ಕಾರವಾರ: ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆಯೊಂದು ಮೃತಪಟ್ಟಿರುವ ಘಟನೆ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಬೆಟ್ಕುಳಿ ಗ್ರಾಮದ ಬಳಿ ನಡೆದಿದೆ.
ಸುಮಾರು 8 ವರ್ಷ ಪ್ರಾಯದ ಗಂಡು ಚಿರತೆ ಹೆದ್ದಾರಿ ನಡುವಿನ ಡಿವೈಡರ್ ಬಳಿ ಸತ್ತು ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಚಿರತೆಯು ಹೆದ್ದಾರಿ ದಾಟಲು ಆಗಮಿಸಿದ್ದ ವೇಳೆ ಯಾವುದೋ ಭಾರಿ ವಾಹನ ಡಿಕ್ಕಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಡಿಕ್ಕಿಯ ರಭಸಕ್ಕೆ ಚಿರತೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಮೃತ ಚಿರತೆಯ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು.
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಚಿರತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಮಟಾಕ್ಕೆ ರವಾನಿಸಿದ್ದಾರೆ. ರಾತ್ರಿ ವೇಳೆ ಅಥವಾ ಬೆಳಗಿನ ಜಾವದಲ್ಲಿ ಈ ಅಪಘಾತ ನಡೆದಿರಬಹುದೆಂದು ಅಂದಾಜಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ.
ಇದನ್ನೂ ಓದಿ | Tiger Safari : ಸಫಾರಿಯಲ್ಲಿ ಕಂಡವು ನಾಲ್ಕು ಹುಲಿ; ಪ್ರವಾಸಿಗರಿಗೆ ರೋಮಾಂಚನ ತಂದ ಹುಲಿಗಳ ದರ್ಶನ