Site icon Vistara News

Karwar News: ನರೇಗಾದಡಿ ಹೆಚ್ಚಿನ ಕೆಲಸ ನೀಡಿ: ಸಿಇಒ ಈಶ್ವರ ಕಾಂದೂ ಸೂಚನೆ

CEO Ishwar Kandu karwar narega

#image_title

ಕಾರವಾರ: ಅಂಕೋಲಾ ತಾಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾದಡಿ (MGNREGA) ಕೂಲಿಕಾರರನ್ನು ನಿಯೋಜಿಸಿ ಕೂಲಿ ಕೆಲಸ ಒದಗಿಸುವ ಪ್ರಗತಿ ಶೂನ್ಯವಿದೆ. ಎಲ್ಲ ಗ್ರಾಮ ಪಂಚಾಯಿತಿ (Grama Panchayat) ಅಭಿವೃದ್ಧಿ ಅಧಿಕಾರಿಗಳು ನರೇಗಾದಡಿ ಲಭ್ಯವಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕೂಲಿಕಾರರನ್ನು ನಿಯೋಜಿಸಿ ಕೂಲಿ ಕೆಲಸ ನೀಡಬೇಕು. ಜತೆಗೆ ಯಾವ ಗ್ರಾಮ ಪಂಚಾಯಿತಿಯಲ್ಲೂ ಕೂಲಿಕಾರರ ನಿಯೋಜನಾ ಪ್ರಗತಿ ಶೂನ್ಯ ಪ್ರಮಾಣದಲ್ಲಿ ದಾಖಲಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿಯ (Zilla Panchayat) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಸೂಚಿಸಿದರು.

ನರೇಗಾ ಅಡಿ ಕೆಲಸದಲ್ಲಿ ನಿರತರಾಗಿರುವ ಕೂಲಿಕಾರ್ಮಿಕರು.

ಜಿಲ್ಲೆಯ ಅಂಕೋಲಾ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಶುಕ್ರವಾರ (ಫೆ.೧೭) ಜರುಗಿದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಮುಂಬರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ಜರುಗುವ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಸ್ವೀಪ್ ಚಟುವಟಿಕೆಗಳನ್ನು ಆಯೋಜಿಸಿ ಗ್ರಾಮೀಣ ಪ್ರದೇಶದ ಜನರಿಗೆ ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಹೆಸರು ನೋಂದಣಿ, ಮತದಾನದ ಮಹತ್ವದ ಕುರಿತಾದ ಜಾಗೃತಿ ಮೂಡಿಸಬೇಕು” ಎಂದರು.

ಇದನ್ನೂ ಓದಿ: Karnataka Election 2023: ಫೆ.23ಕ್ಕೆ ಸಂಡೂರಿಗೆ ಅಮಿತ್ ಷಾ ನೇತೃತ್ವದಲ್ಲಿ ಬೃಹತ್‌ ಸಮಾವೇಶ: ಶ್ರೀರಾಮುಲು

ನರೇಗಾ ಅಡಿ ಮಾಡಬೇಕಾದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಪರಿಶೀಲನೆ

ಶೀಘ್ರ ಅಮೃತ ಸರೋವರ ಕಾಮಗಾರಿಗಳ ಪೂರ್ಣಗೊಳಿಸಿ

“ಅಮೃತ ಸರೋವರ ಕೆರೆ ಕಾಮಗಾರಿಗಳನ್ನು ಪ್ರಧಾನ ಮಂತ್ರಿಗಳು ವಿಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲನೆ ನಡೆಸಲಿದ್ದು, ತಾಲೂಕಿನಲ್ಲಿ ಅಭಿವೃಪಡಿಸಲು ಕೈಗೆತ್ತಿಕೊಂಡಿರುವ ಹಾಗೂ ಪ್ರಗತಿಯಲ್ಲಿರುವ ಅಮೃತ ಸರೋವರ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಪೂರ್ಣಗೊಂಡ ಅಮೃತ ಸರೋವರದ ಕಾಮಗಾರಿಯ ಪೂರ್ವ ಪ್ರಗತಿ ಹಾಗೂ ಪೂರ್ಣಗೊಂಡ ನಂತರದ ಉತ್ತಮ ಫೋಟೊಗಳನ್ನು ಮತ್ತು ಮಾಹಿತಿಯನ್ನು ಸಂಗ್ರಹಿಸಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಯಶೋಗಾಥೆ ತಯಾರಿಸಿ ಅಮೃತ ಸರೋವರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು” ಎಂದು ಸಲಹೆ ನೀಡಿದರು.

