Site icon Vistara News

Karwar News: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಕಳಪೆ ಊಟ: ತಟ್ಟೆ ಹಿಡಿದು ರಸ್ತೆ ಬದಿ ಕುಳಿತು ಪ್ರತಿಭಟಿಸಿದ ವಿದ್ಯಾರ್ಥಿಗಳು

Hostel students social welfare department's hostel karwar

#image_title

ಕಾರವಾರ: ಕಳಪೆ ಊಟ ನೀಡಲಾಗುತ್ತಿದೆ ಎಂದು ಆರೋಪಿಸಿ ಹಾಸ್ಟೆಲ್ ವಿದ್ಯಾರ್ಥಿಗಳು (Hostel students) ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ನಗರದ ಬಾಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಹಾಗೂ ಪದವಿಪೂರ್ವ ಹಾಸ್ಟೆಲ್‌ನ ಕೆಲ ವಿದ್ಯಾರ್ಥಿಗಳು ಊಟದ ತಟ್ಟೆ ಹಿಡಿದು ರಸ್ತೆ ಬದಿ ಕೂರುವ ಮೂಲಕ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿ ನಿಲಯದಲ್ಲಿ 5 ರಿಂದ 10 ನೇ ತರಗತಿಯ 80 ವಿದ್ಯಾರ್ಥಿಗಳಿದ್ದು, ಪ್ರತಿ ದಿನ ನೀಡುವ ಆಹಾರ ಕಳಪೆ ಮಟ್ಟದ್ದಾಗಿದ್ದು, ಊಟದಲ್ಲಿ ನೀಡುವ ಮೀನನ್ನು ಸಹ ಶುಚಿಗೊಳಿಸದೇ ನೀಡುತ್ತಿದ್ದಾರೆ. ಈ ಬಗ್ಗೆ ವಾರ್ಡನ್‌ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಮ್ಮನ್ನೇ ಥಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ಡಿಡಿ ಅಜ್ಜಯ್ಯ ಅವರು ವಿದ್ಯಾರ್ಥಿಗಳ ದೂರನ್ನು ಆಲಿಸಿದರು. ಈ ವೇಳೆ ಊಟದ ತಟ್ಟೆಯನ್ನು ಪರಿಶೀಲಿಸಿದ್ದು ಊಟಕ್ಕೆ ಹಾಕಲಾಗಿದ್ದ ಮೀನು ಸ್ವಚ್ಛವಾಗಿಲ್ಲದಿರುವುದು ಕಂಡುಬಂದಿದೆ. ಜತೆಗೆ ಹಾಸ್ಟೆಲ್‌ನ ಆಹಾರ ಸಾಮಗ್ರಿ ಕೊಠಡಿ ಹಾಗೂ ಶೌಚಾಲಯಗಳನ್ನು ಅಧಿಕಾರಿ ಪರಿಶೀಲಿಸಿದ್ದು, ಅಡುಗೆ ಸಿಬ್ಬಂದಿ ಹಾಗೂ ವಾರ್ಡನ್‌ನನ್ನು ತರಾಟೆಗೆ ತೆಗೆದುಕೊಂಡರು. ಒಂದು ವಾರದಲ್ಲಿ ವಸತಿನಿಲಯದ ಸಮಸ್ಯೆಗಳನ್ನು ಪರಿಹರಿಸಿ, ಸಮರ್ಪಕ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದು, ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದರು.

ಇದನ್ನೂ ಓದಿ: Anant Nag: ಹಿರಿಯ ನಟ ಅನಂತ್‌ ನಾಗ್‌ ಇಂದು ಬಿಜೆಪಿ ಸೇರ್ಪಡೆ

ಕೆಲ ವಿದ್ಯಾರ್ಥಿಗಳು ಮಾತ್ರ ಊಟದ ಕುರಿತು ದೂರು ಹೇಳಿಕೊಂಡಿದ್ದು, ಇತರೆ ವಿದ್ಯಾರ್ಥಿಗಳು ಯಾವುದೇ ಆರೋಪ ಮಾಡಿಲ್ಲ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಸಮಾಜ ಕಲ್ಯಾಣ ಅಧಿಕಾರಿ ಅಜ್ಜಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ: Actress Kajol : ‘ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾ ರಿಮೇಕ್ ಮಾಡೋದಕ್ಕೆ ನೋ ಎಂದ ನಟಿ ಕಾಜೋಲ್

Exit mobile version