ಕಾರವಾರ: (Karwar News) ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರಿಗೂ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ನೀಡಿ ಗುಣಮಟ್ಟದ ವೈದ್ಯಕೀಯ ಸೇವೆಗಳು ಅವರಿಗೆ ದೊರೆಯುವಂತಾಗಬೇಕು ಎಂದು ಲೋಕಸಭೆ ಸದಸ್ಯ ಅನಂತಕುಮಾರ ಹೆಗಡೆ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದಿಶಾ ಅನುಪಾಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ಪೂರೈಕೆಯು ತುಂಬಾ ನಿಧಾನಗತಿಯಲ್ಲಿ ಸಾಗುತ್ತಿದ್ದು ತ್ವರಿತಗತಿಯಲ್ಲಿ ಕಾರ್ಡ್ ಗಳನ್ನು ವಿತರಿಸುವ ವ್ಯವಸ್ಥೆ ಆಗಬೇಕು ಎಂದರು.
ಜಿಲ್ಲೆಯಲ್ಲಿ 230 ಗ್ರಾಮ ಒನ್ ಕೇಂದ್ರಗಳಿದ್ದು, 229 ಬಾಪೂಜಿ ಕೇಂದ್ರಗಳು ಹಾಗೂ ನಾಗರಿಕ ಸೇವಾ ಕೇಂದ್ರಗಳಿದ್ದು ಈ ಮೂರು ಕೇಂದ್ರಗಳಲ್ಲಿಯೂ ಆರೋಗ್ಯ ಕಾರ್ಡ್ ವಿತರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ 5 ಲಕ್ಷ ರೂ.ವರೆಗೆ ವೈದ್ಯಕೀಯ ಸೌಲಭ್ಯ ಹಾಗೂ ಎಪಿಎಲ್ ಕಾರ್ಡ್ ಹೊಂದಿದವರಿಗೆ 1.5 ಲಕ್ಷ ರೂ.ವರೆಗೆ ವೈದ್ಯಕೀಯ ಸೌಲಭ್ಯ ನೀಡಲಾಗುವುದು. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದರು. ಹಾಗೆಯೇ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ಒದಗಿಸಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ | INDvsSL | ಯಾರಾಗುತ್ತಾರೆ ರಾಜ್ಕೋಟ್ನಲ್ಲಿ ರಾಜ? ಸರಣಿ ಗೆಲ್ಲಬೇಕಾದರೆ ಭಾರತ ತಂಡ ಏನು ಮಾಡಬೇಕು?
ಈ ಹಿಂದಿನ ಸಭೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಜೇನು ಉತ್ಪನ್ನಗಳನ್ನು ಬೈ ಪ್ರಾಡಕ್ಟ್ ಮಾಡಲು ತರಬೇತಿ ಅವಶ್ಯಕತೆ ಇರುವುದರ ಬಗ್ಗೆ ಪ್ರಸ್ತಾಪಿಸಿತ್ತು. ಈ ಬಗ್ಗೆ ಕ್ರಮ ವಹಿಸಿರುವುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ನ್ಯಾಷನಲ್ ಹನಿ ಮಿಷನ್ ಮತ್ತು ಕೆವಿಐಸಿ (Khadi and Village Industries Commission) ಯಿಂದ ಪಡೆದ ಪ್ರೊಡ್ಯೂಸರ್ ಕಂಪನಿಗಳ ಬಗ್ಗೆ ಮಾಹಿತಿ ಪಡೆದರು. ಪಶ್ಚಿಮಘಟ್ಟ ಪ್ರದೇಶಗಳಾದ ರತ್ನಗಿರಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ಪಾದಿಸುವ ಜೇನುತುಪ್ಪ ವಿಶೇಷವಾಗಿದ್ದು ಈ ಬಗ್ಗೆ ಕೆವಿಐಸಿ ರವರಿಗೆ ಗಮನಹರಿಸುವಂತೆ ಸೂಚಿಸಿದ್ದು ಇದಕ್ಕಾಗಿ ಅವರು ತಜ್ಞರ ತಂಡ ಕಳುಹಿಸುವುದಾಗಿ ಸೂಚಿಸಿದ್ದಾರೆ.
ಈ ಪ್ರದೇಶದಲ್ಲಿ ದೊರೆಯುವ ಜೇನುತುಪ್ಪ ಬೇರೆ ಯಾವ ಸ್ಥಳದಲ್ಲೂ ಸಿಗುವುದಿಲ್ಲ. ಈ ಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗೆ ಸೂಚಿಸಿದರು. ಹಾಗೆಯೇ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ರಫ್ತು ಉತ್ಪನ್ನ ಸಮಿತಿಯಿದ್ದು ತೋಟಗಾರಿಕೆ ಇಲಾಖೆಯಿಂದ ಯಾವೆಲ್ಲ ಉತ್ಪನ್ನಗಳನ್ನು ರಫ್ತು ಮಾಡಲು ಸಾಧ್ಯವಿದೆ ಎಂಬುವುದನ್ನು ಗಮನಹರಿಸುವಂತೆ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ ಈವರೆಗೆ ಯಾವುದೇ ವಸ್ತುಗಳು ರಫ್ತು ಮಾಡಿಲ್ಲ. ಹೀಗಾಗಿ ಜೇನುತುಪ್ಪವು ಔಷಧಗಳ ಉತ್ಪಾದನೆಯಲ್ಲಿ ಬಳಕೆ ಮಾಡಿಕೊಳ್ಳುವುದರಿಂದ ಮತ್ತು ಈ ಪ್ರದೇಶದಲ್ಲಿ ದೊರೆಯುವ ಜೇನುತುಪ್ಪ ವಿಶೇಷವಾಗಿರುವುದರಿಂದ ಈ ವಸ್ತುವನ್ನು ರಫ್ತು ಮಾಡಲು ಜಿಲ್ಲಾಧಿಕಾರಿಗಳೊಂದಿಗೆ ಸಭೆ ಮಾಡಿ ಈ ಬಗ್ಗೆ ಚರ್ಚಿಸುವಂತೆ ಅಧಿಕಾರಿಗಳಿಗೆ ಹೇಳಿದರು.
