ಕಾರವಾರ: ದೇಶದಲ್ಲಿ ನಡೆದ ಕೆಲವೊಂದು ಘಟನೆಗಳಿಂದಾಗಿ ಭಾರತದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆಯಿಲ್ಲವೇ ಎನ್ನುವ ಪ್ರಶ್ನೆ ಮೂಡುವಂತಾಗಿದೆ. ಪ್ರತಿನಿತ್ಯ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಇತರೆ ಮಹಿಳೆಯರಿಗೆ ಆತಂಕಪಡುವಂತೆ ಮಾಡಿದೆ. ಆದರೆ ಭಾರತ ಮಹಿಳೆಯರಿಗೆ ಸುರಕ್ಷಿತವಾಗಿದೆ ಎನ್ನುವುದನ್ನು ತೋರಿಸಿಕೊಡುವ ನಿಟ್ಟಿನಲ್ಲಿ ಯುವತಿಯೊಬ್ಬಳು ಏಕಾಂಗಿಯಾಗಿ ಸೈಕಲ್ ಮೇಲೆ ದೇಶ ಪರ್ಯಟನೆಗೆ ಹೊರಟಿದ್ದಾರೆ. ಅವರ ಪಯಣ ಕಾರವಾರವನ್ನು (Karwar News) ಮುಟ್ಟಿದೆ.
ಹೀಗೆ ಸೈಕಲ್ ಏರಿ ಏಕಾಂಗಿ ಯಾತ್ರೆ ಮಾಡುತ್ತಿರುವ ಯುವತಿಯ ಹೆಸರು ಆಶಾ ಮಾಲ್ವಿ. ಮಧ್ಯಪ್ರದೇಶದ ರಾಜಗಢ ಜಿಲ್ಲೆಯವರಾದ ಈಕೆ ಭಾರತ ಮಹಿಳೆಯರಿಗೆ ಸುರಕ್ಷಿತವಾಗಿದೆ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರುವ ನಿಟ್ಟಿನಲ್ಲಿ ಸಂಪೂರ್ಣ ಭಾರತ ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ನವೆಂಬರ್ 1 ರಂದು ಮಧ್ಯಪ್ರದೇಶದ ಭೋಪಾಲ್‌ನಿಂದ ತಮ್ಮ ಯಾತ್ರೆಯನ್ನು ಆರಂಭಿಸಿದ್ದು ಬರೋಬ್ಬರಿ 20,000 ಕಿ.ಮೀ ಮಾರ್ಗವನ್ನು ಸೈಕಲ್ ಮೇಲೆ ಏಕಾಂಗಿಯಾಗಿ ಪೂರೈಸಲು ಮುಂದಾಗಿದ್ದಾರೆ.
ಈಗಾಗಲೇ ಸುಮಾರು 3,700 ಕಿ.ಮೀ ಸೈಕಲ್ ತುಳಿದು ಗೋವಾ ಮಾರ್ಗವಾಗಿ ಕರ್ನಾಟಕ ಪ್ರವೇಶಿಸಿ ಭಾನುವಾರ (ಡಿ.೧೧) ಕಾರವಾರವನ್ನು ತಲುಪಿದ್ದಾರೆ. ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಂದಾಗಿ ಮಹಿಳೆಯರಿಗೆ ದೇಶದಲ್ಲಿ ಸುರಕ್ಷತೆಯಿಲ್ಲ ಎನ್ನುವ ಅಭಿಪ್ರಾಯ ಮೂಡಿದೆ. ಈ ನಿಟ್ಟಿನಲ್ಲಿ ಏಕಾಂಗಿಯಾಗಿ ಸೈಕಲ್ ಯಾತ್ರೆಯನ್ನು ಹಮ್ಮಿಕೊಳ್ಳುವ ಮೂಲಕ ಭಾರತದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಬೇಕು ಎನ್ನುವ ಗುರಿ ಹೊಂದಿದ್ದಾಗಿ ಆಶಾ ಮಾಲ್ವಿ ತಿಳಿಸಿದ್ದಾರೆ.
ಆಶಾ ಈಗಾಗಲೇ ಮಧ್ಯಪ್ರದೇಶ, ಗುಜರಾತ್, ದಾದರ್ ಮತ್ತು ನಗರಹವೇಲಿ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ತಮ್ಮ ಸೈಕಲ್ ಯಾತ್ರೆಯನ್ನು ಪೂರ್ಣಗೊಳಿಸಿ ಇದೀಗ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಪ್ರತಿನಿತ್ಯ ಒಂದು ಸ್ಥಳಕ್ಕೆ ತೆರಳಬೇಕು ಎನ್ನುವ ಗುರಿಯನ್ನು ಹಾಕಿಕೊಂಡು ತೆರಳುವ ಆಶಾ, ಪ್ರತಿನಿತ್ಯ 70 ರಿಂದ 150 ಕಿ.ಮೀ ವರೆಗೆ ಸೈಕಲ್ ತುಳಿಯುತ್ತಾರೆ. ಬಳಿಕ ಅಲ್ಲಿನ ಯಾತ್ರಿ ನಿವಾಸಗಳಲ್ಲಿ ವಸತಿ ಮಾಡಿ ಬಳಿಕ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಾರೆ. ಅಲ್ಲದೇ ಊಟ, ತಿಂಡಿಯ ವೆಚ್ಚವನ್ನು ತಾವೇ ನೋಡಿಕೊಳ್ಳುತ್ತಿದ್ದು, ಇವರ ಯಾತ್ರೆಯನ್ನು ನೋಡಿ ಸಾಕಷ್ಟು ಜನರು ಧನ ಸಹಾಯವನ್ನು ಸಹ ಮಾಡಿದ್ದಾರೆ.
