Site icon Vistara News

Karwar News: ಉ.ಕ. ಜಿಲ್ಲೆಗೆ ಒಲಿದ ರಾಜ್ಯ ಮಟ್ಟದ ಪ್ರಶಸ್ತಿ; ಆರು ಪ್ರಶಸ್ತಿ ಬಾಚಿಕೊಂಡ ಜಿಲ್ಲೆಯ ಸಾಧನೆ ಏನು?

CEO Ishwar Kandoo karwar

#image_title

ಕಾರವಾರ: “ಸಂಜೀವಿನಿ-ಕರ್ನಾಟಕ (Sanjeevini-Karnataka) ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ” ವೈಯಕ್ತಿಕ ಹಾಗೂ ಒಕ್ಕೂಟದ ವಿಭಾಗದಲ್ಲಿ 2022-23ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಸಾಧನೆ ಮಾಡಿದ್ದಕ್ಕಾಗಿ ಉತ್ತರ ಕನ್ನಡ ಜಿಲ್ಲೆಗೆ ಆರು (ರಾಜ್ಯದಲ್ಲೇ ಅತಿ ಹೆಚ್ಚು) ಪ್ರಶಸ್ತಿಗಳು ಲಭಿಸಿವೆ.

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಜಿಲ್ಲಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳನ್ನು ಒಗ್ಗೂಡಿಸಿಕೊಂಡು ಹಲವು ಯೋಜನೆಗಳನ್ನು ಕಾರ್ಯಗತ ಮಾಡಲಾಗುತ್ತದೆ. ಇದರ ಭಾಗವಾಗಿ ಎನ್‌ಆರ್‌ಎಲ್‌ಎಂ ಅಭಿಯಾನದಡಿ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವುದರ ಜತೆಗೆ ಯಶಸ್ವಿಯಾಗಿ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವ ವಿವಿಧ ಸ್ವಸಹಾಯ ಸಂಘಗಳ ಮಹಿಳೆಯರು ಮತ್ತು ಅಧಿಕಾರಿಗಳನ್ನು ಗುರುತಿಸಿ, ಉತ್ತೇಜಿಸಿ ಹಾಗೂ ಗೌರವಿಸುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: Sugar production : ಸಕ್ಕರೆ ದಾಸ್ತಾನಿಗೆ ಯಾವುದೇ ಕೊರತೆ ಇಲ್ಲ: ಕೇಂದ್ರ ಸರ್ಕಾರ

“ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ರಾಜ್ಯ ಮಟ್ಟದ ಪ್ರಶಸ್ತಿಗೆ ವಿವಿಧ ವಿಭಾಗದಲ್ಲಿ ಮಹಿಳಾ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್ ಸಂಸ್ಥೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿ ಸಭಾಂಗಣದಲ್ಲಿ ಮಾ. 8ರಂದು ನಡೆಯುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಆಯ್ಕೆಯಾದ ಎಲ್ಲ ಮಹಿಳೆಯರು ಮತ್ತು ಅಧಿಕಾರಿಗಳಿಗೆ ರಾಜ್ಯದ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ” ಎಂದು ಜಿಲ್ಲಾ ಪಂಚಾಯಿತಿಯ ಡಿಆರ್‌ಡಿಎ ಶಾಖೆಯ ಯೋಜನಾ ನಿರ್ದೇಶಕ ಕರೀಂ ಅಸಾದಿ ತಿಳಿಸಿದ್ದಾರೆ.

ವೈಯಕ್ತಿಕ ಹಾಗೂ ಒಕ್ಕೂಟ ವಿಭಾಗದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ.

ಉತ್ತಮ ಕಾರ್ಯ ಸಾಧನೆಯ ರಾಜ್ಯ ಮಟ್ಟದ ಜಿಪಂ ಪ್ರಶಸ್ತಿ ವಿಭಾಗ

ರಾಜ್ಯದಲ್ಲಿ ಅತಿ ಹೆಚ್ಚು ಸಸ್ಯ ಕ್ಷೇತ್ರ ಮತ್ತು ಸಸಿಗಳನ್ನು ಬೆಳೆಸಿರುವ ಅತ್ಯುತ್ತಮ ಜಿಲ್ಲೆಗೆ ನೀಡುವ 2022-23ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಯು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯ ಸಂಜೀವಿನಿ-ಎನ್‌ಆರ್‌ಎಲ್‌ಎಂ ವಿಭಾಗಕ್ಕೆ ಲಭಿಸಿದೆ.

ಪಿಎಂವಿಡಿವಿಕೆ ಉತ್ತಮ ಕಾರ್ಯ ನಿರ್ವಣೆ ವಿಭಾಗ

ಪ್ರಧಾನ ಮಂತ್ರಿ ವನಧನ ವಿಕಾಸ ಕೇಂದ್ರಗಳ ಉತ್ತಮ ಕಾರ್ಯ ನಿರ್ವಹಣೆಗಾಗಿ ನೀಡುವ ರಾಜ್ಯ ಮಟ್ಟದ 2022-23ನೇ ಸಾಲಿನ ಉತ್ತಮ ಸಾಧನೆ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಪಡೆದುಕೊಂಡಿದೆ.

