ಕಾರವಾರ: ಕುಮಟಾ ತಾಲೂಕಿನ (Karwar News) ಮೂರೂರಿನ ಮುಸ್ಗುಪ್ಪೆ ಗ್ರಾಮದಲ್ಲಿ ಗುಹೆಯೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಕುತೂಹಲ ಮತ್ತು ಅಚ್ಚರಿಗೆ ಕಾರಣವಾಗಿದೆ.
ತಾಲೂಕಿನ ಮೂರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಸ್ಗುಪ್ಪೆಯಲ್ಲಿ ರಸ್ತೆ ಬದಿಯಲ್ಲಿ ಮಣ್ಣು ಅಗೆಯುತ್ತಿರುವಾಗ ಈ ಗುಹೆ ಪತ್ತೆಯಾಗಿದೆ. ಮೊದ ಮೊದಲು ಭೂಮಿಯ ಪೊಳ್ಳು ಪದರವಿರುವ ಜಾಗವಿರಬಹುದೆಂದು ಅಗೆಯುತ್ತ ಹೋದಂತೆ ಗುಹೆಯ ಆಳ ಜಾಸ್ತಿಯಾಗುತ್ತ ಹೋಗಿದೆ. ಸುಮಾರು 8 ಅಡಿ ಆಳದಲ್ಲಿ ಗುಹೆ ಪತ್ತೆಯಾಗಿದೆ. ಆದರೆ, ಇನ್ನೂ ಯಾವುದೇ ಐತಿಹಾಸಿಕ ಕುರುಹುಗಳು ಪತ್ತೆಯಾಗಿಲ್ಲ.
ಸ್ಥಳೀಯರ ಪ್ರಕಾರ ಈ ಗುಹೆ ಮಿರ್ಜಾನ್ ಕೋಟೆಗೆ ಸಂಪರ್ಕ ಹೊಂದಿರಬಹುದೆಂದು ಹೇಳಲಾಗುತ್ತಿದೆ. ಮಿರ್ಜಾನ್ ಕೋಟೆಯನ್ನು ನಿರ್ಮಿಸಿದ್ದ ಆದಿಲ್ ಶಾಹಿಗಳ ಪಾಳೆಗಾರರು ಕೋಟೆ ಮೇಲೆ ಶತ್ರುಗಳ ದಾಳಿಯಾದರೆ ಪಾಳೆಗಾರರು ಸುಲಭವಾಗಿ ತಪ್ಪಿಸಿಕೊಳ್ಳಲು ಕೆಲ ಗುಪ್ತ ಸುರಂಗಗಳನ್ನು ಕೊರೆಸಿದ್ದರು ಎಂದು ಹೇಳಲಾಗುತ್ತಿದೆ. ಈ ಗುಪ್ತ ದ್ವಾರಗಳು ಕೋಟೆಯ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿವೆ ಎಂದು ಹೇಳಲಾಗುತ್ತದೆ.
ಭೂಮಿಯಲ್ಲಿ ಉಂಟಾಗುವ ಪೊಳ್ಳು ಪದರ
ಕೆಲ ವರ್ಷಗಳ ಹಿಂದೆ ಚುತುಷ್ಪಥ ಕಾಮಗಾರಿಗಾಗಿ ಮಿರ್ಜಾನ್ ದುಂಡ್ಕುಳಿಯ ಮಧ್ಯ ಭಾಗದಲ್ಲಿ ಗುಡ್ಡವನ್ನು ಕೊರೆಯುವಾಗ ಅಲ್ಲಿಯೂ ಬೃಹತ್ ಸುರಂಗವೊಂದು ಪತ್ತೆಯಾಗಿತ್ತು. ಆಗಲೂ ಅಲ್ಲಿನ ಸ್ಥಳೀಯರು ಇದು ಮಿರ್ಜಾನ್ ಕೋಟೆಯನ್ನು ಸಂಪರ್ಕಿಸುವ ಗುಹೆ ಎಂದೇ ವಿಶ್ಲೇಷಿಸಿದ್ದರು. ಬಳಿಕ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದ ಬಳಿಕ ಗುಹೆ ಅಲ್ಲ. ಭೂಮಿಯಲ್ಲಿ ಉಂಟಾಗುವ ಪೊಳ್ಳು ಪದರ ಎಂದು ಸ್ಪಷ್ಟಪಡಿಸಿದ್ದರು.
ಅಂತೆಯೇ ಮುಸ್ಗುಪ್ಪೆಯಲ್ಲಿ ಪತ್ತೆಯಾದ ಗುಹೆಯ ಬಗ್ಗೆಯೂ ಸಂಬಂಧಪಟ್ಟ ತಜ್ಞರ ತಂಡ ಪರಿಶೀಲಿಸಿದ ಬಳಿಕವೇ ಸತ್ಯಾಸತ್ಯತೆ ತಿಳಿದುಬರಬೇಕಿದೆ. ಇದೀಗ ಗುಹೆ ಪತ್ತೆಯಾದ ಸ್ಥಳ ಜನಾಕರ್ಷಣೆಯ ತಾಣವಾಗಿದ್ದು, ಜನರು ತಂಡೋಪತಂಡವಾಗಿ ಆಗಮಿಸಿ ಗುಹೆ ವೀಕ್ಷಣೆಗೆ ಮುಗಿಬೀಳುತ್ತಿದ್ದಾರೆ.
ಇದನ್ನೂ ಓದಿ | Fasal Bima Yojana | ವಿಮಾ ಕಂಪನಿಗಳ ವಿರುದ್ಧ ಇಂದು ಶ್ರೀನಿವಾಸಪುರ ಬಂದ್; ಶಾಲಾ-ಕಾಲೇಜುಗಳಿಗೆ ರಜೆ