ತಾವು ತೆರಳುವ ಪ್ರದೇಶಗಳಲ್ಲಿ ಶಾಲೆ, ಕಾಲೇಜುಗಳಿಗೆ ಭೇಟಿ ನೀಡುವ ಆಶಾ ಮಾಲ್ವಿ, ಭಾರತದಲ್ಲಿ ಮಹಿಳೆಯರಿಗೆ ಸುರಕ್ಷತೆಯಿಲ್ಲ ಎನ್ನುವುದು ಬೇರೆ ದೇಶಗಳ ಅಭಿಪ್ರಾಯವಾಗಿದೆ. ಆದರೆ, ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದು ಮಹಿಳೆಯರ ರಕ್ಷಣೆಯ ಕಾಳಜಿಯನ್ನು ಭಾರತ ಹೊಂದಿದೆ ಎನ್ನುವ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮಾರ್ಗಮಧ್ಯೆ ಸಿಗುವ ಜನ ಸಾಮಾನ್ಯರಿಗೂ ಮಹಿಳೆಯರ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುತ್ತಾ ಸೈಕಲ್ ಯಾತ್ರೆಯನ್ನು ಮುಂದುವರಿಸುತ್ತಿದ್ದಾರೆ.
ಇದನ್ನೂ ಓದಿ | Mayank Agarwal | ಗಂಡು ಮಗುವಿನ ತಂದೆಯಾದ ಮಯಾಂಕ್ ಅಗರ್ವಾಲ್; ಟೀಮ್ ಇಂಡಿಯಾ ಆಟಗಾರರಿಂದ ಶುಭ ಹಾರೈಕೆ
ಕಾರವಾರಕ್ಕೆ ಆಗಮಿಸಿದ ಅವರನ್ನು ಇಲ್ಲಿನ ತಹಸೀಲ್ದಾರ್ ನಿಶ್ಚಲ ನರೋನಾ ಭೇಟಿಯಾಗಿ ಅಭಿನಂದಿಸಿದರು. ಯುವತಿಯೊಬ್ಬಳು ಏಕಾಂಗಿಯಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಾತ್ರೆ ಮಾಡುತ್ತಿರುವುದು ಶ್ಲಾಘನೀಯವಾಗಿದ್ದು ಅವರ ಯಾತ್ರೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಬೇರೆ ಬೇರೆ ರಾಜ್ಯಗಳಿಗೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಸಹ ಭೇಟಿಯಾಗುತ್ತಾರೆ. ಅವರಿಗೆ ತಮ್ಮ ಉದ್ದೇಶವನ್ನು ತಿಳಿಸಿ ಅವರ ಅಭಿಪ್ರಾಯವನ್ನು ಪಡೆದುಕೊಂಡು ಮುಂದೆ ಸಾಗುತ್ತಿದ್ದು, ತಮ್ಮ ಯಾತ್ರೆಯನ್ನು ದೆಹಲಿಯಲ್ಲಿ ಪೂರ್ಣಗೊಳಿಸಲಿದ್ದಾರೆ. ತಮ್ಮ ಯಾತ್ರೆ ಪೂರ್ಣಗೊಳ್ಳುವ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮೊಂದಿಗೆ ಭಾಗಿಯಾಗುವಂತೆ ಆಶಾ ಮಾಲ್ವಿ ಮನವಿ ಮಾಡಿದ್ದಾರೆ. ಸದ್ಯ ಕಾರವಾರದಿಂದ ಹೊರಟಿರುವ ಅವರು ಅಂಕೋಲಾ, ಮುರ್ಡೇಶ್ವರ ಮಾರ್ಗವಾಗಿ ಕರಾವಳಿಯಲ್ಲಿ ಸಂಚರಿಸಿ ಉಡುಪಿ, ಮಂಗಳೂರು ಮೂಲಕ ಕೇರಳಕ್ಕೆ ತೆರಳಲಿದ್ದಾರೆ.
ಇದನ್ನೂ ಓದಿ | Mining mafia | ಗಣಿಗಾರಿಕೆಯ ಗಡಿ ವಿವಾದಕ್ಕೆ 14 ವರ್ಷಗಳ ಬಳಿಕ ಬೀಳುತ್ತಾ ತೆರೆ? ಸರ್ವೆ ನಡೆಸಲು ಸೂಚನೆ