ಕಾರವಾರ: “ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರ ಬಳಿ ಕ್ಷೇತ್ರದ ಜನ ಮಾತನಾಡಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ನಿರ್ಮಿಸಿ ಕೊಡಿ ಎಂದು ಅಳಲು ತೋಡಿಕೊಂಡವರ ಬಳಿ ಗೂಂಡಾಗಿರಿ, ಅಸಭ್ಯ ವರ್ತನೆ ಮೂಲಕ ಅವರ ದರ್ಪವನ್ನು ತೋರಿಸುತ್ತಿದ್ದು, ಈ ಬಾರಿ ಮತದಾರರು ಜಾಗೃತರಾಗಬೇಕಿದೆ” ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಹೇಳಿದರು.
ತಾಲೂಕಿನ ಮಾರುಕೇರಿಯ ಕಿತ್ರೆಯಲ್ಲಿ ಬುಧವಾರ (ಫೆ.೧೫) ನಡೆದ ಕಾಂಗ್ರೆಸ್‌ನ ಜನಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, “ಕಳೆದ ಸಲದ ಚುನಾವಣೆಯಲ್ಲಿ ಪರೇಶ್ ಮೇಸ್ತ ಸಾವು, ಮಾಗೋಡ ಪ್ರಕರಣ ಸೇರಿದಂತೆ ಧಾರ್ಮಿಕವಾಗಿಯೂ ನನ್ನ ಮೇಲೆ ನಿರಂತರ ಅಪಪ್ರಚಾರ ಮಾಡಿದ್ದರು. ಆದರೆ ಈ ಸಲ ಬಿಜೆಪಿಗೆ ಕ್ಷೇತ್ರದಲ್ಲಿ ಗೆಲ್ಲಲು ಯಾವುದೇ ವಿಷಯ ಇಲ್ಲವಾಗಿದೆ. ಡಬ್ಬಲ್ ಇಂಜಿನ್ ಸರ್ಕಾರ ಹೊಂದಿರುವ ಬಿಜೆಪಿ ಕ್ಷೇತ್ರದಲ್ಲಿ ನಾನು ತಂದಿದ್ದ 1500 ಕೋಟಿ ರೂ. ಅನುದಾನಕ್ಕಿಂತ ಹೆಚ್ಚು ಅಂದರೆ 3 ಸಾವಿರ ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಮಾಡಬೇಕಿತ್ತು. ನಾನು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 7 ಸಾವಿರ ಮನೆ ನಿರ್ಮಿಸಿದ್ದು, ಕ್ಷೇತ್ರದಲ್ಲಿ ಸರ್ಕಾರದಿಂದ ಒಂದೇ ಒಂದು ಮನೆ ಬಂದಿಲ್ಲ. ಭಟ್ಕಳ ಶಾಸಕರಿಗೆ ಅಭಿವೃದ್ಧಿ ಎಂದಿಗೂ ಬೇಡ. ಅವರದ್ದೇನಿದ್ದರೂ ಲೂಟಿ, ಭ್ರಷ್ಟಾಚಾರ, ದಾದಾಗಿರಿ ಮಾಡುವುದು, ಕಮಿಷನ್ ಹೊಡೆಯುವುದು ಆಗಿದೆ” ಎಂದು ಆರೋಪಿಸಿದರು.
ಇದನ್ನೂ ಓದಿ: Karnataka Election: ಯಾರಿಗೂ ಹಣ ಕೊಡದೇ 6 ಬಾರಿ ಎಂಎಲ್‌ಎ ಆಗಿದ್ದೆ: ಎಂ.ವೀರಪ್ಪ ಮೊಯ್ಲಿ
“ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ರಾಜಾಂಗಣ ನಾಗಬನದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ 7.50 ಲಕ್ಷ ರೂ. ಮಂಜೂರು ಮಾಡಿಸಿಕೊಂಡು ಬಂದಿದ್ದೆ. ಆದರೆ, ಅಂದು ನಾಗಬನದ 3.12 ಗುಂಟೆ ಜಾಗವಿದ್ದು, ಇದಕ್ಕೆ ಕಾಂಪೌಂಡ್ ನಿರ್ಮಿಸಿ ಜೀರ್ಣೋದ್ಧಾರ ಮಾಡಬೇಕು ಎಂದು ಪಟ್ಟುಹಿಡಿದಿದ್ದರು. ಆದರೆ, ಇದೀಗ ನಾಗಬನ ಇದ್ದ ಜಾಗದಲ್ಲೇ ಹಿಂದೆ ಮಂಜೂರಾದ 7.50 ಲಕ್ಷ ರೂಪಾಯಿ ಅನುದಾನದಲ್ಲೇ ಜೀರ್ಣೋದ್ಧಾರ ಮಾಡಲಾಗಿದೆ. ದೇವಸ್ಥಾನಕ್ಕೆ ಸಂಬಂಧಿಸಿದ 3.12 ಗುಂಟೆ ಜಾಗ ಏನಾಯಿತು? ಹಿಂದುತ್ವದ ಕುರಿತು ಮಾತನಾಡುವ ಇವರು ದೇವಸ್ಥಾನದ ಜಾಗ ಕಬಳಿಸಿದವರಿಂದ ಹಿಂಪಡೆಯಲು ಹಿಂಜರಿದ್ದು ಏಕೆ? ಕೇಂದ್ರ ಮತ್ತು ರಾಜ್ಯದಲ್ಲೂ ತಮ್ಮದೇ ಸರ್ಕಾರವಿದ್ದರೂ ದೇವಸ್ಥಾನದ ಜಾಗ ಉಳಿಸಲು ಸಾಧ್ಯವಾಗಲಿಲ್ಲ ಎನ್ನುವುದು ದುರ್ದೈವ” ಎಂದರು.
ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ವಿಠಲ್ ನಾಯ್ಕ, ಮುಖಂಡರಾದ ಶ್ರೀಕಂಠ ಹೆಬ್ಬಾರ, ಮಾರುಕೇರಿ ಗ್ರಾ.ಪಂ. ಅಧ್ಯಕ್ಷ ಮಾಸ್ತಿ ಗೊಂಡ, ಗ್ರಾ.ಪಂ. ಸದಸ್ಯೆ ಮೋಹಿನಿ ಗೊಂಡ, ಸದಾಶಿವ ಹೆಗಡೆ ಮಾತನಾಡಿ, “ಮಂಕಾಳ ವೈದ್ಯರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯದ ಬಗ್ಗೆ ತಿಳಿಸಿ ಮತ್ತೊಮ್ಮೆ ಅವರನ್ನು ಗೆಲ್ಲಿಸಬೇಕು” ಎಂದು ಕೋರಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ಗ್ರಾ.ಪಂ. ಉಪಾಧ್ಯಕ್ಷೆ ನಾಗವೇಣಿ ಗೊಂಡ, ಗೊಂಡ ಸಮಾಜದ ಮುಖಂಡ ಗಣಪಯ್ಯ ಗೊಂಡ, ಕರಿಯಾ ಗೊಂಡ, ಗಣಪತಿ ಗೊಂಡ, ಲಕ್ಷ್ಮಣ ದೇಶಭಂಡಾರಿ, ಚಂದು ಮರಾಠಿ ಮುಂತಾದವರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ನಿರೂಪಿಸಿದರು. ಮಂಜುನಾಥ ಗೊಂಡ ಸ್ವಾಗತಿಸಿದರು.