Site icon Vistara News

Karwar News | ಪಹರೆ ವೇದಿಕೆಯಿಂದ ಕಾರವಾರದಿಂದ ಗೋವಾ ಗಡಿಯವರೆಗೆ ಸ್ವಚ್ಛತಾ ಜಾಗೃತಿ ಪಾದಯಾತ್ರೆ

pahare vedike Cleanliness Awareness

ಕಾರವಾರ: ಪಹರೆ ವೇದಿಕೆಯಿಂದ ಕಾರವಾರದಿಂದ ಗೋವಾ ಗಡಿಯವರೆಗೆ ಸ್ವಚ್ಛತಾ ಜಾಗೃತಿ ಪಾದಯಾತ್ರೆ ನಡೆಯಿತು. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಭಾಗಿಯಾಗಿದ್ದರು.

ಕಳೆದ 8 ವರ್ಷಗಳಿಂದ ಕೇವಲ ಕಾರವಾರವಷ್ಟೇ ಅಲ್ಲದೇ, ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವ ಪಹರೆ ವೇದಿಕೆಯು ಜನರಲ್ಲಿ ಸ್ವಚ್ಛತೆಯ ಪ್ರಜ್ಞೆ ಮೂಡಿಸುತ್ತಿದೆ. ಇದೇ ರೀತಿ ಸಾರ್ವಜನಿಕರಿಗೂ ಸ್ವಚ್ಛತೆಯ ಕುರಿತು ಜಾಗೃತಿ ಮೂಡಲಿ ಎನ್ನುವ ಉದ್ದೇಶದಿಂದ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಕೂಡ ಪಾಲ್ಗೊಂಡಿದ್ದರು.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ನಗರದ ಸುಭಾಷ್ಚಂದ್ರ ವೃತ್ತದಲ್ಲಿ ಸುಭಾಷ್ಚಂದ್ರ ಬೋಸ್‌ರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಪಾದಯಾತ್ರೆಯ ಗೌರವಾಧ್ಯಕ್ಷರಿಗೆ ಹರೇಕಳ ಹಾಜಬ್ಬ ಅವರು ರಾಷ್ಟ್ರಧ್ವಜವನ್ನು ಹಸ್ತಾಂತರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ನಗರದ ಸವಿತಾ ಸರ್ಕಲ್ ಮಾರ್ಗವಾಗಿ ಕೋಡಿಭಾಗ್ ವರೆಗೆ ತೆರಳಿದ ಪಾದಯಾತ್ರೆ, ಅಲ್ಲಿಂದ ಹೆದ್ದಾರಿ ಮೂಲಕ ಕಾಳಿ ಸೇತುವೆ ಮೇಲೆ ಸಾಗಿತು. ಸೇತುವೆ ಬಳಿ ಲಘು ಉಪಾಹಾರವನ್ನು ಸೇವಿಸಿ ಚಿತ್ತಾಕುಲ, ಮಾಜಾಳಿ ಮಾರ್ಗವಾಗಿ ಸುಮಾರು 16 ಕಿಮೀ ನಡೆದು ಗೋವಾ ಗಡಿಯನ್ನು ತಲುಪಿತು. ಪಾದಯಾತ್ರೆಯುದ್ದಕ್ಕೂ ಚಳಿ, ಬಿಸಿಲನ್ನೂ ಲೆಕ್ಕಿಸದೇ ಪದ್ಮಶ್ರೀ ಹರೇಕಳ ಹಾಜಬ್ಬ ಅವರು ನಡೆದು ಸಾಗಿದ್ದು ವಿಶೇಷವಾಗಿತ್ತು. ಈ ವೇಳೆ ಪಹರೆ ಕಾರ್ಯದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಅವರು, ಇದೇ ರೀತಿ ಉತ್ತಮ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಸಂದೇಶ ನೀಡಿದರು.

ಮಾರ್ಗದ ಮಧ್ಯೆ ಸ್ಥಳೀಯರು ರಾಷ್ಟ್ರಧ್ವಜಕ್ಕೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಪಾದಯಾತ್ರಿಗಳನ್ನು ಹುರಿದುಂಬಿಸುವ ಕಾರ್ಯ ಮಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್, ಮಾಜಿ ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವರು ಸ್ವಚ್ಛತಾ ಪಾದಯಾತ್ರೆಯನ್ನು ಸ್ವಾಗತಿಸಿಕೊಳ್ಳುವ ಮೂಲಕ ಬೆಂಬಲ ಸೂಚಿಸಿದರು. ಸ್ವಚ್ಛತೆಯ ಕುರಿತು ಗಡಿಯಾಚೆಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಗೋವಾದ ಸಂಘ, ಸಂಸ್ಥೆಗಳನ್ನು ಗಡಿಯಲ್ಲಿ ಆಹ್ವಾನಿಸಿ ಅವರಿಗೆ ಗಿಡ ನೀಡುವ ಮೂಲಕ ಸ್ವಚ್ಛತಾ ಅಭಿಯಾನದ ಕುರಿತು ಮಾಹಿತಿ ನೀಡಲಾಯಿತು.

ಇದನ್ನೂ ಓದಿ | Viral photo: ಅದೃಷ್ಟಶಾಲಿ ಅಳಿಯ: ಮಾವನ ಮನೆಯಲ್ಲಿ 379 ಭಕ್ಷ್ಯಗಳ ಸಂಕ್ರಾಂತಿ ಊಟ!

2015ರಲ್ಲಿ ಕಾರವಾರದ ವಕೀಲ ನಾಗರಾಜ ನಾಯಕ ನೇತೃತ್ವದಲ್ಲಿ ಸಮಾನ ಮನಸ್ಕರಿಂದ ಪಹರೆ ವೇದಿಕೆ ಪ್ರಾರಂಭವಾಯಿತು. ಪ್ರತಿ ಶನಿವಾರ ಕಾರವಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿಕೊಂಡು ಬರುವ ಮೂಲಕ ಸ್ವಚ್ಛ ಕಾರವಾರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದು, ಕೇವಲ ಕಾರವಾರ ಮಾತ್ರವಲ್ಲದೇ, ಜಿಲ್ಲೆಯ ಪ್ರಮುಖ ತಾಣಗಳಿಗೂ ತೆರಳಿ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಮಾದರಿ ಕಾರ್ಯವನ್ನು ಮಂದುವರಿಸಿಕೊಂಡು ಬಂದಿದ್ದರು. ಕೆಲ ಸಮಾನಮನಸ್ಕರಿಂದ ಆರಂಭವಾದ ಪಹರೆ ವೇದಿಕೆ ಇದೀಗ ಬೇರೆ ಬೇರೆ ತಾಲೂಕುಗಳಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

Exit mobile version