Site icon Vistara News

Karwar News | ಅರಣ್ಯವಾಸಿಗಳ ಸಮಸ್ಯೆ ಬಗ್ಗೆ ನಾಳೆ ಸಿಎಂಗೆ ಮೊರೆ; ಹತ್ತು ಬೇಡಿಕೆ ಇಡಲು ನಿರ್ಧಾರ

Forest land rights activists Ravindra Naik

ಕಾರವಾರ: ಕರ್ನಾಟಕದ ಮುಖ್ಯಮಂತ್ರಿ ಜ. 15ರಂದು ಶಿರಸಿಗೆ ಆಗಮಿಸುವ ಸಂದರ್ಭದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಬಗ್ಗೆ ಹತ್ತು ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅವರು ಕಾರವಾರದ ಪತ್ರಿಕಾ ಭವನದಲ್ಲಿ ಶುಕ್ರವಾರ (ಜ.೧೩) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್‌ನಲ್ಲಿ ಅರಣ್ಯವಾಸಿಗಳ ಪರ ತಿದ್ದುಪಡಿ ಪ್ರಮಾಣ ಪತ್ರವ‌ನ್ನು ಸಲ್ಲಿಸುವುದು, 1978ರ ಪೂರ್ವ ಕೇಂದ್ರ ಸರ್ಕಾರದಿಂದ ಮಂಜೂರಿಗೆ ಶೀಫಾರಸು ಮಾಡಲಾಗಿರುವ 2,513 ಕುಟುಂಬಳಿಗೆ ಹಕ್ಕು ಪತ್ರ ನೀಡುವುದು, ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯಿಂದ ಹೆಚ್ಚುವರಿ ಅರಣ್ಯ ಪ್ರದೇಶ ಸೇರಿಸಿರುವುದು ಹಿಂದಕ್ಕೆ ಪಡೆಯುವುದು, ಅರಣ್ಯವಾಸಿಗಳ ಮೇಲೆ ಅರಣ್ಯಾಧಿಕಾರಿಗಳಿಂದ ನಿರಂತರ ಜರುಗುವ ದೌರ್ಜನ್ಯ ನಿಯಂತ್ರಿಸುವುದು, ಸರ್ಕಾರದ ಸೌಲಭ್ಯದಿಂದ ಅರಣ್ಯವಾಸಿಗಳು ವಂಚಿತರಾಗದ ರೀತಿಯಲ್ಲಿ ಸವಲತ್ತು ಒದಗಿಸುವ ಕುರಿತು ಮುಖ್ಯಮಂತ್ರಿಗೆ ನೀಡುವ ಮನವಿಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ | Samantha | ಹ್ಯಾಶ್‌ ಮತ್ತು ಸಶಾ: ತಮ್ಮ ಮುದ್ದು ನಾಯಿಗಳ ಜತೆ ಇರುವ ಫೋಟೊ ಹಂಚಿಕೊಂಡ ಸಮಂತಾ!

ಜಿಲ್ಲಾದ್ಯಂತ ಅರಣ್ಯವಾಸಿಗಳನ್ನು ಅರಣ್ಯ ಅಧಿಕಾರಿಗಳು ಕಾನೂನು ಬಾಹಿರ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಮಕ್ಷಮ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಸದರಿ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಆಗ್ರಹಿಸಲಾಗುವುದು. ಜತೆಗೆ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೋರಾಟಗಾರರ ವೇದಿಕೆಯ ಸಮಕ್ಷಮ ಉನ್ನತ ಮಟ್ಟದ ಸಮಿತಿ ರಚಿಸಲು ಮುಖ್ಯಮಂತ್ರಿಗೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.

ಅರಣ್ಯ ಹಕ್ಕು ಕಾಯಿದೆಯಲ್ಲಿ ವೈಫಲ್ಯ
ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ವೈಫಲ್ಯ, ಕಾನೂನಿಗೆ ವ್ಯತಿರಿಕ್ತವಾಗಿ ನಡೆಯುತ್ತಿರುವ ಮಂಜೂಋು ಪ್ರಕ್ರಿಯೆ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರು ಮಾಡುವ ಸಂದರ್ಭದಲ್ಲಿ ಅಸಮರ್ಪಕವಾಗಿರುವ ಜಿಪಿಎಸ್‌ ಅನ್ನು ಸರಿಪಡಿಸುವುದು ಸೇರಿದಂತೆ ಪಾರಂಪರಿಕ ಅರಣ್ಯ ವಾಸಿಗಳಿಗೆ ಸಾಂದರ್ಭಿಕ ದಾಖಲೆಗಳ ಆಧಾರದ ಮೇಲೆ ಮಂಜೂರು ಮಾಡುವುದು ಎಂಬಿತ್ಯಾದಿ ಬೇಡಿಕೆಗಳಿವೆ ಎಂದು ತಿಳಿಸಿದರು.

ಇದನ್ನೂ ಓದಿ | MV Ganga Vilas | ವಿಶ್ವದ ಅತಿ ಉದ್ದದ ರಿವರ್‌ ಕ್ರೂಸ್‌ನಲ್ಲಿ ಹೋಗಬೇಕಾ? ಮುಂದಿನ ವರ್ಷದ ಮಾರ್ಚ್‌ವರೆಗೂ ಕಾಯಬೇಕು!

