನ ಮೂಗಿನ ಮೇಲೆ ಮತ್ತು ಮುಖಕ್ಕೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಅಲ್ಲದೆ, ಇನ್ನೂ ಒಂದು ಮಗು ಸೇರಿ ಆರು ಜನರು ಪ್ರತೈೇಕ ಕಡೆಗಳಲ್ಲಿ ದಾಳಿಗೊಳಗಾಗಿದ್ದಾರೆ.
ಒಂದು ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಇನ್ನು ಆರು ಮಂದಿಗೆ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಡೊಂಗರ ಪಳಿಯಲ್ಲಿ 20 ತಿಂಗಳ ಮಗುವಿನ ಮೇಲೆ ನಾಯಿಯೊಂದು ದಾಳಿ ನಡೆಸಿದ್ದು, ಮುಖದ ಮೇಲೆ ಮತ್ತು ಮೂಗಿಗೆ ತೀವ್ರ ಗಾಯಗಳಾಗಿವೆ. ಮಗುವನ್ನು ಪ್ರಾಥಮಿಕವಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೊರ್ಟೆ, ಸೋಡಿಗದ್ದೆ, ಮೂಡ ಭಟ್ಕಳ, ಡೊಂಗರಪಲ್ಲಿ, ಹನುಮಾನ್ ನಗರಗಳು ಹಾಗೂ ನವಾಯತ್ ಕಾಲೋನಿಯಲ್ಲಿ ಬೀದಿ ನಾಯಿಗಳಿಂದ ದಾಳಿಗಳು ನಡೆದಿವೆ. ಭಟ್ಕಳ ಸರಕಾರಿ ಆಸ್ಪತ್ರೆಯ ವರದಿ ಪ್ರಕಾರ ಬೆಳಗ್ಗೆಯಿಂದ ರಾತ್ರಿ 8ರವರೆಗೆ ಒಟ್ಟು ಆರು ಮಂದಿ ನಾಯಿ ದಾಳಿಗೆ ಒಳಗಾಗಿದ್ದಾರೆ.
ನಾಯಿ ದಾಳಿ ಸಂಬಂಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ| ನಾಯಿ ಬೊಗಳಿದ್ದಕ್ಕೆ ನಾಯಿ ಮತ್ತು ಮಾಲೀಕನ ಮೇಲೆ ಹಲ್ಲೆ, ದೆಹಲಿಯಲ್ಲೊಂದು ಆಘಾತಕಾರಿ ಘಟನೆ