ಸ್ಥಳಪರಿಶೀಲನೆಯಲ್ಲಿ ನಿರತರಾಗಿರುವ ಜಿಪಂ ಸಿಇಒ ಹಾಗೂ ಮತ್ತಿತರ ಅಧಿಕಾರಿಗಳು

ಗ್ರಾಮೀಣ ಪ್ರದೇಶದಲ್ಲಿ ಕಸ ಸಂಗ್ರಹಣೆ, ವಿಂಗಡಣೆ ಯಶಸ್ವಿಗೊಳಿಸಿ

“ನರೇಗಾದಡಿ ಸಾರ್ವಜನಿಕರಿಗೆ ಅನುಕೂಲ ಆಗುವಂತಹ ಸಮುದಾಯ ಕಾಮಗಾರಿಗಳಾದ ಅಂಗನವಾಡಿ, ಪೌಷ್ಟಿಕ ಕೈತೋಟ, ಸಮಗ್ರ ಶಾಲಾ ಅಭಿವೃದ್ಧಿ, ಕೆರೆ ಕಾಮಗಾರಿಗಳಿಗೆ ಆದ್ಯತೆ ನೀಡಿ ಜನರಿಗೆ ಕೂಲಿ ಕೆಲಸ ಒದಗಿಸಬೇಕು. ಜತೆಗೆ ಜಲ ಸಂಜೀವಿನಿ ಕ್ರಿಯಾ ಯೋಜನೆ ತಯಾರಿಸಿ ಜಿಐಎಸ್ ತಂತ್ರಜ್ಞಾನದ ಮೂಲಕ ನೀರು, ಮಣ್ಣು ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾದ ಕಾಮಗಾರಿಗಳನ್ನು ಕೈಗೊಳ್ಳಬೇಕು. ಎಸ್‌ಬಿಎಂ ಯೋಜನೆಯಡಿ ಕಸ ಸಂಗ್ರಹಣೆ ವಾಹನಕ್ಕೆ ಸ್ವಸಹಾಯ ಸಂಘಗಳ ಮಹಿಳಾ ಚಾಲಕರ ನೇಮಕಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ನೇಮಕಗೊಂಡ ಮಹಿಳಾ ವಾಹನ ಚಾಲಕರಿಗೆ ಸೂಕ್ತ ತರಬೇತಿ ಕೊಡಿಸಿ ಗ್ರಾಮೀಣ ಪ್ರದೇಶದಲ್ಲಿನ ಕಸ ಸಂಗ್ರಹಣೆ ಹಾಗೂ ವಿಂಗಡಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿ ಸ್ವಚ್ಛ ಸಮೃದ್ಧ ವಾತಾವರಣ ನಿರ್ಮಾಣಕ್ಕೆ ಮುಂದಾಗಬೇಕು” ಎಂದು ತಿಳಿಸಿದರು.

ಇದನ್ನೂ ಓದಿ: IND VS AUS: ದ್ವಿತೀಯ ಟೆಸ್ಟ್​ನಲ್ಲಿ ಹಿಡಿತ ಸಾಧಿಸುವ ಸೂಚನೆ ನೀಡಿದ ಆಸ್ಟ್ರೇಲಿಯಾ

ಕಚೇರಿಯ ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿ ಪರಿಶೀಲನೆ

ಇದಕ್ಕೂ ಮೊದಲು ತಾಪಂ ಕಚೇರಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ, ಕಚೇರಿಯಲ್ಲಿ ಕರ್ತವ್ಯನಿರತ ಅಧಿಕಾರಿಗಳು, ಸಿಬ್ಬಂದಿಯ ಕಾರ್ಯ ವೈಖರಿ, ಪ್ರಗತಿಯಲ್ಲಿರುವ ತಾಪಂ ಹೊಸ ಕಟ್ಟಡ ಕಾಮಗಾರಿ ವೀಕ್ಷಿಸಿ ಸ್ಥಳದಲ್ಲಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ಹಟ್ಟಿಕೇರಿ ಗ್ರಾಪಂ ಕಚೇರಿಗೆ ತೆರಳಿ ಕರ್ತವ್ಯನಿರತ ಸಿಬ್ಬಂದಿ ಸಂಖ್ಯೆ, ಕಾರ್ಯ ವೈಖರಿ ಪರಿಶೀಲಿಸಿದರು. ಜತೆಗೆ ಅಂಗನವಾಡಿಗೆ ಭೇಟಿ ನೀಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹಾಜರಾತಿ, ಮಕ್ಕಳ ಸಂಖ್ಯೆ, ಸರ್ಕಾರದಿಂದ ಮಕ್ಕಳಿಗೆ ವಿತರಿಸುವ ಆಹಾರ ಪದಾರ್ಥಗಳ ಗುಣಮಟ್ಟ, ವಿತರಣಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಹಾಗೇ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ತೆರಳಿ ಕಸ ಸಂಗ್ರಹಣೆ, ವಿಂಗಡಣೆ ಕುರಿತು ಚರ್ಚಿಸಿದರು.