ಅರಣ್ಯ ಕಾಯಿದೆ ಅನುಷ್ಠಾನಕ್ಕೆ ಗ್ರಹಣ
ಅರಣ್ಯ ಹಕ್ಕು ಕಾಯಿದೆ 2006ರಲ್ಲಿ ನಿಯಮಾವಳಿ 2008 ಜಾರಿಗೆ ಬಂದು 16 ವರ್ಷಗಳಾದರೂ, ಕರ್ನಾಟಕ ರಾಜ್ಯದಲ್ಲಿ ಮಂಜೂರಿ ಪ್ರಕ್ರಿಯೆಗೆ ಗ್ರಹಣ ಹಿಡಿದಂತಾಗಿದೆ. ದೇಶದಲ್ಲಿ ಅರಣ್ಯ ಪ್ರದೇಶ ಮತ್ತು ಅರಣ್ಯ ಅವಲಂಬಿತವಾಗಿರುವ ಅರಣ್ಯವಾಸಿಗಳ ಸಂಖ್ಯೆಯಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದ್ದರೆ, ಅರಣ್ಯ ಹಕ್ಕು ಕಾಯಿದೆ ಪ್ರಗತಿಯಲ್ಲಿ ದೇಶದಲ್ಲಿ 16ನೇ ಸ್ಥಾನದಲ್ಲಿರುವುದು ವಿಷಾದಕರವಾಗಿದೆ. ಆದ್ದರಿಂದ ಕಾಯಿದೆ ಅನುಷ್ಠಾನಕ್ಕೆ ಕಾಲಮಾನದಂಡ ನಿಗದಿಸಬೇಕೆಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

5 ವರ್ಷ 1 ಲಕ್ಷ ಮರ ಕಡಿತ; ಅವೈಜ್ಞಾನಿಕ ನೀತಿಯ ತನಿಖೆಗೆ ಆಗ್ರಹ
ಅರಣ್ಯ ಇಲಾಖೆಯು ಅರಣ್ಯ ಕ್ಷೇತ್ರದಲ್ಲಿ ಕಾಮಗಾರಿ ನೆಪದಲ್ಲಿ ಇತ್ತೀಚಿನ 5 ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮರ ಕಡಿದಿದೆ. ಈ ಕುರಿತು ಹಾಗೂ ಅರಣ್ಯ ಇಲಾಖೆಯ ಅರಣ್ಯ ಪ್ರದೇಶದಲ್ಲಿ ಜರುಗಿದ ಕಾಮಗಾರಿಯ ಬಗ್ಗೆ ವಿಶೇಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ | Actor Prabhas | ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಪ್ರಭಾಸ್‌: ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಪಠಾಣ್‌ ನಿರ್ದೇಶಕ ಸಿದ್ಧಾರ್ಥ್‌ ಆನಂದ್‌

ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ ಮಿತ್ರ ನಾಯ್ಕ ಅಂಕೋಲಾ, ಯಾಕೂಬ್ ಬೆಟ್ಕುಳಿ, ಮಂಜು ಮರಾಠಿ ಕುಮಟಾ, ಬೀಮ್ಸಿ ವಾಲ್ಮೀಕಿ ಯಲ್ಲಾಪುರ ಉಪಸ್ಥಿತರಿದ್ದರು.

ಸಿಎಂಗೆ ಸಲ್ಲಿಸುವ ಮನವಿಯಲ್ಲಿ ಪ್ರಸ್ತಾಪಿಸಲಾದ ಬೇಡಿಕೆಗಳು
-ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಮಾಣ ಪತ್ರ.
-ಅರಣ್ಯ ಹಕ್ಕು ಕಾಯಿದೆಯಲ್ಲಿ ವೈಫಲ್ಯ ಸರಿದೂಗಿಸುವುದು.
-ಅರಣ್ಯ ಅಧಿಕಾರಿಗಳ ದೌರ್ಜನ್ಯ ನಿಯಂತ್ರಿಸುವುದು.
-ಶರಾವತಿ ಅಭಯಾರಣ್ಯಕ್ಕೆ ವಿರೋಧ.
-ಅರಣ್ಯವಾಸಿಗಳು ಸೌಲಭ್ಯದಿಂದ ವಂಚಿತರಾಗದಂತೆ ನಿಯಂತ್ರಣ.
-1978 ರ ಪೂರ್ವ ಅತಿಕ್ರಮಣದಾರರ ಹಕ್ಕು ಪತ್ರ ವಿತರಣೆ.
-5 ವರ್ಷ 1 ಲಕ್ಷ ಮರ ಕಡಿತ ಅವೈಜ್ಞಾನಿಕ ನೀತಿಯ ತನಿಖೆಗೆ ಆಗ್ರಹ.
-ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಸ್ಥಗಿತ.
-ಅರಣ್ಯವಾಸಿಗಳ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ.
-ಅರಣ್ಯವಾಸಿಗಳ ಮೇಲಿನ ಕ್ರಿಮಿನಲ್ ಪ್ರಕರಣ ಹಿಂದಕ್ಕೆ ಪಡೆಯುವುದು.

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ಮೆಚ್ಚಿ ರಿಷಬ್‌ಗೆ ಪತ್ರ ಬರೆದ ಕಮಲಹಾಸನ್‌: ಪತ್ರದಲ್ಲಿ ಏನಿದೆ?

Exit mobile version