ಕಾರವಾರ: ಗ್ರಾಮೀಣ ಪ್ರದೇಶದ ಮಹಿಳೆಯರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ (Entrepreneurship) ಹಾಗೂ ಜೀವನೋಪಾಯ ಇಲಾಖೆಯಿಂದ ದೊರೆಯುವಂತಹ ಆರ್ಥಿಕ ಸೌಲಭ್ಯ ಪಡೆದುಕೊಂಡು ಸತತ ಪ್ರಯತ್ನ ಹಾಗೂ ಕಠಿಣ ಶ್ರಮವಹಿಸಿ ಸಕಾರಾತ್ಮಕ ದೃಷ್ಟಿಯಿಂದ ಸಣ್ಣಪುಟ್ಟ ಉದ್ಯಮಗಳಲ್ಲಿ ಪಾಲ್ಗೊಂಡರೆ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ ಎಂದು ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಕರೀಂ ಅಸದಿ ಎಚ್.ಎ. ಅವರು ಅಭಿಪ್ರಾಯಪಟ್ಟರು.
ಜಿಲ್ಲೆಯ ಕಾರವಾರ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಸೋಮವಾರ (ಫೆ.೨೭) ನಡೆದ ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ ಹಾಗೂ ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್. ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಫೆ. 27ರಿಂದ ಮಾ. 4ರವರೆಗೆ ಉದ್ಯಮಶೀಲತಾ ತಿಳಿವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸಾಮಾನ್ಯವಾಗಿ ಉದ್ಯಮಶೀಲತೆ ಎಂದರೆ ಬದಲಾವಣೆ, ಅಡೆತಡೆಗಳನ್ನು ಎದುರಿಸುವ ಸಾಮರ್ಥ್ಯ, ಅವಕಾಶಗಳ ಅನ್ವೇಷಣೆ, ಗುಣಮಟ್ಟದ ಸುಧಾರಣೆ, ನಿರಂತರ ಬಲವರ್ಧನೆ ಹಾಗೂ ಮಾರುಕಟ್ಟೆ ಜೋಡಣೆಯಂತಹ ಪ್ರಮುಖ ಎಲ್ಲ ಅಂಶಗಳ ಒಗ್ಗೂಡಿಸುವಿಕೆಯೇ ಉದ್ಯಮಶೀಲತೆ ಎನಿಸಿಕೊಳ್ಳುತ್ತದೆ ಎಂದರು.
ಆದರೆ ಆರ್ಥಿಕ ದೃಷ್ಟಿಯಿಂದ ಉದ್ಯಮಶೀಲತೆ ಎಂದರೆ ಅವಕಾಶಗಳನ್ನು ಗುರುತಿಸಿ, ಅದಕ್ಕೆ ಪೂರಕವಾದ ಸಂಪನ್ಮೂಲಗಳನ್ನು ಕ್ರೋಡೀಕರಿಸಿ, ಉತ್ಪಾದನೆ ಮತ್ತು ಸೇವೆಗಳನ್ನು ನೀಡುವುದಾಗಿದೆ. ಹೀಗಾಗಿ ಹಳ್ಳಿಗಾಡಿನ ಮಹಿಳೆಯರು ತಮ್ಮ ಕಾರ್ಯವ್ಯಾಪ್ತಿ ಪ್ರದೇಶದಲ್ಲಿ ಸರಿಯಾದ ಉತ್ಪನ್ನಗಳನ್ನು ಬಲವರ್ಧನೆ ಮಾಡುವ ಮುಖಾಂತರ ನಿರಂತರ ಆದಾಯ ಗಳಿಕೆಯ ದಾರಿಯನ್ನು ಕಂಡುಕೊಳ್ಳಬಹುದು. ಇದಕ್ಕಾಗಿಯೇ ಸರ್ಕಾರವು ಹೆಚ್ಚು ಹೆಚ್ಚು ಉದ್ಯಮಶೀಲತೆಯ ಅವಕಾಶಗಳ ಸೃಷ್ಟಿಗಾಗಿ ಕ್ರಮ ಕೈಗೊಳ್ಳುತ್ತಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಸಹಾಯಕ ನಿರ್ದೇಶಕರಾದ ರಜತ ಕುಮಾರ ಹಬ್ಬು ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಈ 6 ದಿನಗಳ ಉದ್ಯಮಶೀಲತಾ ತಿಳಿವಳಿಕೆ ತರಬೇತಿಯು ಪೂರಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರವಾರದ ಸಿಡಾಕ್ ಅಧಿಕಾರಿ ಶಿವಾನಂದ, ಜಿಲ್ಲಾ ಹಾಗೂ ತಾಲೂಕು ಎನ್ಆರ್‌ಎಲ್ಎಮ್ ಘಟಕದ ಅಧಿಕಾರಿಗಳು, ಸಿಬ್ಬಂದಿ ಮತ್ತು ತಾಲೂಕಿನ ಎಲ್ಲ ಗ್ರಾಮಗಳ ಸ್ವ-ಸಹಾಯ ಗುಂಪುಗಳ ಸದಸ್ಯರು ಉಪಸ್ಥಿತರಿದ್ದರು.