ಇದನ್ನೂ ಓದಿ | Illegal cash found | ವಿಧಾನ ಸೌಧದಲ್ಲಿ ಹಣ ಪತ್ತೆ ಪ್ರಕರಣ: ಎಂಜಿನಿಯರ್‌ಗೆ ರಿಲೀಫ್, ಹಣ ನನ್ನದಲ್ಲ ಎಂದ ಸಿ.ಸಿ. ಪಾಟೀಲ್
ಹಾಗೆಯೇ ಕೃಷಿ ಇಲಾಖೆಯಿಂದ ಜಿಲ್ಲೆಯಲ್ಲಿ 35 ಎಕರೆಗಳಲ್ಲಿ ಟೆಫ್(ರಾಗಿಯನ್ನು ಹೋಲುವ) ಬೆಳೆಯನ್ನು ಬೆಳೆಯುತ್ತಿದ್ದು, ಇದನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು. ಇದು ಅತ್ಯಂತ ಪೌಷ್ಟಿಕ ಆಹಾರವಾಗಿರುತ್ತದೆ. ಇದರ ಜೊತೆಗೆ ಬಿಳಿ ಚಿಯಾ ಬೆಳೆಯನ್ನು ಬೆಳೆಯಲು ಪ್ರೋತ್ಸಾಹಿಸಿದರು. ಈ ಬೆಳೆಗೆ ಅಗತ್ಯವಿರುವ ಬೀಜ, ಯಂತ್ರೋಪಕರಣ, ತಂತ್ರಜ್ಞಾನ ಮುಂತಾದವುಗಳ ವ್ಯವಸ್ಥೆ ಮಾಡಲಾಗುವುದು ಎಂದರು.
ಬಳಿಕ ಸ್ವಚ್ಛ ಭಾರತ ಮಿಷನ್ ಬಗ್ಗೆ ಮಾತನಾಡಿ, ವಿಘಟನೀಯ ಮತ್ತು ವಿಘಟನೀಯವಲ್ಲದ ಕಸವನ್ನು ಮೊಬೈಲ್ ಕ್ರಷಿಂಗ್ ಯೂನಿಟ್ ಮೂಲಕ ವಿಲೇವಾರಿ ಮಾಡಲು ಸೂಚಿಸಿದರು. ಇದರಿಂದ ಇದಕ್ಕೆ ತಗಲುವ ವೆಚ್ಚ ಕೂಡ ಕಡಿಮೆಯಾಗುತ್ತದೆ ಮತ್ತು ನಿರ್ವಹಣೆಯು ಕಡಿಮೆಯಾಗುತ್ತದೆ. ಇದಕ್ಕೆ ಸ್ಥಳದ ಅಗತ್ಯ ಕೂಡ ಇರುವುದಿಲ್ಲ ಎಂದರು.
ಇದನ್ನೂ ಓದಿ | Urination Case | ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದವನನ್ನು ವಜಾಗೊಳಿಸಿದ ಅಮೆರಿಕ ಕಂಪನಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದಾಂಡೇಲಿ, ಹಳಿಯಾಳ, ಕುಮಟಾ ಮತ್ತು ಹೊನ್ನಾವರ ಈ ಭಾಗಗಳಲ್ಲಿ ಅಷ್ಟಾಗಿ ಮಾನವ ದಿನಗಳ ಪೂರೈಕೆ ಆಗಿರುವುದಿಲ್ಲ. ಆದಷ್ಟು ಶೀಘ್ರವಾಗಿ ಈ ಪ್ರದೇಶಗಳಲ್ಲಿಯೂ ಜನರು ಹೆಚ್ಚು ಹೆಚ್ಚು ಉದ್ಯೋಗಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿ ಗುರಿ ಸಾಧಿಸುವುದು ಅಗತ್ಯ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇಲಾಖಾವಾರು ಸಾಧಿಸಿರುವ ಪ್ರಗತಿಯು ತುಂಬಾ ನಿಧಾನವಾಗಿದೆ. ಈ ಬಗ್ಗೆ ಕ್ರಮವಹಿಸಿ ಆದಷ್ಟು ಶೀಘ್ರವಾಗಿ ಪ್ರಗತಿ ಸಾಧಿಸಿ ಜನರ ಅವಶ್ಯಕತೆಯನ್ನು ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ, ಭಟ್ಕಳ ಶಾಸಕ ಸುನೀಲ್ ನಾಯ್ಕ, ಕುಮಟಾ ಶಾಸಕ ದಿನಕರ ಕೆ ಶೆಟ್ಟಿ, ವಿಧಾನಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್, ಶಾಂತಾರಾಮ ಸಿದ್ದಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಖಂಡೂ, ಪಂಚಾಯತ್ ರಾಜ್ ವಿಕೇಂದ್ರೀಕರಣ ಯೋಜನಾ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ ಹಾಗೂ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಆಕ್ರೋಶದ ಕವಿತೆ ಮತ್ತು ಕವಿಯ ಜೋಳಿಗೆಯ ಸವಿಜೇನು!