ಅಧಿಕಾರಿಗಳಿಂದ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯುತ್ತಿರುವ ಜಿಪಂ ಸಿಇಒ

ಕೂಲಿಕಾರರೊಂದಿಗೆ ಸಿಇಒ ಸಮಾಲೋಚನೆ

ನಂತರ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ಅಭಿವೃದ್ಧಿಪಡಿಸುತ್ತಿರುವ ಹೊಸ ಕೆರೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಳದಲ್ಲಿದ್ದ 25ಕ್ಕೂ ಅಧಿಕ ಕೂಲಿಕಾರರೊಂದಿಗೆ ಸಮಾಲೋಚನೆ ನಡೆಸಿದರು. ಜತೆಗೆ ಕಾಮಗಾರಿ ಪ್ರಾರಂಭದ ದಿನಾಂಕ, ಕೂಲಿಕಾರರ ಕೆಲಸದ ಅವಧಿ, ಕೂಲಿಕಾರರಿಗೆ ಸಮರ್ಪಕ ಹಾಜರಾತಿ ನೀಡುವಿಕೆ ಹಾಗೂ ಕೂಲಿಕಾರರಿಗೆ ಕಾಮಗಾರಿ ಮಾಡುವ ಸ್ಥಳದಲ್ಲಿ ನೀರು, ನೆರಳಿನ ವ್ಯವಸ್ಥೆಯ ಕುರಿತು ಗ್ರಾಪಂ ಪಿಡಿಒ ಅವರಿಂದ ಮಾಹಿತಿ ಪಡೆದು ಕಾಮಗಾರಿಯ ದಾಖಲೆಗಳನ್ನು ಪರಿಶೀಲಿಸಿದರು.

ಇದನ್ನೂ ಓದಿ: Maha Shivaratri 2023 : ಮಹಾ ಶಿವರಾತ್ರಿಯ ಈ ದಿನ ಈ ನಾಲ್ಕು ರಾಶಿಯವರಿಗೆ ಶನಿ ದೇವರ ಕೃಪೆ ಇದೆ!

ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ

ಹಾರವಾಡ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ನಿರ್ಮಿತ ಅಂಗನವಾಡಿ ಕಟ್ಟಡ, ಬೇಲಿಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ತಾಪಂ 15ನೇ ಹಣಕಾಸು ಅನುದಾನದಲ್ಲಿ ಅಭಿವೃದ್ಧಿಪಡಿಸಲಾದ ಹೈಟೆಕ್ ಅಂಗನವಾಡಿ, ಬೊಬ್ರುವಾಡ ಗ್ರಾಪಂ ವ್ಯಾಪ್ತಿಯ ನದಿಭಾಗ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಪ್ರಗತಿಯಲ್ಲಿರುವ ಮನೆ ಮನೆಗೆ ನಳ ಸಂಪರ್ಕ ಕಾಮಗಾರಿ, ನದಿಭಾಗ ಬೀಚ್ ಬಳಿ ನರೇಗಾದಡಿ ಪ್ರಗತಿಯಲ್ಲಿರುವ ಉದ್ಯಾನವನ ನಿರ್ಮಾಣ ಕಾಮಗಾರಿ, ವಂದಿಗೆ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ಅಭಿವೃದ್ಧಿಪಡಿಸಲಾದ ಜಲ ಚೇತನಧಾಮ, ಅಮೃತ ಸರೋವರ ಕೆರೆ ಸ್ಥಳಕ್ಕೆ ಸಿಇಒ ಈಶ್ವರ ಕಾಂದೂ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಬಳಲೆ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ಮಿತ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಸ್ಟ್ಯಾಂಡ್ ಫಿಲ್ಟರ್ ಘಟಕಕ್ಕೆ ತೆರಳಿ ನೀರಿನ ಶುದ್ಧೀಕರಣ ಪ್ರಕ್ರಿಯೆ, ಸಂಗ್ರಹಣೆ, ಸರಬರಾಜು ಪ್ರಮಾಣ ಕುರಿತು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಇದನ್ನೂ ಓದಿ: Puneeth Rajkumar: ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ವರ್ಕೌಟ್‌ ವಿಡಿಯೊ ವೈರಲ್‌: ʻಫೀಲ್ ದಿ ಪವರ್ʼ ಅಂದ್ರು ಫ್ಯಾನ್ಸ್‌!

ಈ ಸಂದರ್ಭದಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿಗಳಾದ ಜುಬಿನ್ ಮಹಾಪಾತ್ರ, ಅಂಕೋಲಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ.ವೈ.ಸಾವಂತ, ಕುಮಟಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಾಗರತ್ನ, ನರೇಗಾ ಸಹಾಯಕ ನಿರ್ದೇಶಕರಾದ ಸುನಿಲ್ ಎಂ., ಆರ್‌ಡಬ್ಲ್ಯುಎಸ್‌ನ ಎಇಇ, ಎಇ, ಜೆಇ, ಪಿಆರ್‌ಇಡಿ ಎಇಇ, ನರೇಗಾ ತಾಲೂಕು ಎಐಎಸ್, ಐಇಸಿ, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಸದಸ್ಯರು, ತಾಪಂ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version