ಕಾರವಾರ: ತಾಯಿ ಭಾರತಾಂಬೆಯ ಸತತ 21 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಭಟ್ಕಳಕ್ಕೆ ಆಗಮಿಸಿದ ಮಾಜಿ ಯೋಧ ಗಣಪತಿ ಮಂಜುನಾಥ ಮೊಗೇರ ಅವರಿಗೆ ಭಟ್ಕಳ ಶಂಶುದ್ದೀನ ಸರ್ಕಲ್‌ನಲ್ಲಿ ನಾಗರಿಕರು ಅದ್ಧೂರಿ ಸ್ವಾಗತ ನೀಡಿದರು.
ಭಟ್ಕಳ ಸರ್ಕಲಿನಿಂದ ಜನತಾ ಕಾಲನಿಗೆ ಬೈಕ್ ರ‍್ಯಾಲಿ ನಡೆಸಲಾಯಿತು. ಬಳಿಕ ಜನತಾ ಕಾಲನಿಯಿಂದ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲಿ ಭವ್ಯ ಮೆರವಣಿಗೆಯಲ್ಲಿ ಸ್ವಾಗತ ನೀಡಲಾಯಿತು.
ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಕಾವಿನಮನೆ ಮನೆತನದ ಮಂಜುನಾಥ ದಂಪತಿಗಳ ಪುತ್ರ ಗಣಪತಿ ಮೊಗೇರ ಅವರಿಗೆ ಸಾರ್ವಜನಿಕರಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಸ್ಥಳೀಯ ಹೊನ್ನೆಮಡಿಯ ಶಾಲೆಯಲ್ಲಿ ಕಿರಿಯ ಪ್ರಾಥಮಿಕ, ಬೆಳಕೆಯಲ್ಲಿ ಹಿರಿಯ ಪ್ರಾಥಮಿಕ, ಮುಗಳಿಹೊಂಡದ ನಾಗಪ್ಪ ಜ್ಞಾನ ಪ್ರಸಾರಕ ಹೈಸ್ಕೂಲ್ ನಲ್ಲಿ ಮಾಧ್ಯಮಿಕ ಶಿಕ್ಷಣ ಮತ್ತು ಅಂಜುಮನ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ, ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಲ್ಲಿ ಡಿಗ್ರಿ ಪದವಿಯನ್ನು ಪಡೆದಿದ್ದಾರೆ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಬಿಡುಗಡೆ ಆಗುತ್ತಿರುವ 86 ಕೃತಿಗಳಲ್ಲಿ ಏನಿದೆ?
28ನೇ ಜನವರಿ, 2002ನೇ ಇಸವಿಯಲ್ಲಿ ಬೆಂಗಳೂರಿನ ಮದ್ರಾಸ್ ಇಂಜಿನಿಯರ್ ಗ್ರೂಪ್ (ಎಂಇಜಿ) ದಳಕ್ಕೆ ಸೇರ್ಪಡೆಗೊಂಡು ಬೆಂಗಳೂರಿನ ತರಬೇತಿ ಕೇಂದ್ರದಲ್ಲಿ ಎರಡು ವರ್ಷಗಳ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದರು. ಆ ಬಳಿಕ 7 ಇಎನ್‌ಜಿಆರ್ ರೆಜಿಮೆಂಟ್‌ಗೆ ಸೇರ್ಪಡೆಯಾದರು. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ್‌ನಲ್ಲಿ ಸತತ ಮೂರು ವರ್ಷಗಳ ಮೊದಲ ಸೇವೆ ಸಲ್ಲಿಸಿದರು. ನಂತರ, ರಾಜಸ್ಥಾನದ ನಸೀರಾಬಾದ್‌ನಲ್ಲಿ ಒಂದು ವರ್ಷದ ಸೇವೆ ಸಲ್ಲಿಸಿ, ರಾಷ್ಟ್ರೀಯ ರೈಫಲ್ಸ್ ವಿಭಾಗದಲ್ಲೂ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದುಕೊಂಡರು. ಮತ್ತೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ವಿಭಾಗದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಸತತ ಮೂರು ವರ್ಷಗಳ ಕಾಲ ಸೇವೆ ಮಾಡಿದರು.
ರಾಜಸ್ಥಾನದ ಜೋಧಪುರದಲ್ಲಿ ಒಂದು ವರ್ಷದ ಸೇವೆ ಸಲ್ಲಿಸಿ, ರಾಷ್ಟ್ರೀಯ ಭದ್ರತಾ ದಳದಲ್ಲಿ ಮೂರು ವರ್ಷಗಳ ಕಾಲ ಕಠಿಣ ತರಬೇತಿ ಪಡೆದುಕೊಂಡರು. ಅಲ್ಲಿಂದ ಕಾಶ್ಮೀರದ ಬಾರಾಮುಲ್ಲಾದಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ, ರಾಜಾಸ್ಥಾನದ ಶ್ರೀಗಂಗಾ ನಗರದಲ್ಲಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ನಿವೃತ್ತಿಗೆ ಅವಕಾಶವಿದ್ದರೂ, ದೇಶ ಸೇವೆಯನ್ನು ಮುಂದುವರಿಸುವ ಛಲದಿಂದ ಅಸ್ಸಾಂನ “ಗೌಹಾಟಿ” ಯಲ್ಲಿ ಒಂದು ವರ್ಷಗಳ ಸೇವೆಯೊಂದಿಗೆ ಸತತ 21 ವರ್ಷಗಳ ಸೇವೆಯನ್ನು ಪೂರೈಸಿ 31-12-2022 ರಂದು ಬೆಂಗಳೂರಿನ ಎಂಇಜಿ ಕಚೇರಿಯಲ್ಲಿ ಸೇನಾ ಗೌರವದೊಂದಿಗೆ ತಮ್ಮ ನಿವೃತ್ತಿ ಜೀವನಕ್ಕೆ ಕಾಲಿಟ್ಟರು. ಇವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
ಇದನ್ನೂ ಓದಿ | Fire tragedy | ವಿಜಯಪುರದ ಕಿರಿಯಡ್ ಹೋಟೆಲ್ ಕಟ್ಟಡದಲ್ಲಿ ಭಾರಿ ಅಗ್ನಿ ಅನಾಹುತ, ಕೊನೆ ಮಹಡಿಯಲ್ಲಿ ಬೆಂಕಿ