ಅತ್ಯುತ್ತಮ ಕಾರ್ಯ ಸಾಧನೆ ವಿಭಾಗ

ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್ ಯೋಜನೆಯಡಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ಸಾಧನೆ ಮಾಡಿರುವ ಗ್ರಾಮ ಪಂಚಾಯಿತಿ ಒಕ್ಕೂಟಕ್ಕೆ ನೀಡುವ 2022-23ನೇ ಸಾಲಿನ ರಾಜ್ಯ ಮಟ್ಟದ ಪುರಸ್ಕಾರಕ್ಕೆ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿಯ ಭಾಗ್ಯಶ್ರೀ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಆಯ್ಕೆಯಾಗಿದೆ.

ಉತ್ತಮ ಕಾರ್ಯ ಸಾಧನೆಯ ಸ್ವಸಹಾಯ ಗುಂಪು ವಿಭಾಗ

ಜಿಲ್ಲಾ ಪಂಚಾಯಿತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್ ಯೋಜನೆ ಅನುಷ್ಠಾನಗೊಳಿಸಿದ ಉತ್ತಮ ಕಾರ್ಯ ಸಾಧನೆಗಾಗಿ ಜಿಲ್ಲೆಯ ಜೋಯಿಡಾ ತಾಲೂಕಿನ ಜೋಯಿಡಾ ಗ್ರಾಮ ಪಂಚಾಯಿತಿ ಒಕ್ಕೂಟದ ಮೋರೇಶ್ವರ ಸ್ವಸಹಾಯ ಗುಂಪು ಆಯ್ಕೆಯಾಗಿದೆ.

ವೈಯಕ್ತಿಕ ಸಾಧನೆ ವಿಭಾಗ

ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಹಣಕಾಸು ವಹಿವಾಟು ಮಾಡಿದ ಬ್ಯಾಂಕ್ ವಹಿವಾಟುದಾರ/ ಡಿಜಿ ಪೇ ಕಾರ್ಯ ನಿರ್ವಹಿಸಿದವರಿಗೆ ಉತ್ತೇಜಿಸುವ ನಿಟ್ಟಿನಲ್ಲಿ ನೀಡುವ 2022-23ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಜಿಲ್ಲೆಯ ಕುಮಟಾ ತಾಲೂಕಿನ ನಾಡುಮಾಸ್ಕೇರಿ ಗ್ರಾಮದ ಗಿರಿಜಾ ಅನಂತ ಗೌಡ ಅವರು ಭಾಜನರಾಗಿದ್ದಾರೆ.

ಅತ್ಯುತ್ತಮ ಸಾಧನೆಗೈದ ಟಿಪಿಎಂ ವಿಭಾಗ

ಜಿಲ್ಲೆಯ ತಾಲೂಕು ಮಟ್ಟದಲ್ಲಿ ಸ್ವಸಹಾಯ ಗುಂಪುಗಳು ಹಾಗೂ ಗ್ರಾಪಂ ಒಕ್ಕೂಟಗಳನ್ನು ಒಗ್ಗೂಡಿಸಿಕೊಂಡು ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್ ಯೋಜನೆಯಡಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಿಗೆ ನೀಡುವ 2022-23ನೇ ಸಾಲಿನ ರಾಜ್ಯಮಟ್ಟದ ಉತ್ತಮ ಸಾಧನೆ ಪ್ರಶಸ್ತಿಯು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಪಂಚಾಯಿತಿಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಮಂಜಣ್ಣ ಅವರಿ ಲಭಿಸಿದೆ.

ಇದನ್ನೂ ಓದಿ: Holi 2023 : ಹೋಳಿ ಆಚರಿಸಿದ ಆರ್​ಸಿಬಿ ತಂಡ, ವಿದೇಶಿ ಆಟಗಾರ್ತಿಯರೂ ಸಂಭ್ರಮದಲ್ಲಿ ಭಾಗಿ

“ಗ್ರಾಮೀಣ ಪ್ರದೇಶದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿದ ಅತ್ಯುತ್ತಮ ಕಾರ್ಯ ಸಾಧನೆ ಪರಿಗಣಿಸಿದ್ದು, 2022-23ನೇ ಸಾಲಿನಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಮಟ್ಟದ ಪುರಸ್ಕಾರಗಳನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯ ಸಂಜೀವಿನಿ-ಎನ್‌ಆರ್‌ಎಲ್‌ಎಂ ವಿಭಾಗ ಪಡೆದಿರುವುದಕ್ಕೆ ಹೆಮ್ಮೆ ಅನ್ನಿಸುತ್ತದೆ. ಸರ್ಕಾರದ ಸವಲತ್ತುಗಳ ಸದುಪಯೋಗ ಪಡೆದು ಜಿಲ್ಲೆಯಲ್ಲಿನ ಮಹಿಳಾ ಸ್ವಸಹಾಯ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, ಉಳಿದವರಿಗೂ ಮಾದರಿಯಾಗಿದೆ. ಮುಂಬರುವ ದಿನಗಳಲ್ಲಿ ಮಹಿಳಾ ಸ್ವಸಹಾಯ ಗುಂಪು ಹಾಗೂ ಮಹಿಳಾ ಸಬಲೀಕರಣಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹ ಸಿಗಲಿದ್ದು, ಪ್ರತಿಯೊಬ್ಬರೂ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ” ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಹೇಳಿದ್ದಾರೆ.

Exit mobile version